ಎಲ್‍ಕೆ ಅಡ್ವಾಣಿ ರೀತಿಯಲ್ಲಿ ಡೈರಿಯಲ್ಲಿ ಹೆಸರಿರುವವರು ರಾಜೀನಾಮೆ ನೀಡ್ಬೇಕು – ಅಮೀನ್ ಮಟ್ಟು

Public TV
2 Min Read

ಬೆಂಗಳೂರು: ಎಲ್‍ಕೆ ಅಡ್ವಾಣಿ ರೀತಿಯಲ್ಲೇ ಡೈರಿಯಲ್ಲಿ ಹೆಸರಿರುವ ಸಚಿವರು ರಾಜೀನಾಮೆ ನೀಡಬೇಕು ಎಂದು ಸಿಎಂ ಮಾಧ್ಯಮ ಸಲಹೆಗಾರ ದಿನೇಶ್ ಅಮೀನ್ ಮಟ್ಟು ಅಭಿಪ್ರಾಯಪಟ್ಟಿದ್ದಾರೆ.

ಈ ಬಗ್ಗೆ ತಮ್ಮ ಫೆಸ್‍ಬುಕ್ ಅಕೌಂಟ್‍ನಲ್ಲಿ ಪೋಸ್ಟ್ ಮಾಡಿರೋ ಅಮೀನ್ ಮಟ್ಟು, ಈ ಹಿಂದೆ ಹವಾಲಾ ಹಣ ಸ್ವೀಕರಿಸಿದವರ ಪಟ್ಟಿಯಲ್ಲಿ `ಎಲ್ ಕೆ ಎನ್’ ಎನ್ನುವ ಇನಿಷಿಯಲ್ ಇರುವುದು ಬಹಿರಂಗವಾಗಿ, ಅದು ಲಾಲ್ ಕೃಷ್ಣ ಅಡ್ವಾಣಿಯವರೇ ಎಂದು ಪ್ರಚಾರವಾಗತೊಡಗಿದಾಗ ನೊಂದುಕೊಂಡ ಅಡ್ವಾಣಿಯವರು ಅದೇ ದಿನ ಸಂಜೆ ಲೋಕಸಭಾ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಸಹಾರಾ-ಬಿರ್ಲಾ ಡೈರಿಯಲ್ಲಿ `ಗುಜರಾತ್ ಸಿಎಂ’ ಮಧ್ಯಪ್ರದೇಶ ಸಿಎಂ, ಚತ್ತೀಸ್ ಗಡ ಸಿಎಂ’ ಡೆಲ್ಲಿ ಸಿಎಂ ಅವರಿಗೆ ಹಣ ನೀಡಲಾದ ಎಂಟ್ರಿಗಳಿವೆಯಂತೆ. ಡೈರಿ ಹಾವಳಿ ಅತಿಯಾಯಿತು. ಇದನ್ನು ಕೊನೆಗೊಳಿಸಬೇಕಾದರೆ ಸನ್ಮಾನ್ಯ ನರೇಂದ್ರಮೋದಿಯವರು ತಮ್ಮದೇ ಪಕ್ಷದ ಮಾರ್ಗದರ್ಶಕ ಮಂಡಳಿಯ ಹಿರಿಯ ಸದಸ್ಯರಾದ ಎಲ್.ಕೆ.ಅಡ್ವಾಣಿಯವರ ಮಾದರಿಯನ್ನು ಅನುಸರಿಸಿ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಅದರ ನಂತರ ಗೋವಿಂದರಾಜ್ ಅವರದ್ದೆನ್ನಲಾದ ಡೈರಿಯಲ್ಲಿರುವ ಹೆಸರಿನ ಎಲ್ಲ ರಾಜಕಾರಣಿಗಳು ಕ್ಷಣಮಾತ್ರವೂ ಸಮಯ ವ್ಯರ್ಥಮಾಡದೆ ರಾಜೀನಾಮೆ ಎಸೆದುಬಿಡಬೇಕು ಎಂದಿದ್ದಾರೆ.

