‘ಗೋಮೂತ್ರದಿಂದ ಕೊರೊನಾ ವಾಸಿ ಟ್ವೀಟ್’- ಪೊಲೀಸ್ ಆಯುಕ್ತರಿಗೆ ಶ್ರೀರಾಮಲು ದೂರು

Public TV
3 Min Read

ಬೆಂಗಳೂರು: ಚರ್ಚೆಗೆ ಗ್ರಾಸವಾದ ಟ್ವೀಟ್‍ನ ಸ್ಕ್ರೀನ್ ಶಾಟ್ ಕುರಿತು ಆರೋಗ್ಯ ಸಚಿವ ಬಿ.ಶ್ರೀರಾಮುಲು ಜಾಗೃತರಾಗಿದ್ದು, ಈ ಕುರಿತು ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ.

ಸಚಿವ ಶ್ರೀರಾಮುಲು ಮಾಡುವ ರೀತಿಯಲ್ಲೇ ಟ್ವೀಟ್ ಮಾಡಿ ಕಿಡಿಗೇಡಿಗಳು ಈ ಅವಾಂತರ ಸೃಷ್ಟಿಸಿದ್ದರು. ಸಚಿವರ ಹೆಸರಿನಲ್ಲಿದ್ದ ಈ ಟ್ವೀಟ್ ವ್ಯಾಪಕ ಚರ್ಚೆಗೆ ಗ್ರಾಸವಾಗಿತ್ತು. ಈ ನಕಲಿ ಟ್ವೀಟ್ ಕುರಿತು ಶ್ರೀರಾಮುಲು ಅವರು ರಾತ್ರಿಯೇ ಟ್ವೀಟ್ ಮಾಡುವ ಮೂಲಕ ಸ್ಪಷ್ಟಪಡಿಸಿದ್ದರು. ನಾನು ನಿನ್ನೆ ಈ ಸಂಬಂಧ ಟ್ವೀಟ್ ಮಾಡಿಯೇ ಇಲ್ಲ. ನನ್ನ ಖಾತೆಯನ್ನು ಬಳಸಿ ಯಾರೋ ನಕಲಿ ಟ್ವೀಟ್ ಸೃಷ್ಟಿಸಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದರು. ಇದನ್ನೂ ಓದಿ: ಗೋಮೂತ್ರ ಸೇವಿಸಿದ್ರೆ ಕೊರೊನಾ ಬರಲ್ಲ – ಹರಿದಾಡುತ್ತಿದೆ ಶ್ರೀರಾಮುಲು ಟ್ವೀಟ್ ಫೋಟೋ

ಈ ಕುರಿತು ಸರಣಿ ಟ್ವೀಟ್ ಮಾಡಿದ್ದು, ಕೊರೊನಾದಂತಹ ಪ್ರಮುಖ ವಿಚಾರದಲ್ಲಿ, ನನ್ನ ಹೆಸರನ್ನು ಬಳಸಿ, ಈ ತರಹದ ಅಪ್ರಬುದ್ಧ ಹಾಗೂ ಬಾಲಿಶ ಹೇಳಿಕೆಯನ್ನು ಎಡಿಟ್ ಮಾಡಿದ್ದಾರೆ. ಇದನ್ನು ಫೇಸ್ಬುಕ್ ಹಾಗೂ ಬೇರೆ ಸಾಮಾಜಿಕ ಮಾಧ್ಯಮದಲ್ಲಿ ಪ್ರಕಟಿಸಿದ್ದಾರೆ. ಇಂತಹವರ ವಿರುದ್ಧ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡಿದ್ದೇನೆ ಎಂದು ತಿಳಿಸಿದ್ದರು.

