ರಸ್ತೆಯಲ್ಲಿಯೇ ನಿಂತು ರೇಷ್ಮೆ ಮಾರುಕಟ್ಟೆ ವೀಕ್ಷಿಸಿ ಅಧಿಕಾರಿಗಳಿಗೆ ಸೂಚನೆ ನೀಡಿದ ಸಚಿವ

Public TV
2 Min Read

– ಸಚಿವ ನಾರಾಯಣಗೌಡ ವಿರುದ್ಧ ರೈತರ ಆಕ್ರೋಶ

ರಾಮನಗರ: ರೇಷ್ಮೆ ಸಚಿವರು ನಾರಾಯಣಗೌಡ ಅವರು ರಸ್ತೆಯಲ್ಲಿಯೇ ನಿಂತು ಏಷ್ಯಾದ ಅತಿ ದೊಡ್ಡ ರೇಷ್ಮೆ ಮಾರುಕಟ್ಟೆ ವೀಕ್ಷಿಸಿ, ಅಧಿಕಾರಿಗಳ ಜೊತೆ ಒಂದೈದು ನಿಮಿಷ ಚರ್ಚಿಸಿ ಬೆಂಗಳೂರಿಗೆ ರೈಟ್ ಹೇಳಿದ ಪ್ರಸಂಗ ರಾಮನಗರದಲ್ಲಿ ನಡೆದಿದೆ.

ಮಂಡ್ಯದಿಂದ ಬೆಂಗಳೂರಿಗೆ ತೆರಳುತ್ತಿದ್ದ ರೇಷ್ಮೆ ಸಚಿವ ನಾರಾಯಣಗೌಡ ಅವರು ಮಾರ್ಗ ಮಧ್ಯೆ ಕಾಟಚಾರಕ್ಕೆ ಎಂಬಂತೆ ರಾಮನಗರದ ರೇಷ್ಮೆ ಮಾರುಕಟ್ಟೆ ಎದುರು ಕಾರು ನಿಲ್ಲಿಸಿ ಮಾರುಕಟ್ಟೆಗೂ ಭೇಟಿ ನೀಡದೇ ಕೇವಲ ರಸ್ತೆಯಲ್ಲಿಯೇ ವೀಕ್ಷಣೆ ನಡೆಸಿದರು. ಅಷ್ಟೇ ಅಲ್ಲದೆ ಕಾರಿನ ಡೋರ್ ಬಳಿಯೇ ನಿಂತಿದ್ದ ಸಚಿವರು ಅಧಿಕಾರಿಗಳಿಂದ ಮಾಹಿತಿ ಪಡೆದು ಕೆಲವು ಸೂಚನೆ ನೀಡಿ ಬೆಂಗಳೂರಿನತ್ತ ಹೊರಟೇ ಬಿಟ್ಟರು.

ರೈತರಿಲ್ಲದ ಸಮಯದಲ್ಲಿ ರೇಷ್ಮೆ ಮಾರುಕಟ್ಟೆಗೆ ಆಗಮಿಸಿ, ಕೇವಲ 5 ನಿಮಿಷಗಳಲ್ಲಿಯೇ ಹೀಗೆ ಬಂದು, ಹಾಗೇ ಹೋದರು. ಮೂರು ಕಡೆ ಮಾರುಕಟ್ಟೆ ತೆರೆಯಿರಿ ಎಂದು ನಡು ರಸ್ತೆಯಲ್ಲಿಯೇ ಅಧಿಕಾರಿಗಳಿಗೆ ಸೂಚನೆ ನೀಡಿ ಕಾರು ಏರಿದ ಸಚಿವರು, ರೇಷ್ಮೆ ಬೆಳೆಗಾರರ ಸಮಸ್ಯೆಗಳನ್ನು ಕೇಳಲು ರೆಡಿ ಇರಲಿಲ್ಲ ಎಂಬುದು ವಿರ್ಪಯಾಸ.