ಈ ಮಧ್ಯೆ ಇಂದು ಕಾಂಗ್ರೆಸ್ ಸಮನ್ವಯ ಸಮಿತಿ ಸಭೆ ನಡೆಯಲಿದ್ದು 4 ವರ್ಷ ಪೂರೈಸಿದ ಹಿರಿಯ ಸಚಿವರಿಗೆ ಸಂಪುಟದಿಂದ ಗೇಟ್‍ಪಾಸ್ ನೀಡೋ ನಿರೀಕ್ಷೆ ಇದೆ.

ಅಮೀನ್ ಮಟ್ಟು ಫೇಸ್‍ಬುಕ್ ಪೋಸ್ಟ್ ನಲ್ಲಿ ಈ ರೀತಿ ಹೇಳಿದ್ದಾರೆ:

ಕಳೆದ ಕೆಲವು ವರ್ಷಗಳಿಂದ ಈ ಸಿಕ್ರೇಟ್ ಡೈರಿಗಳ ಬಗ್ಗೆ ಪತ್ರಿಕೆಗಳಲ್ಲಿ ವರದಿಯಾಗುತ್ತಲೇ ಇದೆ. ಜೈನ್ ಹವಾಲಾ ಡೈರಿ, ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಯು.ವಿ.ಸಿಂಗ್ ನೀಡಿದ ತನಿಖಾ ವರದಿಯಲ್ಲಿನ ಖಾರದಪುಡಿ ಮಹೇಶ್ ಡೈರಿ, ಇತ್ತೀಚೆಗೆ ಸಹರಾ ಮತ್ತು ಬಿರ್ಲಾ ಕಂಪೆನಿಗಳ ಕಚೇರಿಯಲ್ಲಿ ಸಿಕ್ಕಿದೆಯೆನ್ನಲಾದ ಡೈರಿ, ಇದೀಗ ಎಂಎಲ್‍ಸಿ ಗೋವಿಂದರಾಜ್ ಮನೆಯಲ್ಲಿ ವಶಪಡಿಸಿಕೊಳ್ಳಲಾಗಿದೆಯೆನ್ನಲಾದ ಡೈರಿ.
ಜೈನ್-ಹವಾಲಾ ಡೈರಿಯಲ್ಲಿನ ಆರೋಪಿಗಳೆಲ್ಲರನ್ನೂ ಸುಪ್ರೀಂಕೋರ್ಟ್ ಖುಲಾಸೆಗೊಳಿಸಿದೆ. ಸಹಾರಾ-ಬಿರ್ಲಾ ಕಂಪೆನಿಗಳ ಡೈರಿ ಬಗ್ಗೆ ವಿಚಾರಣೆಯನ್ನು ಸುಪ್ರೀಂಕೋರ್ಟ್ ತಳ್ಳಿಹಾಕಿದೆ. ಈಗ ಉಳಿದಿರುವುದು ನೈತಿಕತೆಯ ಆಧಾರದ ಪಾಪ ಪ್ರಾಯಶ್ಚಿತ. ಇದು ಹೇಗೆ ಎನ್ನುವುದು ಪ್ರಶ್ನೆ. ನೈತಿಕತೆಯ ಆಧಾರದ ಪಾಪ ಪ್ರಾಯಶ್ಚಿತಕ್ಕೆ ಸಂಬಂಧಿಸಿದಂತೆ ಬಿಜೆಪಿಯ ಹಿರಿಯ ನಾಯಕ ಲಾಲ್ ಕೃಷ್ಣ ಅಡ್ವಾಣಿ ಅವರು ಪಾಲಿಸಿದ ರಾಜಧರ್ಮದ ಮಾರ್ಗವೊಂದಿದೆ. ಇದು ಸರಿಯಾದ ಮಾರ್ಗ ಎಂದೆನಿಸುತ್ತದೆ. ಹವಾಲಾ ಹಣ ಸ್ವೀಕರಿಸಿದವರ ಪಟ್ಟಿಯಲ್ಲಿ `ಎಲ್ ಕೆ ಎನ್’ ಎನ್ನುವ ಇನಿಷಿಯಲ್ ಇರುವುದು ಬಹಿರಂಗವಾಗಿ, ಅದು ಲಾಲ್ ಕೃಷ್ಣ ಅಡ್ವಾಣಿಯವರೇ ಎಂದು ಪ್ರಚಾರವಾಗತೊಡಗಿದಾಗ ನೊಂದುಕೊಂಡ ಅಡ್ವಾಣಿಯವರು ಅದೇ ದಿನ ಸಂಜೆ ಲೋಕಸಭಾ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