ಇಂದೂ ಸಹ ದೂರಿನ ಪ್ರತಿಯನ್ನು ಟ್ವೀಟ್ ಮಾಡುವ ಮೂಲಕ ದೂರು ನೀಡಿರುವುದನ್ನು ಖಚಿತಪಡಿಸಿದ್ದಾರೆ. ಕೊರೊನಾದಂತಹ ಗಂಭೀರ ವಿಷಯದಲ್ಲಿ, ನನ್ನ ಹೆಸರು ಬಳಸಿ ಸುಳ್ಳು ಸುದ್ದಿ ಹರಡುತ್ತಿರುವವರ ವಿರುದ್ಧ ಕಾನೂನು ರೀತಿಯ ಕ್ರಮ ಕೈಗೊಳ್ಳಲು ಬೆಂಗಳೂರು ಪೊಲೀಸ್ ಆಯುಕ್ತರಿಗೆ ಮನವಿ ಮಾಡಲಾಗಿದೆ. ಇಂತಹ ಸಮಯದಲ್ಲಿ ನಾಗರಿಕರಿಗೆ ಸರಿಯಾದ ಮಾಹಿತಿ ನೀಡಿ, ಆತ್ಮವಿಶ್ವಾಸ ತುಂಬುವ ಪ್ರಯತ್ನ ಮಾಡಬೇಕೇ ಹೊರತು, ಗೊಂದಲ ಸೃಷ್ಟಿಸುವ ಪ್ರಯತ್ನಕ್ಕೆ ಕೈಹಾಕಬೇಡಿ ಎಂದು ಅವರು ಟ್ವೀಟ್ ಮೂಲಕ ಮನವಿ ಮಾಡಿದ್ದಾರೆ.

ಈ ರೀತಿ ಎಡಿಟ್ ಮಾಡಿ ಸುಳ್ಳು ಸುದ್ದಿ ಹಬ್ಬಿಸುವ ಬದಲು, ಜನರಿಗೆ ಮಾಹಿತಿ ನೀಡಿ, ಜಾಗೃತಿ ಮೂಡಿಸುವ ಮೂಲಕ ನಿಮ್ಮ ಎಡಿಟ್ ಮಾಡುವ ಪ್ರತಿಭೆಯನ್ನು ತೋರಿಸಿ ಎಂದು ಮತ್ತೊಂದು ಟ್ವೀಟ್ ಕಿಡಿ ಕಾರಿದ್ದಾರೆ.

ದೂರಿನಲ್ಲೇನಿದೆ?
ಮಾ.10, 2020ರಂದು ಸಾಮಾಜಿಕ ಜಾಲತಾಣ ಫೇಸ್ಬುಕ್‍ನಲ್ಲಿ ನನ್ನ ಹೆಸರಿನಲ್ಲಿ, ನಾನು ಟ್ವೀಟ್ ಮಾಡಿರುವ ರೀತಿಯಲ್ಲಿ (ಗಂಜಲ ಕುಡಿಯುವುದು ಹಾಗೂ ಸಗಣಿಯನ್ನು ದೇಹಕ್ಕೆ ಸವರಿಕೊಳ್ಳುವುದರಿಂದ ಕೊರೊನಾ ವೈರಸ್ ತಡೆಗಟ್ಟಬಹುದು) ‘ನಮ್ಮ ನೆಚ್ಚಿನ ಮುಖ್ಯಮಂತ್ರಿ ಸಿದ್ದರಾಮಯ್ಯ’, ‘ಉರಿತೈತೆ’ ಎಂಬ ಫೇಸ್‍ಬುಕ್ ಖಾತೆಗಳಲ್ಲಿ ಕೆಲವು ಅನಾಮದೇಯ ದುಷ್ಕರ್ಮಿಗಳು ಪ್ರಕಟಿಸಿದ್ದಾರೆ.

ಸದರಿ ದಿನದಂದು ಈ ವಿಷಯವನ್ನು ನಾನು ಟ್ವೀಟ್ ಮಾಡಿಲ್ಲ, ಯಾವುದೇ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸಿಲ್ಲ. ಇದರಿಂದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವನಾಗಿರುವ ನನ್ನ ಮೇಲೆ ರಾಜ್ಯದ ಜನರಲ್ಲಿ ಕೆಟ್ಟ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಅಲ್ಲದೆ ತಪ್ಪು ಸಂದೇಶ ತಲುಪಿಸಿದಂತಾಗುತ್ತದೆ. ನನ್ನ ತೇಜೋವಧೆ ಮಾಡುವ ಹಾಗೂ ಜನರಿಗೆ ನನ್ನ ಬಗ್ಗೆ ತಪ್ಪು ಸಂದೇಶ ತಲುಪಿಸುವ ದುರುದ್ದೇಶದಿಂದ ಕೆಲವು ಕಿಡಿಗೇಡಿಗಳು ನಕಲಿ ಹಾಗೂ ತಪ್ಪು ಸಂದೇಶಗಳನ್ನು ನಾನೇ ಪ್ರಕಟಿಸುತ್ತಿರುವುದಾಗಿ ಜನ ಭಾವಿಸುವಂತೆ ಮಾಡಿದ್ದಾರೆ. ಇದು ವೈಯಕ್ತಿಕ ತೇಜೋವಧೆ ಮಾಡುವ ದುರುದ್ದೇಶವಾಗಿದೆ. ಇದರಿಂದ ನನ್ನ ಘನತೆಗೆ ಕುಂದುಂಟಾಗಿದ್ದು, ಜನರಲ್ಲಿ ತಪ್ಪು ಅಭಿಪ್ರಾಯ ವ್ಯಕ್ತವಾಗಿದೆ. ಹೀಗಾಗಿ ನನ್ನ ಹೆಸರಿನಲ್ಲಿ ನಕಲಿ ಟ್ವೀಟ್ ಮಾಡಿದವರ ವಿರುದ್ಧ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಬೇಕು.

ನಕಲಿ ಟ್ವೀಟ್‍ನಲ್ಲೇನಿದೆ?
ಗೋಮೂತ್ರ ಸೇವಿಸೋದ್ರಿಂದ, ಸಗಣಿಯನ್ನು ದೇಹಕ್ಕೆ ಸವರಿಕೊಂಡರೆ ಕೊರೊನಾ ಬರುವುದಿಲ್ಲ ಎಂದು ಬರೆದಿರುವ ಸಚಿವ ರಾಮುಲು ಖಾತೆ ಟ್ವೀಟ್ ಸ್ಕ್ರೀನ್ ಶಾಟ್ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಗಂಜಲ ಕುಡಿಯುವುದಿಂದ ಹಾಗೂ ಸಗಣಿಯನ್ನು ದೇಹಕ್ಕೆ ಸವರಿಕೊಳ್ಳುವುದರಿಂದ ಕೊರೊನಾ ವೈರಸ್ ತಡೆಗಟ್ಟಬಹುದು ಎಂದು ಟ್ವಿಟ್ಟರ್ ನಲ್ಲಿ ಬರೆಯಲಾಗಿತ್ತು.

ಎಷ್ಟು ಗಂಟೆಗೆ ಈ ಟ್ವೀಟ್ ಪ್ರಕಟವಾಗಿದೆ ಎನ್ನುವ ವಿವರ ಇದರಲ್ಲಿ ಇರಲಿಲ್ಲ. ಒಟ್ಟು 17 ಮಂದಿ ಕಮೆಂಟ್ ಮಾಡಿದ್ದರೆ, 48 ಮಂದಿ ರಿಟ್ವೀಟ್ ಮಾಡಿದ್ದಾರೆ. ಈ ವಿಚಾರದ ಬಗ್ಗೆ ಶ್ರೀರಾಮುಲು ತಂಡವನ್ನು ಸಂಪರ್ಕಿಸಿದರೆ ನಾವು ಟ್ವೀಟ್ ಮಾಡಿಲ್ಲ, ಸಚಿವರ ಖಾತೆ ಹ್ಯಾಕ್ ಆಗಿರಬಹುದು ಎಂದು ಪ್ರತಿಕ್ರಿಯಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *