ಬೆಂಗಳೂರು: ಪೊಲೀಸ್ ಠಾಣೆ ಎದುರಲ್ಲಿ ನಿಲ್ಲಿಸಿದ್ದ ವಾಹನಗಳಿಗೆ ಕಿಡಿಗೇಡಿಗಳು ಬೆಂಕಿ ಇಟ್ಟಿರುವ ಘಟನೆ ಬೆಂಗಳೂರಿನ ಜೆಸಿ ನಗರದಲ್ಲಿ ನಡೆದಿದೆ.
ಗುರುವಾರ ಜೆಸಿ ನಗರ ಪೊಲೀಸ್ ಠಾಣೆಯ ಕೂಗಳತೆಯ ದೂರದಲ್ಲಿ ಎರಡು ಕಾರು ಮತ್ತು ಒಂದು ಆಟೋವನ್ನು ಪಾರ್ಕ್ ಮಾಡಲಾಗಿತ್ತು. ಸಂಜೆ ಕಿಡಿಗೇಡಿಗಳು ಕಾರು ಮತ್ತು ಆಟೋಗೆ ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ. ಪರಿಣಾಮ ಒಂದು ಕಾರು ಮತ್ತು ಒಂದು ಆಟೋ ಸಂಪೂರ್ಣವಾಗಿ ಭಸ್ಮವಾಗಿವೆ.
ಘಟನೆ ಬಗ್ಗೆ ಮಾಹಿತಿ ತಿಳಿದ ಅಗ್ನಿಶಾಮಕ ಸಿಬ್ಬಂದಿ ಕೂಡಲೇ ಸ್ಥಳಕ್ಕೆ ಬಂದು ಬೆಂಕಿ ನಂದಿಸಿ, ಪಕ್ಕದಲ್ಲಿ ನಿಲ್ಲಿಸಲಾಗಿದ್ದ ಬೇರೆ ವಾಹನಗಳಿಗೆ ವ್ಯಾಪಿಸುತ್ತಿದ್ದ ಬೆಂಕಿಯನ್ನು ನಿಯಂತ್ರಿಸಿದ್ದಾರೆ.
ಈ ಕುರಿತು ಜೆಸಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.