ಹಾಸನ | 2 ಕೋಟಿಗೂ ಹೆಚ್ಚಿನ ಅನುದಾನ ದುರುಪಯೋಗ – ನೋಡಲ್ ಅಧಿಕಾರಿ ವಿರುದ್ಧ ಕೇಸ್‌ ದಾಖಲು

Public TV
2 Min Read

ಹಾಸನ: ಪಿಎಂಎವೈ ವಸತಿ ಯೋಜನೆಯ (PMAY Housing Scheme) 2 ಕೋಟಿ ರೂ.ಗೂ ಹೆಚ್ಚಿನ ಅನುದಾನವನ್ನು ಜಿಲ್ಲಾ ವಸತಿ ನೋಡಲ್ ಅಧಿಕಾರಿ ದುರುಪಯೋಗಪಡಿಸಿಕೊಂಡ ಆರೋಪ ಸಕಲೇಶಪುರದಲ್ಲಿ (Sakleshpura) ಕೇಳಿಬಂದಿದೆ.

ಸಕಲೇಶಪುರ ಜಿಲ್ಲಾ ಪಂಚಾಯಿತಿಯ ವಸತಿ ನೋಡಲ್ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಕೆ.ಎಂ.ರಾಜೇಶ್ ವಿರುದ್ಧ ಈ ಆರೋಪ ಕೇಳಿಬಂದಿದೆ. 2022 ರವರೆಗೆ ಸಕಲೇಶಪುರ ತಾಲೂಕು ಪಂಚಾಯಿತಿಯಲ್ಲಿ ವಸತಿ ನೋಡಲ್ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ರಾಜೇಶ್ ಬಳಿಕ ಜಿಲ್ಲಾ ವಸತಿ ನೋಡಲ್ ಅಧಿಕಾರಿಯಾಗಿ (ಹೆಚ್ಚುವರಿ ಪ್ರಚಾರ) ಕರ್ತವ್ಯ ನಿರ್ವಹಿಸುತ್ತಿದ್ದರು. ಈ ಅವಧಿಯಲ್ಲಿ ಅಕ್ರಮ ಎಸಗಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಸಂಸಾರದಲ್ಲಿ ಹುಳಿ ಹಿಂಡಿದ ಬ್ಯೂಟಿ ಪಾರ್ಲರ್ ಆಂಟಿ – ಗೃಹಿಣಿ ಅನುಮಾನಾಸ್ಪದ ಸಾವು; ಕೊಲೆ ಆರೋಪ

