ಕೇದಾರನಾಥಕ್ಕೆ ತೆರಳುತ್ತಿದ್ದ ಹೆಲಿಕಾಪ್ಟರ್ ಪತನ – ಪೈಲೆಟ್, ಮಗು ಸೇರಿ 6 ಮಂದಿ ಸಜೀವ ದಹನ

By
1 Min Read

ಡೆಹ್ರಾಡೂನ್: ಕೇದಾರನಾಥಕ್ಕೆ (Kedarnath) ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಉತ್ತರಾಖಂಡದ (Uttarakhand) ಗೌರಿಕುಂಡ (Gaurikund) ಬಳಿ ಪತನಗೊಂಡಿದ್ದು, ಪೈಲೆಟ್, ಮಗು ಸೇರಿ ಹೆಲಿಕಾಪ್ಟರ್‌ನಲ್ಲಿದ್ದ 6 ಮಂದಿ ಸಾವನ್ನಪ್ಪಿದ್ದಾರೆ.

ಹೆಲಿಕಾಪ್ಟರ್ ಪತನಗೊಳ್ಳುವ ಮೊದಲು ತ್ರಿಜುಗಿನಾರಾಯಣ ಮತ್ತು ಗೌರಿಕುಂಡ ನಡುವೆ ಸಂಪರ್ಕ ಕಡಿತಗೊಂಡು ನಾಪತ್ತೆಯಾಗಿತ್ತು ಎಂದು ಹೆಚ್ಚುವರಿ ಮಹಾನಿರ್ದೇಶಕ (ಕಾನೂನು ಮತ್ತು ಸುವ್ಯವಸ್ಥೆ) ಡಾ. ವಿ. ಮುರುಗೇಶನ್ ತಿಳಿಸಿದ್ದಾರೆ. ರಕ್ಷಣಾ ತಂಡಗಳು ಸ್ಥಳಕ್ಕೆ ಧಾವಿಸಿದ್ದು, ಕಾರ್ಯಾಚರಣೆ ನಡೆಸುತ್ತಿದೆ.

ಹವಾಮಾನ ವೈಪರೀತ್ಯದದಿಂದ ಘಟನೆ ನಡೆದಿರುವ ಸಾಧ್ಯತೆ ಇದೆ ಎಂದು ಪೊಲೀಸರು ಶಂಕಿಸಿದ್ದಾರೆ. ರುದ್ರಪ್ರಯಾಗ್ ಜಿಲ್ಲೆಯಲ್ಲಿ ಬೆಳಗಿನ ಜಾವ 5:20ರ ಸುಮಾರಿಗೆ ಘಟನೆ ಸಂಭವಿಸಿದ್ದು, ಹೆಲಿಕಾಪ್ಟರ್ ಹೊತ್ತಿ ಉರಿದಿದೆ.

ಘಟನೆ ಸಂಬಂಧ ಕಮೀಷನರ್ ವಿನಯ್ ಶಂಕರ್ ಪಾಂಡೆ ಪ್ರತಿಕ್ರಿಯಿಸಿ, ಹೆಲಿಕ್ಯಾಪ್ಟರ್ ದುರಂತದಲ್ಲಿ ಯಾರೊಬ್ಬರೂ ಬದುಕುಳಿದಿಲ್ಲ. ಪೈಲಟ್ ಚೌಹನ್, ಒಂದು ಮಗು ಸೇರಿ ಆರು ಮಂದಿ ಮೃತಪಟ್ಟಿದ್ದಾರೆ. ಕೇದಾರನಾಥ್ ದೇವಸ್ಥಾನ ಸಮಿತಿಯ ಸದಸ್ಯರೊಬ್ಬರು ಕೂಡ ಇದೇ ಹೆಲಿಕಾಪ್ಟರ್‌ನಲ್ಲಿ ಇದ್ದರು. ಈ ಹೆಲಿಕಾಪ್ಟರ್ ಆರ್ಯನ್ ಕಂಪನಿಗೆ ಸೇರಿದೆ ಎಂದು ತಿಳಿಸಿದ್ದಾರೆ.

ಹೆಲಿಕಾಪ್ಟರ್ ದುರಂತದ ಬಗ್ಗೆ ಉತ್ತರಾಖಂಡ ಸಿಎಂ ಪುಷ್ಕರ್ ಸಿಂಗ್ ಧಾಮಿ ಎಕ್ಸ್‌ನಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ. ಈ ಘಟನೆ ನೋವು ತರಿಸಿದೆ. ಸ್ಥಳೀಯ ರಕ್ಷಣಾ ತಂಡಗಳು, ಸ್ಥಳಿಯ ಆಡಳಿತಗಳಿಂದ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ ಎಂದು ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.

Share This Article