`ರಾಜಕೀಯದಲ್ಲಿ ವಿಶ್ವಾಸಾರ್ಹತೆ ಮುಖ್ಯ, ಅಧಿಕಾರ ಅಲ್ಲ. ಈ ಆರೋಪದಿಂದ ಮುಕ್ತವಾಗುವವರೆಗೆ ಲೋಕಸಭೆ ಪ್ರವೇಶಿಸುವುದಿಲ್ಲ’ ಎಂದು ಅವರು ಶಪಥ ಮಾಡಿದ್ದರು. ಅನಂತರ ಡೈರಿಯಲ್ಲಿ ಹೆಸರಿದ್ದ ಅನೇಕ ರಾಜಕಾರಣಿಗಳು ಕೂಡಾ ರಾಜೀನಾಮೆ ನೀಡಬೇಕಾಯಿತು. ನೈತಿಕ ನಿಲುವುಗಳು ಮೇಲಿನಿಂದ ಕೆಳಕ್ಕೆ ಇಳಿದು ಬರಬೇಕು. ಈಗ ಚೆಂಡು ಸನ್ಮಾನ್ಯ ಪ್ರಧಾನಿ ನರೇಂದ್ರಮೋದಿಯವರ ಮನೆಯಂಗಳದಲ್ಲಿದೆ. ಸಹಾರಾ-ಬಿರ್ಲಾ ಡೈರಿಯಲ್ಲಿ `ಗುಜರಾತ್ ಸಿಎಂ’ ಮಧ್ಯಪ್ರದೇಶ ಸಿಎಂ, ಚತ್ತೀಸ್ ಗಡ ಸಿಎಂ’ ಡೆಲ್ಲಿ ಸಿಎಂ ಅವರಿಗೆ ಹಣ ನೀಡಲಾದ ಎಂಟ್ರಿಗಳಿವೆಯಂತೆ. ಡೈರಿ ಹಾವಳಿ ಅತಿಯಾಯಿತು. ಇದನ್ನು ಕೊನೆಗೊಳಿಸಬೇಕಾದರೆ ಸನ್ಮಾನ್ಯ ನರೇಂದ್ರಮೋದಿಯವರು ತಮ್ಮದೇ ಪಕ್ಷದ ಮಾರ್ಗದರ್ಶಕ ಮಂಡಳಿಯ ಹಿರಿಯ ಸದಸ್ಯರಾದ ಎಲ್.ಕೆ.ಅಡ್ವಾಣಿಯವರ ಮಾದರಿಯನ್ನು ಅನುಸರಿಸಿ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಅದರ ನಂತರ ಗೋವಿಂದರಾಜ್ ಅವರದ್ದೆನ್ನಲಾದ ಡೈರಿಯಲ್ಲಿರುವ ಹೆಸರಿನ ಎಲ್ಲ ರಾಜಕಾರಣಿಗಳು ಕ್ಷಣಮಾತ್ರವೂ ಸಮಯ ವ್ಯರ್ಥಮಾಡದೆ ರಾಜೀನಾಮೆ ಎಸೆದುಬಿಡಬೇಕು.

Share This Article
Leave a Comment

Leave a Reply

Your email address will not be published. Required fields are marked *