ಯೋಜನೆಗಳ ಫಲಾನುಭವಿಗಳು ಮನೆ ನಿರ್ಮಾಣ ಮಾಡಿಕೊಂಡ ಬಗ್ಗೆ ಪಿಡಿಓ ತೆಗೆದ ಫೋಟೋವನ್ನು ತಾಲೂಕು ಪಂಚಾಯಿತಿ ವಸತಿ ನೋಡಲ್ ಅಧಿಕಾರಿ ಪರಿಶೀಲಿಸಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗೆ ಲಿಖಿತವಾಗಿ ಗಮನಕ್ಕೆ ತರಬೇಕು. ನಂತರ ಜಿಲ್ಲಾ ಪಂಚಾಯಿತಿ ಲಾಗಿನ್‍ಗೆ ಕಳುಹಿಸಬೇಕು. ಅದೇ ರೀತಿ ತಾಲೂಕು ಪಂಚಾಯಿತಿ ಲಾಗಿನ್ ನಿರ್ವಹಣೆಯನ್ನು ಲಿಖಿತವಾಗಿ ತರುವುದು ಮತ್ತು ನಿರ್ವಹಣೆ ಮಾಡುವುದು ವಸತಿ ನೋಡಲ್ ಅಧಿಕಾರಿಯ ಪ್ರಮುಖ ಕರ್ತವ್ಯವಾಗಿದೆ. ಈ ಯಾವುದನ್ನು ಮೇಲಾಧಿಕಾರಿಗಳ ಗಮನಕ್ಕೆ ತರದೆ ದುರುದ್ದೇಶ ಪೂರ್ವಕವಾಗಿ ಎರಡು ಲಾಗಿನ್‍ಗಳನ್ನು ದುರ್ಬಳಕೆ ಮಾಡಿಕೊಂಡು ಸರ್ಕಾರದ ಹಣ ದುರುಪಯೋಗ ಪಡಿಸಿಕೊಂಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಯೋಜನೆಯ ಫಲಾನುಭವಿಗಳಿಗೆ ಬಿಡುಗಡೆಯಾದ ಅನುದಾನದಲ್ಲಿ ಸಕಲೇಶಪುರ ತಾಲೂಕು ಪಂಚಾಯಿತಿಯ ವಸತಿ ಲಾಗಿನ್ ಹಾಗೂ ಜಿಲ್ಲಾ ಪಂಚಾಯಿತಿ ಯೋಜನಾಧಿಕಾರಿ ಲಾಗಿನ್ ದುರ್ಬಳಕೆ ಮಾಡಿಕೊಳ್ಳಲಾಗಿದೆ. ಸುಮಾರು 190ಕ್ಕೂ ಹೆಚ್ಚು ಫಲಾನುಭವಿಗಳ ಅಂದಾಜು 2 ಕೋಟಿ ರೂ.ಗೂ ಹೆಚ್ಚು ಸರ್ಕಾರದ ಅನುದಾನವನ್ನು ಅರ್ಹ ಫಲಾನುಭವಿಗಳ ಖಾತೆಗೆ ಜಮೆ ಮಾಡುವ ಬದಲು ಅವರ ಬೇರೊಂದು ತಾಲೂಕಿನ ವಿವಿಧ ಖಾತೆದಾರರಿಗೆ ಜಮೆ ಮಾಡಲಾಗಿದೆ. ಈ ರೀತಿ ಹಣಕಾಸು ಅವ್ಯವಹಾರ ಮಾಡಲಾಗಿದೆ.

ಲಾಗಿನ್ ನಿರ್ವಹಣೆ ಬಗ್ಗೆ ನೀಡಿದ ನಿರ್ದೇಶನವನ್ನು ಪಾಲಿಸದೇ ಉದ್ದೇಶ ಪೂರ್ವಕವಾಗಿ ಲಾಗಿನ್ ನಲ್ಲಿ ಇರಬೇಕಾದ ಅಧಿಕಾರಿಗಳ ದೂರವಾಣಿ ಸಂಖ್ಯೆ ಮತ್ತು ಇ-ಮೇಲ್ ಬದಲಾಗಿ ತನ್ನ ಸ್ವಂತ ವೈಯುಕ್ತಿಕ ಮೊಬೈಲ್ ಸಂಖ್ಯೆ ನಮೂದಿಸಿಕೊಂಡಿದ್ದಾರೆ. ಈ ಕಾರಣದಿಂದ ಯಾವುದೇ ಮಾಹಿತಿಗಳು ಮೇಲಾಧಿಕಾರಿಗಳಗೆ ಲಭ್ಯವಾಗದ ಕಾರಣ ಲಾಗಿನ್‍ಗಳಲ್ಲಿ ನಡೆಯುತ್ತಿರುವ ಬದಲಾವಣೆಗಳು ಯಾರ ಗಮನಕ್ಕೆ ಬಂದಿರಲಿಲ್ಲ ಎನ್ನಲಾಗಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಸಕಲೇಶಪುರ ನಗರ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: Ramanagara | ಅಕ್ರಮ ಗ್ಯಾಸ್ ರೀಫಿಲ್ಲಿಂಗ್ ಅಡ್ಡೆ ಮೇಲೆ ದಾಳಿ – ಇಬ್ಬರ ಮೇಲೆ ಪ್ರಕರಣ ದಾಖಲು

Share This Article