ದಸರಾ ಕ್ರೀಡಾಪಟುಗಳ ನಗದು ಬಹುಮಾನ ವಿಳಂಬ- ಒಂದೇ ದಿನದಲ್ಲಿ ಸಚಿವ ಸೋಮಣ್ಣ ಇತ್ಯರ್ಥ

Public TV
1 Min Read

ಮೈಸೂರು: ದಸರಾ ಮುಗಿದು ಮೂರು ತಿಂಗಳು ಕಳೆಯುತ್ತಾ ಬಂದಿದೆ. ಆದರೂ ದಸರಾ ಕ್ರೀಡಾಕೂಟದಲ್ಲಿ ಗೆದ್ದ ಕ್ರೀಡಾಪಟುಗಳಿಗೆ ನಗದು ಬಹುಮಾನ ನೀಡಲು ವಿಳಂಬ ಮಾಡಿದ್ದ ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ಬೆವರಳಿಸಿದ ಕೆಲವೇ ಗಂಟೆಗಳಲ್ಲಿ ಪ್ರಶಸ್ತಿಯ ನಗದು ಹಣ ಬಿಡುಗಡೆಯಾಗಿದೆ.

ದಸರಾ ಕ್ರೀಡಾಕೂಟದಲ್ಲಿ ಭಾಗವಹಿಸಿ ವಿಜೇತರಾಗಿದ್ದ ಕ್ರೀಡಾಪಟುಗಳಿಗೆ ಬಹುಮಾನದ ಹಣವನ್ನು ಈವರೆಗೆ ಬಿಡುಗಡೆ ಮಾಡಿರಲಿಲ್ಲ. ಶುಕ್ರವಾರ ಬೆಳಗ್ಗೆ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಸರ್ಕಾರಿ ನೌಕರರ ಕ್ರೀಡಾಕೂಟ ಉದ್ಘಾಟನೆಗೆ ಆಗಮಿಸಿದ್ದ ಸಚಿವರ ಗಮನಕ್ಕೆ ಈ ವಿಷಯ ಬಂತು. ಬಹುಮಾನ ಹಣ ಪಾವತಿಸಲು ವಿಳಂಬ ಮಾಡಿದ್ದ ಅಧಿಕಾರಿಗಳಿಗೆ ಸ್ಥಳದಲ್ಲೇ ತರಾಟೆ ತೆಗೆದುಕೊಂಡಿದ್ದು, ಸಚಿವರು ತಕ್ಷಣ ಸಮಸ್ಯೆ ಇತ್ಯರ್ಥ ಆಗಬೇಕು ಎಂದು ತಾಕೀತು ಮಾಡಿದರು.

ಅಷ್ಟೇ ಅಲ್ಲದೇ ಈ ಸಮಸ್ಯೆ ಇತ್ಯರ್ಥಕ್ಕೆ ಬೇಕಾದ 54 ಲಕ್ಷ ರೂ. ಅನುದಾನವನ್ನು ಸಚಿವರು ಸಂಜೆಯೊಳಗೆ ಬಿಡುಗಡೆ ಮಾಡಿಸಿದ್ದಾರೆ. ದಸರಾ ಕ್ರೀಡಾಕೂಟದ 1,451 ವಿಜೇತರಿಗೆ ಬಹುಮಾನ ಹಣವನ್ನು ನೀಡಬೇಕಾಗಿತ್ತು. ಈ ಪೈಕಿ 726 ವೈಯಕ್ತಿಕ ಬಹುಮಾನಗಳು ಹಾಗೂ 725 ಗುಂಪು ಸ್ಪರ್ಧೆ ಬಹುಮಾನಗಳು ಸೇರಿವೆ. ಈ ಎಲ್ಲರ ಬ್ಯಾಂಕ್ ಖಾತೆಗೆ ಈಗ ಹಣ ವರ್ಗಾವಣೆ ಆಗುತ್ತಿದೆ.

ಎಲ್ಲಾ ಬಹುಮಾನದ ಹಣವನ್ನು ಆರ್.ಟಿ.ಜಿ.ಎಸ್. ಮೂಲಕ ಫಲಾನುಭವಿಗಳ ಖಾತೆಗೆ ಕೂಡಲೇ ವರ್ಗಾಯಿಸಲಾಗುವುದು. ಕ್ರೀಡಾಪಟುಗಳು ಆತಂಕಪಡಬೇಕಿಲ್ಲ ಎಂದು ಸಚಿವರು ಭರವಸೆ ನೀಡಿದ್ದಾರೆ. ಕ್ರೀಡಾಕೂಟಕ್ಕೆ ಊಟೋಪಚಾರ ಸರಬರಾಜು ಮಾಡಿದವರಿಗೂ ಬಿಲ್ ಬಾಕಿ ಇದ್ದು, ಅದನ್ನೂ ಕೂಡ ಕೂಡಲೇ ಪಾವತಿಸಲಾಗುತ್ತದೆ ಎಂದು ಸಚಿವರು ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *