ಅಮಿತ್ ಶಾಗೆ ದಡ್ಡ ಎಂದು ಕರೆದರೆ, ಸಿದ್ದರಾಮಯ್ಯಗೆ ಯಾವ ಭಾಷೆಯಲ್ಲಿ ಹೇಳಬೇಕು – ಈಶ್ವರಪ್ಪ ಪ್ರಶ್ನೆ

Public TV
1 Min Read

ಹಾವೇರಿ: ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದವರು. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ದಡ್ಡ ಎಂದು ಕರೆದರೆ ಅವರಿಗೆ ಯಾವ ಭಾಷೆಯಲ್ಲಿ ಹೇಳಬೇಕು ಎಂದು ಪ್ರಶ್ನಿಸುವ ಮೂಲಕ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಹರಿಹಾಯ್ದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೀವು ಯಾರನ್ನು ಬೇಕಾದರೂ ಟೀಕೆ ಮಾಡಿ. ಆದರೆ ನರೇಂದ್ರ ಮೋದಿ ಮತ್ತು ಅಮೀತ್ ಶಾ ಟೀಕೆ ಮಾಡಿದರೆ ದೊಡ್ಡವರಾಗುತ್ತೀರಿ ಎಂದು ತಿಳಿದಿದ್ದರೆ ಅದು ತಪ್ಪು ಕಲ್ಪನೆ. ಚುನಾವಣೆ ಸೋತಿದ್ದಾರೆ, ಮುಖ್ಯಮಂತ್ರಿ ಸ್ಥಾನ ಕಳೆದುಕೊಂಡಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಸೋಲಿಸಿದ್ದಾರೆ, ಇಷ್ಟಾದರೂ ಸಿದ್ದರಾಮಯ್ಯನವರಿಗೆ ಬುದ್ಧಿ ಬಂದಿಲ್ಲ. ನಿಮ್ಮ ಟೀಕೆ ಜನ ಮೆಚ್ಚುವಂತಿರಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ದಿನಕ್ಕೊಂದು ದೇಶ, ಗಳಿಗೆಗೊಂದು ವೇಷ ಬದಲಿಸುವ ಪ್ರಧಾನಿ ಎಲ್ಲಿದ್ದಾರೆ: ಸಿದ್ದರಾಮಯ್ಯ

ನಮ್ಮ ರಾಷ್ಟ್ರೀಯ ನಾಯಕರಿಗೆ ಸಿದ್ದರಾಮಯ್ಯ ಬಳಸಿರುವ ಪದ ನೋಡಿದರೆ ನನಗೆ ತಡೆಯಲು ಆಗುವುದಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವೇ ಇಲ್ಲ ಎಂದು ಜನ ತಿಳಿದಿದ್ದಾರೆ. ರಾಜ್ಯದಲ್ಲಿ ಪಕ್ಷ ಇದೆ ಎಂದು ತೋರಿಸಲು ಪ್ರತಿಭಟನೆ ಮಾಡುತ್ತಿದ್ದಾರೆ. ಆದರೆ ಇವರ ಪ್ರತಿಭಟನೆ ರಾಜಕೀಯ ದುರುದ್ದೇಶದಿಂದ ಕೂಡಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕೇಂದ್ರದಿಂದ ಆದಷ್ಟು ಬೇಗ ರಾಜ್ಯಕ್ಕೆ ಹೆಚ್ಚಿನ ಪರಿಹಾರದ ಹಣ ಬರಲಿದೆ. ಯಾವುದೇ ಕಾರಣಕ್ಕೂ ಮಧ್ಯಂತರ ಚುನಾವಣೆ ಬರುವುದಿಲ್ಲ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಬೇಕೆಂದು ಜನರು ಬಯಸಿದ್ದರು. ಕಳೆದ ಚುನಾವಣೆಯಲ್ಲಿ ಪೂರ್ಣ ಬಹುಮತ ಬರಲಿಲ್ಲ. ಕೋಡಿ ಮಠದ ಶ್ರೀಗಳ ಭವಿಷ್ಯದಂತೆ ಮಧ್ಯಂತರ ಚುನಾವಣೆ ಬಂದರೆ ಅವರ ಆಶೀರ್ವಾದ ಇದ್ದರೆ ಬಿಜೆಪಿ ಬಹುಮತದೊಂದಿಗೆ ಅಧಿಕಾರಕ್ಕೆ ಬರುತ್ತದೆ ಎಂದು ಕೋಡಿ ಶ್ರೀ ಹೇಳಿಕೆಗೆ ಪ್ರತಿಕ್ರಿಯಿಸಿದರು.

ಚುನಾವಣೆ ನಡೆದರೆ ನಮ್ಮ ಸಂಘಟನೆ ಆಧಾರದ ಮೇಲೆ ಪೂರ್ಣ ಬಹುಮತ ಬರುತ್ತದೆ. ಕಾಂಗ್ರೆಸ್‍ನವರ ತರ ಚುನಾವಣೆಗೆ ತಯಾರಾಗುವುದಿಲ್ಲ. ಬೂತ್ ಮಟ್ಟದಲ್ಲಿ ನಮ್ಮ ಕಾರ್ಯಕರ್ತರು ಸೈನಿಕರ ಥರ ತಯಾರಿದ್ದಾರೆ. ಯಾವುದೇ ಸಂದರ್ಭದಲ್ಲಿ ಚುನಾವಣೆ ನಡೆದರೂ ಬಿಜೆಪಿಗೆ ಪೂರ್ಣ ಬಹುಮತ ಬರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Share This Article
Leave a Comment

Leave a Reply

Your email address will not be published. Required fields are marked *