ಹೈದರಾಬಾದ್: ಮಹಿಳೆಯೊಬ್ಬರ ಸ್ನಾನದ ವಿಡಿಯೋಗಳನ್ನು ಅಪ್ರಾಪ್ತ ಹುಡುಗ ರೆಕಾರ್ಡ್ ಮಾಡಿಕೊಂಡಿದ್ದು, ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿರುವ ಘಟನೆ ತೆಲಂಗಾಣದ ಚಂದ್ರಯಾನಗುಟ್ಟದಲ್ಲಿ ನಡೆದಿದೆ.
ಚತ್ರಿನಾಕಾ ಪೊಲೀಸರು ಅಪ್ರಾಪ್ತ ಹುಡುಗನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಸಂತ್ರಸ್ತೆಗೆ ಈಗಾಗಲೇ ಮದುವೆಯಾಗಿದ್ದು, ಅವರು ಜಗ್ಗಾಂಪೇಟದಲ್ಲಿರುವ ಆರ್‍ಎನ್ ಕಾಲೋನಿಯಲ್ಲಿ ವಾಸಿಸುತ್ತಿದ್ದರು. 16 ವರ್ಷದ ಹುಡುಗ ಕೂಡ ಅದೇ ಕಾಲೋನಿಯಲ್ಲಿ ವಾಸಿಸುತ್ತಿದ್ದನು. ಆದರೆ ಅಪ್ರಾಪ್ತ ಹುಡುಗ ತನ್ನ ಮೊಬೈಲ್ ನಲ್ಲಿ ಕಳೆದ 20 ದಿನಗಳಿಂದ ಮಹಿಳೆ ಸ್ನಾನ ಮಾಡುತ್ತಿದ್ದುದ್ದನ್ನು ಕದ್ದು ರೆಕಾರ್ಡ್ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಹುಡುಗ ಮಹಿಳೆಯ ವಿಡಿಯೋ ರೆಕಾರ್ಡ್ ಮಾಡಿಕೊಂಡ ಬಳಿಕ ಅದನ್ನು ತನ್ನ ಸ್ನೇಹಿತನಿಗೆ ಕಳುಹಿಸಿದ್ದಾನೆ. ನಂತರ ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದಾನೆ. ಮಹಿಳೆಗೆ ಹುಡುಗನ ಬಗ್ಗೆ ತಿಳಿದಿದ್ದು, ತಕ್ಷಣ ಮಾರ್ಚ್ 16ರಂದು ಚತ್ರಿನಾಕಾ ಪೊಲೀಸ್ ಠಾಣೆಗೆ ಹೋಗಿ ದೂರು ದಾಖಲಿಸಿದ್ದಾರೆ. ಆದರೆ ದೂರು ದಾಖಲಿಸಿದರೂ ಪೊಲೀಸರು ಯಾವುದೇ ಕ್ರಮ ಕೈಗೊಳ್ಳಲಿಲ್ಲ.
ಇದರಿಂದ ನೊಂದ ಮಹಿಳೆ ಚತ್ರಿನಾಕಾ ಪೊಲೀಸ್ ಠಾಣೆಯ ಎದುರು ಸೀಮೆಎಣ್ಣೆ ಸುರಿದು ಆತ್ಮಹತ್ಯೆಗೆ ಮುಂದಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸರು ಹುಡುಗನನ್ನು ಬಂಧಿಸಿ ಸೂಕ್ತಕ್ರಮ ಕೈಗೊಳ್ಳುವುದಾಗಿ ಭರವಸೆ ಕೊಟ್ಟು ಮಹಿಳೆಯನ್ನು ಸಮಾಧಾನ ಮಾಡಿದ್ದಾರೆ. ಸದ್ಯಕ್ಕೆ ಪೊಲೀಸರು ಹುಡುಗನನ್ನು ವಶಕ್ಕೆ ಪಡೆದ ಈ ಕುರಿತು ತನಿಖೆ ಮುಂದುವರಿಸಿದ್ದಾರೆ.