ಒಂದು ಬಾರಿ ನೋಟಿಸ್ ಕೊಟ್ಟ ಮೇಲೆ ಅದು ಸರಿ ಆಗೋವರೆಗೂ ಬೀಗ ತೆಗೆಯೋದು ಸರಿಯಲ್ಲ: ರಾಮಲಿಂಗಾರೆಡ್ಡಿ

Public TV
1 Min Read

ಬೆಂಗಳೂರು: ಒಂದು ಬಾರಿ ಬಿಗ್‌ಬಾಸ್ (Bigg Boss Kannada 12) ಶೋಗೆ ನೋಟಿಸ್ ಕೊಟ್ಟ ಮೇಲೆ ಅದು ಸರಿ ಆಗೋವರೆಗೂ ಬೀಗ ತೆಗೆಯೋದು ಸರಿಯಲ್ಲ ಎಂದು ಸಚಿವ ರಾಮಲಿಂಗಾರೆಡ್ಡಿ (Ramalingareddy) ಬಿಗ್‌ಬಾಸ್ ವಿಚಾರದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ನಡೆಗೆ ಪರೋಕ್ಷವಾಗಿ ಅಸಮಾಧಾನ ಹೊರಹಾಕಿದ್ದಾರೆ.

ಬಿಗ್‌ಬಾಸ್‌ಗೆ ಬೀಗ ಹಾಕಿ ಮತ್ತೆ ತೆಗೆದ ವಿಚಾರಕ್ಕೆ ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ನಾನು ಈ ವಿಷಯವನ್ನು ಮಾಧ್ಯಮಗಳ ಮೂಲಕ ನೋಡಿದೆ. ಮಾಲಿನ್ಯ ನಿಯಂತ್ರಣ ಬೋರ್ಡ್ ಅಧ್ಯಕ್ಷ ನರೇಂದ್ರಸ್ವಾಮಿ ಅವರು ಬಿಗ್‌ಬಾಸ್ ನಿಯಮ ಮೀರಿದ್ದಾರೆ ಅಂತ ನೋಟಿಸ್ ಕೊಟ್ಟಿದ್ದರು. ಅವರು ನೋಟಿಸ್‌ಗೂ ಕ್ಯಾರೆ ಎನ್ನಲಿಲ್ಲ ಅಂತ ಬೀಗ ಹಾಕಿದ್ರು. ಈಗ ನಿನ್ನೆ ಡಿಕೆ ಶಿವಕುಮಾರ್ (D.K.Shivakumar) ಅನುಮತಿ ಕೊಡಿ ಅಂತ ಹೇಳಿದ್ದಾರೆ ಅಂತ ಮಾಧ್ಯಮಗಳಲ್ಲಿ ನೋಡಿದೆ. ನನಗೆ ಇಷ್ಟೇ ಮಾಹಿತಿ ಗೊತ್ತಿರೋದು. ನಾನು ಊರಲ್ಲಿ ಇರಲಿಲ್ಲ. ಇಷ್ಟೇ ಗೊತ್ತಿರೋದು ಅಂತ ತಿಳಿಸಿದರು. ಇದನ್ನೂ ಓದಿ: ಬಿಗ್‌ಬಾಸ್ ಮನೆ ಬೀಗ ಓಪನ್ ಆದ್ರೂ ಶೂಟಿಂಗ್ ಇನ್ನೂ ಶುರುವಾಗಿಲ್ಲ!

ಒಂದು ಸಾರಿ ನೋಟಿಸ್ ಕೊಟ್ಟ ಮೇಲೆ, ಮುಚ್ಚಿದ ಮೇಲೆ ಅದು ಸರಿ ಆಗೋವರೆಗೂ ತೆಗೆಯೋಕೆ ಅವಕಾಶ ಕೊಡಬಾರದು. ನನಗೆ ಡಿಸಿ ಮಾಹಿತಿ ಕೊಡೋಕೆ ನಾನು ಊರಲ್ಲಿ ಇರಲಿಲ್ಲ. ಮಾಲಿನ್ಯ ‌ಬೋರ್ಡ್ ಸ್ವಾಯತ್ತ ಸಂಸ್ಥೆ. ಅದರ ಕೆಲಸ ಅದು ಮಾಡಿದೆ. ಏನಾಗಿದೆ ತಿಳಿದುಕೊಳ್ಳುತ್ತೇನೆ. ಈಗ ಏನ್ ಆಯ್ತು ಅಂತ ಡಿಕೆ ಶಿವಕುಮಾರ್ ಅವರನ್ನೇ ಕೇಳಿ ಎಂದರು.

ಪರಿಸರ ನಿಯಮ ಉಲ್ಲಂಘಿಸಿದ ಆರೋಪದಲ್ಲಿ ಬಿಡದಿಯಲ್ಲಿರುವ ಜಾಲಿವುಡ್‌ ಸ್ಟುಡಿಯೋಸ್‌ ಬಂದ್‌ ಮಾಡಲಾಗಿತ್ತು. ಅಲ್ಲೇ ಇರುವ ಬಿಗ್‌ಬಾಸ್‌ ಮನೆಗೂ ಇದರ ಬಿಸಿ ತಟ್ಟಿತ್ತು. ರಾತ್ರೋರಾತ್ರಿ ಬಿಗ್‌ಬಾಸ್‌ ಸ್ಪರ್ಧಿಗಳನ್ನು ಮನೆಯಿಂದ ಹೊರಹಾಕಲಾಗಿತ್ತು. ಒಂದು ದಿನದ ನಾಟಕೀಯ ಬೆಳವಣಿಗೆ ಬೆನ್ನಲ್ಲೇ, ಜಾಲಿವುಡ್‌ ಸ್ಟುಡಿಯೋಸ್‌ ಗೇಟ್‌ಗೆ ಹಾಕಿರುವ ಸೀಲ್‌ ತೆಗೆಯುವಂತೆ ಡಿಸಿಎಂ ಸೂಚನೆ ನೀಡಿದರು. ಈಗ ಜಾಲಿವುಡ್‌ ಓಪನ್‌ ಆಗಿದ್ದು, ಸ್ಪರ್ಧಿಗಳು ಕೂಡ ಬಿಗ್‌ಬಾಸ್‌ ಮನೆಗೆ ವಾಪಸ್‌ ಆಗಿದ್ದಾರೆ. ಇದನ್ನೂ ಓದಿ: ಡಿಕೆಶಿ ವೈಲ್ಡ್‌ ಕಾರ್ಡ್‌ಎಂಟ್ರಿ – ಬಿಗ್‌ಬಾಸ್‌ ಮನೆ ಓಪನ್‌ | ರಾತ್ರಿ ಏನೇನಾಯ್ತು? ಇಲ್ಲಿದೆ ಇನ್‌ಸೈಡ್‌ ಸ್ಟೋರಿ

Share This Article