ಮೂರು ಕಡೆ ಮಾರುಕಟ್ಟೆ ಮಾಡಿ ಎಂದು ರೇಷ್ಮೆ ಸಚಿವರು ಹೇಳಿದ್ದಾರೆ. ಆದರೆ ಎಲ್ಲಿ ಮಾರುಕಟ್ಟೆ ಸ್ಥಾಪಿಸಬೇಕು. ಮುಂದಿನ ದಿನಗಳಲ್ಲಿ ಬೆಳೆಗಾರರು ಯಾವ್ಯಾವ ಸಮಸ್ಯೆ ಎದುರಿಸುತ್ತಿದ್ದಾರೆ. ಅವರಿಗೆ ಯಾವ ರೀತಿ ಪರಿಹಾರ ಕಲ್ಪಿಸಬಹುದು ಎಂಬುದರ ಬಗ್ಗೆಯು ಸಚಿವರು ಚರ್ಚೆ ನಡೆಸಿಲ್ಲ ಎಂದು ರೈತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕೊರೊನಾ ಆತಂಕದಲ್ಲಿದ್ದ ರಾಮನಗರದ ಜನರಿಗೆ ಸ್ವಲ್ಪ ನಿಟ್ಟುಸಿರು ಬಿಡುವಂತೆ ಮಾಡಿದ್ದು ರೇಷ್ಮೆ ಮಾರುಕಟ್ಟೆ ಬಂದ್. ಆದರೆ ಇದೀಗ ಪುನಃ ರೇಷ್ಮೆ ಮಾರುಕಟ್ಟೆ ಆರಂಭವಾಗಿದ್ದು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದೇ ಕಷ್ಟಕರವಾಗಿದೆ. ಹೊರ ಜಿಲ್ಲೆ, ರಾಜ್ಯಗಳಿಂದಲೂ ರೈತರು ಬರುತ್ತಿದ್ದಾರೆ. ಅದರಲ್ಲೂ ಕೊರೊನಾ ಸೋಂಕಿತರಿರುವ ಜಿಲ್ಲೆಗಳಿಂದಲೂ ರೈತರು ರಾಮನಗರಕ್ಕೆ ಬರ್ತಿರುವುದು ಸಾಕಷ್ಟು ಆತಂಕವನ್ನುಂಟು ಮಾಡಿದೆ.

ರಾಮನಗರ ಜಿಲ್ಲಾ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ರೇಷ್ಮೆ ಮಾರುಕಟ್ಟೆಯಲ್ಲಿ ಜನಸಂದಣಿ ಉಂಟಾಗದಂತೆ ಕಾರ್ಯನಿರ್ವಹಿಸಲು ಇನ್ನೂ 2 ಸ್ಥಳಗಳನ್ನು ಗುರುತಿಸಿ ರೇಷ್ಮೆ ವಹಿವಾಟು ನಡೆಸುವಂತೆ ಹಾಗೂ ರೇಷ್ಮೆ ಬೆಳೆಗಾರರು ರೇಷ್ಮೆ ಮಾರಾಟವಾಗದಿದ್ದಲ್ಲಿ ಕಷ್ಟಕ್ಕೆ ಸಿಲುಕುತ್ತಾರೆ. ಕೋವಿಡ್-19 ಹರಡದಂತೆ ಬೇಕಿರುವ ಎಲ್ಲಾ ಮುನ್ನೆಚ್ಚರಿಕಾ ಕ್ರಮಗಳನ್ನು ವಹಿಸಿ ಎಂದು ರಸ್ತೆಯಲ್ಲಿಯೇ ರೇಷ್ಮೆ, ತೋಟಗಾರಿಕೆ ಹಾಗೂ ಪೌರಾಡಳಿತ ಸಚಿವ ನಾರಾಯಣ ಗೌಡ ಅವರು ತಿಳಿಸಿದ್ದಾರೆ.

ಹಾಪ್‍ಕಾಮ್ಸ್ ಗಳು ಈಗಾಗಲೇ ರೈತರು ಬೆಳೆದ ತರಕಾರಿಗಳನ್ನು ಕೆಲ ಬಡಾವಣೆಗಳನ್ನು ಗುರುತಿಸಿ ಮಾರಾಟ ಮಾಡುತ್ತಿವೆ. ಅದೇ ರೀತಿ ಮಾವಿನ ಹಣ್ಣುಗಳನ್ನು ಹಾಪ್‍ಕಾಮ್ಸ್ ಮೂಲಕ ಮಾರಾಟ ಮಾಡಲು ವ್ಯವಸ್ಥೆ ಮಾಡಬೇಕು ಎಂದು ಸಚಿವರು ಸೂಚನೆ ನೀಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *