ಸಚಿವ ಜಮೀರ್ ಅಕ್ರಮ ಆಸ್ತಿ ಗಳಿಕೆ ಕೇಸ್ – ದಿನೇಶ್ ಗುಂಡೂರಾವ್‌ಗೆ ಲೋಕಾಯುಕ್ತ ನೋಟಿಸ್

Public TV
2 Min Read

ಬೆಂಗಳೂರು: ಸಚಿವ ಜಮೀರ್ ಅಹ್ಮದ್ (Zameer Ahmed) ಅಕ್ರಮ ಆಸ್ತಿ ಸಂಪಾದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್‌ಗೆ (Dinesh Gundurao) ಲೋಕಾಯುಕ್ತ ಪೊಲೀಸರು (Lokayuktha Police) ನೋಟಿಸ್ ನೀಡಿದ್ದಾರೆ.

ಲೋಕಾಯುಕ್ತ ಪೊಲೀಸರು, ಸಚಿವ ಜಮೀರ್ ಜೊತೆಗೆ ಕಳೆದ 3-4 ವರ್ಷಗಳಿಂದ ಆರ್ಥಿಕ ವ್ಯವಹಾರ ಹೊಂದಿದ್ದ ದಿನೇಶ್ ಗುಂಡೂರಾವ್‌ಗೆ ನೋಟಿಸ್ ನೀಡಿದ್ದು, ದಾಖಲೆ ಸಮೇತ ವಿಚಾರಣೆಗೆ ಹಾಜರಾಗಲು ತಿಳಿಸಿದ್ದಾರೆ. ನೋಟಿಸ್ ಬೆನ್ನಲ್ಲೇ ದಿನೇಶ್ ಗುಂಡೂರಾವ್ ದಾಖಲೆ ಕ್ರೋಢೀಕರಿಸಲು ಕಾಲಾವಕಾಶ ಕೋರಿದ್ದಾರೆ.ಇದನ್ನೂ ಓದಿ: ಸಚಿವ ಜಮೀರ್ ಅಕ್ರಮ ಆಸ್ತಿ ಗಳಿಕೆ ಪ್ರಕರಣ – ಕೆಜಿಎಫ್ ಬಾಬುಗೆ ಲೋಕಾಯುಕ್ತ ನೋಟಿಸ್

ಇದಕ್ಕೂ ಮುನ್ನ ಸಚಿವ ಜಮೀರ್ ಅಹ್ಮದ್‌ಗೆ 2.5 ಕೋಟಿ ರೂ. ನೀಡಿದ್ದ ವಿಚಾರವಾಗಿ ರಾಧಿಕಾ ಕುಮಾರಸ್ವಾಮಿ ಅವರಿಗೆ ಲೋಕಾಯುಕ್ತ ಪೊಲೀಸರು ನೋಟಿಸ್ ನೀಡಿದ್ದರು. ಈ ಪ್ರಕರಣದಲ್ಲಿ ಈಗಾಗಲೇ ರಾಧಿಕಾ ಕುಮಾರಸ್ವಾಮಿ ಹಾಗೂ ಗುಜರಿ ಬಾಬು ವಿಚಾರಣೆ ನಡೆಸಲಾಗಿದೆ.

ಏನಿದು ಪ್ರಕರಣ?
2019ರಲ್ಲಿ ಐ ಮಾನಿಟರಿ ಅಡ್ವೈಸರಿ ಕಂಪನಿಯ ಬಹುಕೋಟಿ ವಂಚನೆ ಹಗರಣ ಬೆಳಕಿಗೆ ಬಂದಿತ್ತು. ಈ ವಂಚಕ ಕಂಪನಿ ಜೊತೆ ನಂಟು ಹೊಂದಿದ್ದ ಆರೋಪದ ಮೇರೆಗೆ ಜಮೀರ್ ಅಹಮದ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ED) ದಾಳಿ ನಡೆಸಿತ್ತು.

