ಯುಟಿ ಖಾದರ್ ಜೊತೆ ದೀಪಕ್ ಹತ್ಯೆಯ ಆರೋಪಿ ಕುಳಿತಿರುವ ಫೋಟೋ ವೈರಲ್

Public TV
2 Min Read

ಮಂಗಳೂರು: ದೀಪಕ್ ಹತ್ಯೆಯ ಬೆನ್ನಲ್ಲೇ ಆಹಾರ ಸಚಿವ ಯುಟಿ ಖಾದರ್ ಜೊತೆಗೆ ಇರುವ ಆರೋಪಿ ಇಲ್ಯಾಸ್ ಇರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ತನ್ನ ಜೊತೆ ಊಟ ಮಾಡುತ್ತಿರುವ ಫೋಟೋದ ಬಗ್ಗೆ ಸ್ಪಷ್ಟನೆ ನೀಡಿದ ಖಾದರ್, ನಾನು ಎಲ್ಲಿಯಾದರೂ ಹೋದಾಗ ಪಕ್ಕ ಬಂದು ಹಲವು ಮಂದಿ ಊಟ ಮಾಡುತ್ತಾರೆ. ಇದಕ್ಕೆ ನಾನು ಏನು ಮಾಡಲು ಸಾಧ್ಯವಿಲ್ಲ. ಒಂದು ಫೇಸ್ ಬುಕ್ ಅಲ್ಲ 100 ಫೇಸ್ ಬುಕ್ ಗಳಲ್ಲಿ ಫೋಟೋ ಬಂದರೂ ಏನು ಮಾಡಲಾಗುವುದಿಲ್ಲ. ಖಾದರ್ ಏನು ಅಂತ ಅಲ್ಲಿನ ಜನಕ್ಕೆ ಗೊತ್ತಿದೆ ಎಂದು ಪ್ರತಿಕ್ರಿಯಿಸಿದ್ದಾರೆ.

ಬಿಜೆಪಿಯವರು ಹತ್ಯೆಗಾಗಿ ಅಲ್ಲಿ ಕಾದುಕೊಂಡು ಕುಳಿತಿದ್ದು, ಎರಡು ದಿನ ಮುಗಿದ ಬಳಿಕ ಅವರ ಮನೆ ಕಡೆ ಕೂಡ ಬಿಜೆಪಿ ತಲೆ ಹಾಕಿ ಮಲಗುವುದಿಲ್ಲ. ಚುನಾವಣೆಯಲ್ಲಿ ಸೋಲ್ತಾರೆ ಎನ್ನುವ ಭಯದಲ್ಲಿ ರಾಜಕೀಯಕ್ಕೆ ಬಿಜೆಪಿಯವರು ಮಾಡುತ್ತಿರುವ ಕೆಲಸ ಇದು ಎಂದು ಹೇಳಿದ್ದಾರೆ. ಇದನ್ನು ಓದಿ: ದೀಪಕ್ ಹತ್ಯೆ ಕೇಸ್: ಪೊಲೀಸರ 27 ಕಿ.ಮೀ ಥ್ರಿಲ್ಲಿಂಗ್ ಚೇಸಿಂಗ್ ಸ್ಟೋರಿ ಓದಿ 

ಯಾರು ಈ ಇಲ್ಯಾಸ್?
ಮಂಗಳೂರು ರೌಡಿ ನಿಗ್ರಹ ದಳದ ಪೊಲೀಸರು ಉಳ್ಳಾಲದ ನಟೋರಿಯಸ್ ಟಾರ್ಗೆಟ್ ಗ್ಯಾಂಗ್ ನಾಯಕ ಇಲ್ಯಾಸ್ ನನ್ನು 2017ರ ನವೆಂಬರ್ ನಲ್ಲಿ ಬಂಧಿಸಿದ್ದರು. ಈತನ ಮೇಲೆ ರಾಜ್ಯದ ನಾನಾ ಭಾಗಗಳಲ್ಲಿ ಗಂಭೀರ ಅಪರಾಧ ಪ್ರಕರಣಗಳು ದಾಖಲಾಗಿವೆ.

