ನವದೆಹಲಿ: ಶಾಸಕ ರೋಷನ್ ಬೇಗ್ ಹೇಳಿಕೆ ನೋವು ತಂದಿದೆ. ಅವರು ಕಾಂಗ್ರೆಸ್‍ನ ಹಿರಿಯ ಸದಸ್ಯರಾಗಿದ್ದು, ಈ ರೀತಿ ಮಾತನಾಡೋದು ಸರಿಯಲ್ಲ. ಯುವ ಅಧ್ಯಕ್ಷರಿಗೆ ಎಲ್ಲರೂ ಸಹಕಾರ ಕೊಡಬೇಕು ಎಂದು ಸಚಿವ ಯು.ಟಿ ಖಾದರ್ ಬೇಸರ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿದ ಅವರು, ರೋಷನ್ ಬೇಗ್ ಅವರ ಹೇಳಿಕೆ ಅಚ್ಚರಿಯಾಗಿದೆ. ಸಿದ್ದರಾಮಯ್ಯ, ದಿನೇಶ್ ಗುಂಡೂರಾವ್ ಬಗ್ಗೆ ಮಾತನಾಡಿರುವುದು ಅತ್ಯಂತ ನೋವು ತಂದಿದೆ. ಈ ಹೇಳಿಕೆ ಬಗ್ಗೆ ನಾವು ಚರ್ಚೆ ಮಾಡುತ್ತೇವೆ. ಹಿರಿಯರ ಮಾರ್ಗದರ್ಶನದಲ್ಲಿ ದಿನೇಶ್ ಗುಂಡೂರಾವ್ ಸಮರ್ಥವಾಗಿ ಕೆಲಸ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಎಲ್ಲ ವರ್ಗಕ್ಕೂ ನ್ಯಾಯ ಒದಗಿಸುವ ಕೆಲಸ ಮಾಡಿದ್ದಾರೆ. ರೋಷನ್ ಬೇಗ್‍ಗೆ ವೈಯಕ್ತಿಕ ನೋವು ಇರಬಹುದು. ಅದನ್ನ ಬಗೆಹರಿಸುವ ಕೆಲಸ ಪಕ್ಷ ಮಾಡುತ್ತದೆ ಎಂದು ಅವರು ಅಭಿಪ್ರಾಯಿಸಿದ್ದಾರೆ.
ರೋಷನ್ ಬೇಗ್ ಹೇಳಿಕೆ ಬಗ್ಗೆ ಜನರು ಯೋಚನೆ ಮಾಡುತ್ತಾರೆ. ಸಂವಿಧಾನದ ಪ್ರಕಾರ ಅಲ್ಪಸಂಖ್ಯಾತರಿಗೆ ಸಿಗುವ ಎಲ್ಲ ಸವಲತ್ತು ಕಾಂಗ್ರೆಸ್ ಅಲ್ಲದೆ ಇನ್ಯಾರಿಗೂ ಒದಗಿಸಿಲ್ಲ. ಮುಸ್ಲಿಂ ಎಲ್ಲ ನಾಯಕರ ಒಪ್ಪಿಗೆ ಮೇರೆಗೆ ರಾಜ್ಯದಲ್ಲಿ ಒಂದೇ ಟಿಕೆಟ್ ನೀಡಿದೆ. ಈ ವೇಳೆ ರೋಷನ್ ಬೇಗ್ ದೆಹಲಿಯಲ್ಲಿ ಇದ್ದರು. ಕಾಂಗ್ರೆಸ್ ಹಿಂದೆಯೂ ಮುಸ್ಲಿಂ ನಾಯಕರನ್ನ ಪರಿಗಣಿಸಿದೆ. ಮುಂದೆಯೂ ಮುಸ್ಲಿಮರನ್ನು ಪರಿಗಣಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ರೋಷನ್ ಬೇಗ್ ಆಪರೇಷನ್ ಕಮಲಕ್ಕೆ ಒಳಗಾಗುವ ವ್ಯಕ್ತಿ ಅಲ್ಲ. ಅವರಿಗೆ ಮಾನಸಿಕವಾಗಿ ಕಷ್ಟ ಕೊಟ್ಟು ಜೈಲಿಗೆ ಕಳಿಸಿದ್ದು ಬಿಜೆಪಿ. ಅವರ ಕಷ್ಟ ಕಾಲದಲ್ಲಿ ಕೈ ಹಿಡಿದಿದ್ದು ಕಾಂಗ್ರೆಸ್. ಹಾಗಾಗಿ ಅವರು ಯಾವುದೇ ಕಾರಣಕ್ಕೂ ಬಿಜೆಪಿ ಸೇರುವುದಿಲ್ಲ ಎಂದು ತಿಳಿಸಿದರು.
ಮೈತ್ರಿ ಸರ್ಕಾರದಿಂದ ಯಾವುದೇ ನಷ್ಟ ಕಾಂಗ್ರೆಸ್ಸಿಗೆ ಆಗಿಲ್ಲ. ನಾವೆಲ್ಲರೂ ಒಗ್ಗಟ್ಟಾಗಿ ಇದ್ದೇವೆ. ಮೈತ್ರಿ ಸರ್ಕಾರದಿಂದ ಸೀಟು ಕಡಿಮೆಯಾಗಿಲ್ಲ. ಇನ್ನೊಂದು ದಿನದಲ್ಲಿ ಫಲಿತಾಂಶ ಹೊರಬೀಳಿಲಿದ್ದು ಮೈತ್ರಿಗೆ ಉತ್ತಮ ಬೆಂಬಲ ಸಿಗುವ ನೀರಿಕ್ಷೆ ಇದೆ. ಫಲಿತಾಂಶಕ್ಕೂ ಮುನ್ನ ರೋಷನ್ ಬೇಗ್ ಹೀಗೆ ಮಾತನಾಡಿರುವುದು ಸರಿಯಲ್ಲ. ವೈಯಕ್ತಿಕವಾಗಿ ಅವರ ಮೇಲೆ ಅಪಾರ ಗೌರವವಿದೆ ಎಂದು ಹೇಳಿದರು.