ಇಡಿ ವರದಿಯ ಅನ್ವಯ ಆಗ ಮೈತ್ರಿ ಸರ್ಕಾರದಲ್ಲಿ ಸಚಿವರಾಗಿದ್ದ ಜಮೀರ್ ವಿರುದ್ಧ ಅಕ್ರಮ ಆಸ್ತಿ ಸಂಪಾದನೆ ಆರೋಪದಡಿ ಅಂದು ಅಸ್ತಿತ್ವದಲ್ಲಿದ್ದ ಭ್ರಷ್ಟಾಚಾರ ನಿಗ್ರಹ ದಳವು (ಎಸಿಬಿ) ಪ್ರಕರಣ ದಾಖಲಿಸಿತ್ತು. ಎಸಿಬಿ ರದ್ದಾದ ಬಳಿಕ ಈ ಪ್ರಕರಣ ತನಿಖೆಯೂ ಲೋಕಾಯುಕ್ತ ಪೊಲೀಸರಿಗೆ ವರ್ಗವಾಗಿತ್ತು. ಈಗ ಸಚಿವರ ವಿರುದ್ಧ ಅಕ್ರಮ ಆಸ್ತಿ ಸಂಪಾದನೆ ಬಗ್ಗೆ ಲೋಕಾಯುಕ್ತ ಪೊಲೀಸರು ತನಿಖೆ ನಡೆಸುತ್ತಿದ್ದು, ಹಲವರ ವಿಚಾರಣೆ ನಡೆಸುತ್ತಿದ್ದಾರೆ.

ನಾನು ಯಾರ ಬಳಿ ಸಾಲ ಪಡೆದಿದ್ದೇನೆ ಎನ್ನುವುದರ ಬಗ್ಗೆ ಜಮೀರ್ ಲೋಕಾಯುಕ್ತ ಪೊಲೀಸರಿಗೆ ಲಿಖಿತವಾಗಿ ಪಟ್ಟಿ ನೀಡಿದ್ದರು. ಈ ಪಟ್ಟಿಯಲ್ಲಿ ರಾಧಿಕಾ ಕುಮಾರಸ್ವಾಮಿ ಬಳಿಯಿಂದ 2.5 ಕೋಟಿ ರೂ. ಸಾಲ ಪಡೆದಿರುವ ವಿಚಾರವನ್ನು ಹಂಚಿಕೊಂಡಿದ್ದರು.

ವಿಚಾರಣೆ ಸಂದರ್ಭದಲ್ಲಿ, ನಾನು 2012ರಲ್ಲಿ ಶಮಿಕಾ ಎಂಟರ್‌ಪ್ರೈಸಸ್ ಹೆಸರಿನಲ್ಲಿ ಯಶ್ ಹಾಗೂ ರಮ್ಯಾ ಅಭಿನಯದ ಲಕ್ಕಿ ಸಿನಿಮಾ ನಿರ್ಮಾಣ ಮಾಡಿದ್ದೆ. ಮನರಂಜನಾ ಚಾನೆಲ್‌ಗಳಿಗೆ ಈ ಸಿನಿಮಾದ ಸ್ಯಾಟಲೈಟ್ ಹಕ್ಕು ಹಾಗೂ ಚಲನಚಿತ್ರದ ಯಶಸ್ವಿನಿಂದ ಸಂಪಾದಿಸಿದ ಹಣದಲ್ಲಿ ಆರ್ಥಿಕ ಸಂಕಷ್ಟದಲ್ಲಿದ್ದ ಜಮೀರ್ ಅಹ್ಮದ್ ಅವರಿಗೆ 2.5 ಕೋಟಿ ರೂಗಳನ್ನು ಸಾಲವಾಗಿ ನೀಡಿದ್ದೆ ಎಂದು ರಾಧಿಕಾ ತಿಳಿಸಿರುವ ವಿಚಾರ ಮೂಲಗಳಿಂದ ತಿಳಿದು ಬಂದಿತ್ತು.ಇದನ್ನೂ ಓದಿ: ಅಕ್ರಮ ಆಸ್ತಿ ಗಳಿಕೆ ಪ್ರಕರಣ – ಸಚಿವ ಜಮೀರ್‌ ಅಹ್ಮದ್‌ಗೆ ಲೋಕಾಯುಕ್ತ ನೋಟಿಸ್‌

Share This Article