ಇಲ್ಯಾಸ್ ಈ ಹಿಂದೆ ಉಳ್ಳಾಲ ಯುವ ಕಾಂಗ್ರೆಸ್ ಉಪಾಧ್ಯಕ್ಷನಾಗಿದ್ದ. ಗಂಭೀರ ಆರೋಪಗಳಿದ್ದರೂ ಇಲ್ಯಾಸ್ ನನ್ನು ಯು.ಟಿ. ಖಾದರ್ ಉಳ್ಳಾಲ ಬ್ಲಾಕ್ ನ ಯುವ ಕಾಂಗ್ರೆಸ್ ನ ಉಪಾಧ್ಯಕ್ಷ ಸ್ಥಾನ ಕೊಟ್ಟಿದ್ದು ಹೇಗೆ ಎಂದು ಜನ ಈಗ ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನೆ ಮಾಡುತ್ತಿದ್ದಾರೆ. ಅಕ್ಟೋಬರ್ ನಲ್ಲಿ ಮುಕ್ಕಚ್ಚೇರಿಯಲ್ಲಿ ನಡೆದ ಝುಬೈರ್ ಎಂಬವರ ಕೊಲೆಯಲ್ಲೂ ಟಾರ್ಗೆಟ್ ಹೆಸರು ತಳುಕು ಹಾಕಿದಾಗ ಇಲ್ಯಾಸ್ ನನ್ನು ಯುವ ಕಾಂಗ್ರೆಸ್ ಉಪಾಧ್ಯಕ್ಷ ಸ್ಥಾನದಿಂದ ಕಿತ್ತು ಹಾಕಲಾಗಿತ್ತು.  ಇದನ್ನು ಓದಿ: ಆಗ ಸುಮ್ಮನಿದ್ದವರು ಈಗೇನು ಮಾತನಾಡೋದು: ಬಿಜೆಪಿ ನಾಯಕರ ವಿರುದ್ಧ ಮುತಾಲಿಕ್ ಕಿಡಿ

ಯುವತಿಯರ ಮೂಲಕ ಶ್ರೀಮಂತರನ್ನು ಖೆಡ್ಡಾಕ್ಕೆ ಬೀಳಿಸಿ, ಬ್ಲಾಕ್ ಮೇಲ್ ಮಾಡಿ ಲಕ್ಷಾಂತರ ರುಪಾಯಿಯನ್ನು ದೋಚುವ ಕೆಲಸವನ್ನು ಈ ಟಾರ್ಗೆಟ್ ಗ್ರೂಪ್ ಮಾಡಿದೆ ಎನ್ನುವ ಆರೋಪವಿದೆ. ಅಷ್ಟೇ ಅಲ್ಲದೇ ಈ ಗ್ರೂಪಿನ ಸದಸ್ಯರು ಉಳ್ಳಾಲ ಬೀಚ್ ಗೆ ಬಂದವರನ್ನು ದೋಚಿ ಹಲ್ಲೆ ನಡೆಸುತ್ತಿದ್ದರು. ಒಂದು ವೇಳೆ ದೂರು ನೀಡಿದ್ರೆ ಖಾದರ್ ಅವರ ಜನ ಎಂದು ಪೊಲೀಸರೂ ಸಮ್ಮನಾಗುತ್ತಿದ್ದರು ಎನ್ನುವ ಆರೋಪವನ್ನು ಜನ ಮಾಡುತ್ತಿದ್ದಾರೆ. ಇತ್ತೀಚೆಗೆ ಕಾಟಿಪಳ್ಳದ ಸಫ್ವಾನ್ ಎಂಬ ಯುವಕನನ್ನು ಇದೇ ಟಾರ್ಗೆಟ್ ತಂಡ ಅಪಹರಿಸಿ ಹಣಕ್ಕಾಗಿ ಬೇಡಿಕೆ ಇಟ್ಟು ಕೊನೆಗೆ ಕೊಲೆ ಮಾಡಿ ಚಾರ್ಮಾಡಿ ಘಾಟಿ ಯಿಂದ ಕೆಳಗೆ ಎಸೆದಿತ್ತು.

ಈ ಫೋಟೋ ವೈರಲ್ ಆಗುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಕಲ್ಲಡ್ಕ ಪ್ರಭಾಕರ್ ಭಟ್ ಜೊತೆ ಅಶ್ರಫ್ ಕೊಲೆ ಕೇಸ್ ಆರೋಪಿ ಭರತ್ ಕುಂಡೆಲ್ ಕುಳಿತಿರುವ ಫೋಟೋ ವೈರಲ್ ಆಗಿದೆ. ಬಿಸಿ ರೋಡ್‍ನಲ್ಲಿ ಟಿಪ್ಪು ಜಯಂತಿಯಂದು ಅಶ್ರಫ್ ಕೊಲೆ ನಡೆದಿತ್ತು. ಇದನ್ನು ಓದಿ: Exclusive: ಪೊಲೀಸ್ ಇಲಾಖೆಯಲ್ಲಿನ ‘ಹಸ್ತ’ಕ್ಷೇಪವೇ ಕರಾವಳಿಯಲ್ಲಿ ಶಾಂತಿ ಕದಡಲು ಕಾರಣ!

Share This Article
Leave a Comment

Leave a Reply

Your email address will not be published. Required fields are marked *