ಕಲಬುರಗಿ: ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿರುವ ಮೊದಲ ವ್ಯಕ್ತಿಯೆಂದರೆ ಅದು ಡಿ.ಕೆ ಶಿವಕುಮಾರ್. ಆತನ ಮೇಲೆ ರಾಷ್ಟ್ರ ದ್ರೋಹಿ ಕೇಸ್ ಹಾಕಿ ಒಳಗೆ ಹಾಕಬೇಕು. ಈ ಬಗ್ಗೆ ಸಿಎಂ ಮತ್ತು ಗೃಹ ಸಚಿವರು ಜೊತೆ ಮಾತನಾಡಿದ್ದೇನೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್ ಈಶ್ವರಪ್ಪ ಹೇಳಿದ್ದಾರೆ.
ಕಲಬುರಗಿ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಚುನಾವಣೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಓಬಿಸಿ ಮೀಸಲಾತಿ ಇಲ್ಲದೆ ಚುನಾವಣೆ ನಡೆಸಬಾರದು ಅನ್ನೋದು ನಮ್ಮ ನಿರ್ಧಾರ. ಈ ಬಗ್ಗೆ ಸಿಎಂ ಜೊತೆ ಕಾನೂನು ತಜ್ಞರ ಜೊತೆ ಚರ್ಚೆ ಮಾಡಿದ್ದೇನೆ. ಯಾವಾಗ ಚುನಾವಣೆ ನಡೆಯುತ್ತದೆ ಅನ್ನೋದು ಈಗಲೇ ಹೇಳಲು ಆಗಲ್ಲ ಎಂದು ಹೇಳಿದರು.
ಇದೇ ವೇಳೆ ಮೇಕೆದಾಟು ಪಾದಯಾತ್ರೆ ಕುರಿತು ಮಾತನಾಡಿ, ಮೇಕೆದಾಟು ಯೋಜನೆ ಕಾಂಗ್ರೆಸ್ ಪಕ್ಷದ ಪಾರ್ಟ್ ಟೂ. ಅವರಿಗೆ ಏನು ಮಾಡಬೇಕು ಅಂತ ತಿಳಿಯುತ್ತಿಲ್ಲ. ಅವರ ಸರ್ಕಾರ ಇದ್ದಾಗ ಯೋಜನೆ ಯಾಕೆ ಜಾರಿ ಮಾಡಲಿಲ್ಲ. ಮೇಕೆದಾಟು ಪಾದಯಾತ್ರೆಯನ್ನು ಕೈ ರಾಜಕೀಯ ಅಸ್ತ್ರವಾಗಿ ಬಳಸುತ್ತಿದೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ರಷ್ಯಾ ಸೈನಿಕರನ್ನು ಸೆರೆ ಹಿಡಿದು ಅರೆಬೆತ್ತಲೆಗೊಳಿಸಿ ಸಿಗರೇಟ್ ಸೇದಿಸಿದ ಉಕ್ರೇನ್ ಸೇನೆ
ರಾಜ್ಯದಲ್ಲಿ ಹಿಜಾಬ್, ಹಿಂದು ಮುಸ್ಲಿಂ ಗಲಾಟೆಗಳು ಆಗಲು ಕಾರಣ ಕಾಂಗ್ರೆಸ್. ಹಿಂದೂ-ಮುಸ್ಲಿಂ ದೂರದೂರವಾಗಬೇಕು ಅಂತ ರಾಜಕೀಯ ಮಾಡ್ತಿದ್ದಾರೆ. ಮುಸ್ಲಿಂ ವೋಟ್ ಬ್ಯಾಂಕ್‍ಗಾಗಿ ಕುತಂತ್ರ ರಾಜಕಾರಣ ಮಾಡುತ್ತಿದ್ದಾರೆ. ಈ ಹಿಂದೆ ಕಾಂಗ್ರೆಸ್ ಜಾತಿಗಳನ್ನು ಒಡೆದು ಅಧಿಕಾರ ಕಳೆದುಕೊಂಡಿದೆ. ಇದೀಗ ಹಿಂದೂ ಮುಸ್ಲಿಂ ವಿವಾದ ಹೆಚ್ಚಿಸಿ, ರಾಜ್ಯದಲ್ಲಿ ಕಾಂಗ್ರೆಸ್ ನಿರ್ನಾಮ ಮಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.