ನಿವೃತ್ತಿ ಘೋಷಿಸಿದ ಭಾರತ ಕ್ರಿಕೆಟ್ ತಂಡದ ನಾಯಕಿಗೆ ನೆಟ್ಟಿಗರ ಪ್ರತಿಕ್ರಿಯೆ

Public TV
3 Min Read

ಮುಂಬೈ: ಭಾರತ ಮಹಿಳಾ ಕ್ರಿಕೆಟ್ ತಂಡದ ಮಾಜಿ ನಾಯಕಿ ಮಿಥಾಲಿ ರಾಜ್ ಬುಧವಾರ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ.

12 ಟೆಸ್ಟ್, 232 ಒಡಿಐ ಹಾಗೂ 89 ಟಿ20 ಪಂದ್ಯಗಳನ್ನು ಆಡಿರುವ ಮಿಥಾಲಿ, ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ 10,000 ಕ್ಕೂ ಹೆಚ್ಚು ರನ್ ಗಳಿಸಿದರು. ತಮ್ಮ ನಿವೃತ್ತಿಯ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಹೇಳಿಕೊಂಡ ಮಿಥಾಲಿ, ನಾನು ದೇಶಕ್ಕಾಗಿ 23 ವರ್ಷ ಆಡಿದ್ದೇನೆ. ಹಲವು ಏಳು ಬೀಳುಗಳನ್ನು ಕಂಡಿದ್ದೇನೆ. ತಂಡದ ಗೆಲುವಿಗಾಗಿ ಶ್ರಮಿಸಿದ್ದೇನೆ. ಈ ಸುಂದರ ನೆನಪುಗಳೊಂದಿಗೆ ಇಂದು ನಾನು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸುತ್ತಿದ್ದೇನೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಅಂತಾರಾಷ್ಟ್ರೀಯ ಕ್ರಿಕೆಟ್‍ಗೆ ವಿದಾಯ ಘೋಷಿಸಿದ ಮಿಥಾಲಿ ರಾಜ್

ಮಿಥಾಲಿ ತಮ್ಮ ದಿಢೀರ್ ನಿವೃತ್ತಿ ಬಗ್ಗೆ ತಿಳಿಸುತ್ತಿದ್ದಂತೆ ಅಭಿಮಾನಿಗಳು ಹಾಗೂ ನೆಟ್ಟಿಗರು ಅವರ ಸಾಧನೆ ಹಾಗೂ ದೇಶಕ್ಕಾಗಿ ಶ್ರಮಿಸಿದ ಬಗ್ಗೆ ಮೆಲುಕು ಹಾಕಿದ್ದಾರೆ. ಮಾತ್ರವಲ್ಲದೇ ತುಂಬು ಹೃದಯದಿಂದ ಮಿಥಾಲಿಗೆ ಜೈಕಾರದೊಂದಿಗೆ ವಿದಾಯ ಹೇಳಿದ್ದಾರೆ.

ಮಿಥಾಲಿ ನಿವೃತ್ತಿಗೆ ಪ್ರತಿಕ್ರಿಯಿಸಿದ ಬಿಸಿಸಿಐ, ಭಾರತೀಯ ಕ್ರಿಕೆಟ್‌ಗೆ ನಿಮ್ಮ ಕೊಡುಗೆ ಅದ್ಭುತ. ಈ ಶ್ರೀಮಂತ ಪರಂಪರೆಯನ್ನು ಬಿಟ್ಟು ಹೋಗುತ್ತಿರುವ ನಿಮಗೆ ನಿಮ್ಮ 2ನೇ ಇನ್ನಿಂಗ್ಸ್‌ಗಾಗಿ ಶುಭ ಹಾರೈಸುತ್ತೇವೆ ಎಂದು ತಿಳಿಸಿದೆ.

ಅದ್ಭುತ ಜೀವನ ಕೊನೆಗೊಂಡಿತು! ಭಾರತೀಯ ಕ್ರಿಕೆಟ್‌ಗೆ ಮಿಥಾಲಿ ರಾಜ್ ನೀಡಿರುವ ಕೊಡುಗೆಗೆ ಧನ್ಯವಾದಗಳು. ರಾಷ್ಟ್ರೀಯ ಮಹಿಳಾ ಕ್ರಿಕೆಟ್ ತಂಡಕ್ಕೆ ನಿಮ್ಮ ನಾಯಕತ್ವ ಹೆಚ್ಚಿನ ಕೀರ್ತಿ ತಂದು ಕೊಟ್ಟಿದೆ. ಮೈದಾನದ ಅದ್ಭುತ ಇನ್ನಿಂಗ್ಸ್‌ಗೆ ಅಭಿನಂದನೆಗಳು. ನಿಮ್ಮ ಮುಂದಿನ ಇನ್ನಿಂಗ್ಸ್‌ಗೆ ಶುಭಾಶಯಗಳು ಎಂದು ಟ್ವಿಟ್ಟರ್‌ನಲ್ಲಿ ಜೈ ಶಶ್ ಬರೆದಿದ್ದಾರೆ. ಇದನ್ನೂ ಓದಿ: ಇನ್‍ಸ್ಟಾಗ್ರಾಮ್‍ನಲ್ಲಿ ದಾಖಲೆ ಬರೆದ ವಿರಾಟ್ ಕೊಹ್ಲಿ

ಮಹಿಳಾ ಕ್ರಿಕೆಟ್ ಇತಿಹಾಸವನ್ನು ಮತ್ತೆ ಬರೆದ, ದಾಖಲೆಗಳನ್ನು ಹೊತ್ತ ವೃತ್ತಿ ಜೀವನದೊಂದಿಗೆ ನಿಮ್ಮ ವಿದಾಯವನ್ನು ನಂಬಲಾಗುತ್ತಿಲ್ಲ. ಮಿಥಿಲಾ ರಾಜ್, ನಿಮ್ಮ ಕ್ರಿಕೆಟ್ ರಂಗದ ಎಲ್ಲಾ ನೆನಪುಗಳಿಗೂ ಧನ್ಯವಾದ ಎಂದು ಸನ್ ರೈಸರ್ಸ್ ಹೈದರಾಬಾದ್ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಬರೆಯಲಾಗಿದೆ.

ಭಾರತ ತಂಡದಲ್ಲಿ ಆಡುವುದೇ ಕೆಲವರ ಕನಸಾಗಿರುತ್ತದೆ. ಆದರೆ 23 ವರ್ಷಗಳ ಕಾಲ ದೇಶವನ್ನು ಪ್ರತಿನಿಧಿಸಿ ಆಡಿರುವ ಮಿಥಾಲಿಯವರ ಸಾಮರ್ಥ್ಯ ಅದ್ಭುತವಾಗಿದೆ. ನೀವು ಭಾರತ ಮಹಿಳಾ ಕ್ರಿಕೆಟ್‌ನ ಆಧಾರ ಸ್ತಂಭವಾಗಿದ್ದೀರಿ. ಅನೇಕ ಯುವತಿಯರ ಜೀವನವನ್ನೂ ರೂಪಿಸಿದ್ದೀರಿ. ನಿಮ್ಮ ಅದ್ಭುತ ಜೀವನಕ್ಕೆ ಅಭಿನಂದನೆ ಎಂದು ವಿವಿಎಸ್ ಲಕ್ಷ್ಮಣ್ ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *