ಕಬ್ಬಿಗೆ ಕಿಡಿಗೇಡಿಗಳೇ ಬೆಂಕಿ ಹಚ್ಚಿದ್ದಾರೆ.. ರೈತರು ಯಾರೂ ಹೀಗೆ ಮಾಡಲ್ಲ: ಸಕ್ಕರೆ ಸಚಿವ

1 Min Read

– ಬೆಂಕಿಗಾಹುತಿಯಾದ ಟ್ರ್ಯಾಕ್ಟರ್‌ & ಕಬ್ಬಿಗೆ ಅಲ್ಪ ಪ್ರಮಾಣದ ಪರಿಹಾರ ಕೊಡ್ತೀವಿ: ಶಿವಾನಂದ ಪಾಟೀಲ್‌

ಬೆಂಗಳೂರು: ಟ್ರ್ಯಾಕ್ಟರ್‌ ಹಾಗೂ ಕಷ್ಟಪಟ್ಟು ಬೆಳೆದಿದ್ದ ಕಬ್ಬುಗಳಿಗೆ ಬೆಂಕಿ ಹಚ್ಚಿದ್ದು ದುರ್ದೈವ. ರೈತರು ಯಾರೂ ಈ ರೀತಿ ಮಾಡುವುದಿಲ್ಲ. ಕಿಡಿಗೇಡಿಗಳೇ ಬೆಂಕಿ ಹಚ್ಚಿದ್ದಾರೆ ಎಂದು ಸಕ್ಕರೆ ಸಚಿವ ಶಿವಾನಂದ ಪಾಟೀಲ್‌ (Shivanand Patil) ಅಸಮಾಧಾನ ಹೊರಹಾಕಿದ್ದಾರೆ.

ಮುಧೋಳದಲ್ಲಿ (Mudhol Protest) ಕಬ್ಬು ತುಂಬಿದ್ದ ಲಾರಿಗಳಿಗೆ ಬೆಂಕಿ ಹಚ್ಚಿದ ಪ್ರಕರಣ ಸಂಬಂಧ ‘ಪಬ್ಲಿಕ್‌ ಟಿವಿ’ ಜೊತೆ ಮಾತನಾಡಿದ ಅವರು, ನನಗೆ ಬಂದಿರುವ ಮಾಹಿತಿ ಪ್ರಕಾರ 25 ರಿಂದ 50 ಟ್ರ್ಯಾಕ್ಟರ್‌ಗಳಿಗೆ ಬೆಂಕಿ ಹಾಕಲಾಗಿದೆ. ಬೆಳಗಾವಿಯ ಪ್ರತಿಭಟನೆಯಲ್ಲೂ ಇದೇ ರೈತರು ಪ್ರತಿಭಟನೆ ಮಾಡಿದ್ರು. ಎಫ್‌ಆರ್‌ಪಿ 3,300 ರೂ.ಗೆ ಒಪ್ಪಿಕೊಂಡಿದ್ರು. ಇದೀಗ ಮುಧೋಳದಲ್ಲಿ ಹೋರಾಟ ನಡೆಸಿದ್ದಾರೆ ಎಂದು ಬೇಸರಿಸಿದರು. ಇದನ್ನೂ ಓದಿ: ಮುಧೋಳ | ಭುಗಿಲೆದ್ದ ರೈತರ ಆಕ್ರೋಶ – 50ಕ್ಕೂ ಹೆಚ್ಚು ಟ್ರ್ಯಾಕ್ಟರ್‌ಗಳಿಗೆ ಬೆಂಕಿ, ಸಾವಿರಾರು ಟನ್‌ ಕಬ್ಬು ಭಸ್ಮ!

ಸಕ್ಕರೆ ಕಾರ್ಖಾನೆ ಮಾಲೀಕರ ಸ್ಥಿತಿಗತಿ ನೋಡಿಯೇ 3,300 ರೂ. ನಿಗದಿ ಮಾಡಲಾಗಿತ್ತು. ನೀವೆ ಕಷ್ಟಪಟ್ಟು ಬೆಳೆದ ಕಬ್ಬಿಗೆ, ಟ್ರ್ಯಾಕ್ಟರ್‌ಗೆ ಬೆಂಕಿ ಹಚ್ಚೋದು ದುರ್ದೈವ. ಮುಖ್ಯಮಂತ್ರಿಗಳ ಜೊತೆ ಮಾತನಾಡಿ ಘಟನಾ ಸ್ಥಳಕ್ಕೆ ಹೋಗ್ತೀನಿ. ಬೆಂಕಿಗಾಹುತಿಯಾದ ಟ್ರ್ಯಾಕ್ಟರ್ ಮತ್ತು ಕಬ್ಬಿಗೆ ಅಲ್ಪ ಪ್ರಮಾಣದ ಪರಿಹಾರ ನೀಡಲಾಗುವುದು ಎಂದು ತಿಳಿಸಿದರು.

ರೈತರು ಎಫ್‌ಆರ್‌ಪಿಗಾಗಿ ಬೇಕಿದ್ರೆ ಇನ್ನೂ ಹೋರಾಟ ಮಾಡಲಿ. ಆದರೆ, ಅದು ಶಾಂತಿಯುತವಾಗಿರಲಿ. ಕಬ್ಬು ಬೆಳೆಗಾರರ ಹೋರಾಟ ರಾಜ್ಯದಲ್ಲಿ ಎಲ್ಲೂ ಇಲ್ಲ. ಮುಧೋಳದಲ್ಲಿ ಮಾತ್ರ ಇದೆ ಎಂದು ಹೇಳಿದರು.

Share This Article