ಬೆಂಗಳೂರಿನಿಂದ ಹೊರಟ ಚಾರಣಿಗರಿಗೆ ನಿಜಕ್ಕೂ ಆಗಿದ್ದೇನು..?

Public TV
4 Min Read

ಬೆಂಗಳೂರು: ಉತ್ತರಾಖಂಡದ (Uttarakhand) ಉತ್ತರಕಾಶಿ ಜಿಲ್ಲೆಯ ಸಹಸ್ತ್ರತಾಲ್ ಚಾರಣಕ್ಕೆ ತೆರಳಿದ್ದವರ ಪೈಕಿ ಕರ್ನಾಟಕದ ಐವರು ಮೃತಪಟ್ಟಿದ್ದಾರೆ. ಹವಾಮಾನ ವೈಪರೀತ್ಯದಿಂದಾಗಿ ಸಿಲುಕಿರುವ ಹಲವರ ರಕ್ಷಣಾ ಕಾರ್ಯಾಚರಣೆ ಹಿನ್ನೆಲೆ ಕರ್ನಾಟಕದ ಸಚಿವ ಕೃಷ್ಣಬೈರೇಗೌಡ (Krishna Byre Gowda) ಅವರು ಉತ್ತರಾಖಂಡಕ್ಕೆ ತೆರಳಿದ್ದಾರೆ.

ಡೆಹ್ರಾಡೂನ್‌ನ ಬಿಜಾಪುರ ಅತಿಥಿ ಗೃಹದಲ್ಲಿ ರಕ್ಷಿಸಲ್ಪಟ್ಟ 8 ಚಾರಣಿಗರನ್ನು ಭೇಟಿಯಾಗಲು ಸಚಿವರು ಹೋಗಿದ್ದಾರೆ. ಉತ್ತರಾಖಂಡದಲ್ಲಿ ಪರಿಸ್ಥಿತಿ ಏನಾಗಿದೆ ಎಂಬ ಬಗ್ಗೆ ಸಚಿವರು ವಿವರ ಹಂಚಿಕೊಂಡಿದ್ದಾರೆ. ಕರ್ನಾಟಕದಿಂದ ಚಾರಣಕ್ಕೆ ಹೊರಟಿದ್ದ ಸುಜಾತಾ ಮುಂಗುರವಾಡಿ (52), ಆಶಾ ಸುಧಾಕರ್ (72), ಸಿಂಧು ವಕೆಲಂ (45), ವಿನಾಯಕ ಮುಂಗುರವಾಡಿ, ಚಿತ್ರಾ ಪ್ರಣೀತ್ ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಉತ್ತರಾಖಂಡದಲ್ಲಿ ಚಾರಣಕ್ಕೆ ತೆರಳಿದ್ದ ಕರ್ನಾಟಕದ ಐವರು ಸೇರಿ 9 ಮಂದಿ ಸಾವು

ನಿಜಕ್ಕೂ ಅಲ್ಲಿ ಆಗಿದ್ದೇನು?
ಡೆಹ್ರಾಡೂನ್‌ ಚಾರಣಿಗರ ತಂಡದೊಂದಿಗಿನ ಚರ್ಚೆಯಿಂದ ಸಂಗ್ರಹಿಸಿದ ಮಾಹಿತಿಯನ್ನು ಸಚಿವ ಕೃಷ್ಣಬೈರೇಗೌಡ ಮಾಹಿತಿ ಹಂಚಿಕೊಂಡಿದ್ದಾರೆ.

ಜೂನ್ 3 ರಂದು ಇಬ್ಬರು ಚಾರಣಿಗರು ಮುಖ್ಯ ತಂಡದಿಂದ ಬೇರ್ಪಟ್ಟು ಚಾರಣದಿಂದ ಹಿಂದೆ ಸರಿದಿದ್ದಾರೆ. ಹೀಗಾಗಿ ಅವರು ಅಪಾಯದಿಂದ ಪಾರಾಗಿದ್ದಾರೆ. ಆದರೆ, ಅದೇ ದಿನ ಬೆಳಗ್ಗೆ 20 ಚಾರಣಿಗರು ಮತ್ತು ಆ ತಂಡದ ಮಾರ್ಗದರ್ಶಿಯನ್ನೊಳಗೊಂಡ ತಂಡ ಲ್ಯಾಂಬ್ಟಾಲ್ ಕ್ಯಾಂಪ್ ಸೈಟ್‌ನಿಂದ ಸಹಸ್ರತಾಲ್‌ಗೆ ತೆರಳಿದೆ.

ಚಾರಣದ ಗಮ್ಯ ತಲುಪಿ ವಾಪಸ್‌ ಶಿಬಿರಕ್ಕೆ ಹಿಂತಿರುಗುತ್ತಿದ್ದ ಸಂದರ್ಭದಲ್ಲಿ, ಅವರು ಶಿಬಿರದಿಂದ ಸುಮಾರು ಒಂದೂವರೆ ಅಥವಾ ಎರಡು ಗಂಟೆಗಳ ದೂರದಲ್ಲಿದ್ದಾಗ, ಮಂಗಳವಾರ ಮಧ್ಯಾಹ್ನ 2 ಗಂಟೆಗೆ ಹಿಮಪಾತವು ಪ್ರಾರಂಭವಾಗಿದೆ. ಸಂಜೆ 4 ಗಂಟೆಯ ಹೊತ್ತಿಗೆ ಹಿಮಪಾತವು ತೀವ್ರಗೊಂಡಿದೆ. ಸಂಜೆ 6 ಗಂಟೆ ವೇಳೆಗೆ ಇಬ್ಬರು ಚಾರಣಿಗರು ಹವಾಮಾನ ವೈಪರೀತ್ಯಕ್ಕೆ ಬಲಿಯಾಗಿದ್ದಾರೆ. ಹಿಮ ಮತ್ತು ಹಿಮಗಾಳಿಯು ಚಾರಣಿಗರು ವಾಪಸ್‌ ಶಿಬಿರಕ್ಕೆ ಹಿಂದಿರುಗುವುದನ್ನು ಅಸಾಧ್ಯಗೊಳಿಸಿದೆ. ಗೋಚರತೆಯೂ ಶೂನ್ಯಕ್ಕೆ ಇಳಿದಿದೆ.

ಆ ರಾತ್ರಿ ಎಲ್ಲರೂ ಒಟ್ಟಿಗೆ ಕಳೆದಿದ್ದಾರೆ. ಆದರೆ, ಈ ವೇಳೆ ಹಿಮಗಾಳಿಯ ತೀವ್ರತೆಗೆ ಕೆಲವರು ಅದೇ ಸ್ಥಳದಲ್ಲಿ ಸಾವನ್ನಪ್ಪಿದ್ದಾರೆ. ಜೂನ್ 4 ರ ಬೆಳಗ್ಗೆ, ಮೊಬೈಲ್ ಸಂಪರ್ಕ ಸಿಗಬಹುದಾದ ಸ್ಥಳಕ್ಕೆ ತಂಡದ ಮಾರ್ಗದರ್ಶಕ ತಲುಪಿದ್ದಾನೆ. ಈ ನಡುವೆ ಶಿಬಿರಕ್ಕೆ ಹಿಂತಿರುಗುವ ಸ್ಥಿತಿಯಲ್ಲಿದ್ದ ಕೆಲವು ಚಾರಣಿಗರು ಬೆಳಗ್ಗೆ 11 ಗಂಟೆ ಸುಮಾರಿಗೆ ಶಿಬಿರದ ಕಡೆಗೆ ಹೊರಟಿದ್ದಾರೆ. ಮಾರ್ಗದರ್ಶಕ ಶಿಬಿರಕ್ಕೆ ಬಂದು, ಸಿಕ್ಕಿಬಿದ್ದ ಚಾರಣಿಗರನ್ನು ಕಾಪಾಡಲು ಬೇಕಾದ ಸಾಮಗ್ರಿಗಳೊಂದಿಗೆ ಮತ್ತೆ ಹಿಂತಿರುಗಿದ್ದಾರೆ. ಇದನ್ನೂ ಓದಿ: ಉತ್ತರಾಖಂಡದಲ್ಲಿ ಚಾರಣಕ್ಕೆ ತೆರಳಿದ್ದ ಕರ್ನಾಟಕದವರ ರಕ್ಷಣೆಗೆ ಕ್ರಮ – ಕೃಷ್ಣಬೈರೇಗೌಡಗೆ ರಕ್ಷಣಾ ಕಾರ್ಯದ ಹೊಣೆ

ಜೂನ್ 4 ರ ಸಂಜೆ ವೇಳೆಗೆ ಮಾರ್ಗದರ್ಶಿಯು ಫೋನ್ ಸಿಗ್ನಲ್ ಲಭ್ಯವಿರುವ ಸ್ಥಳವನ್ನು ತಲುಪಿಕೊಂಡಿದ್ದು, ಪರಿಸ್ಥಿತಿಯ ಬಗ್ಗೆ ಕರ್ನಾಟಕ ಪರ್ವತಾರೋಹಣ ಸಂಸ್ಥೆ ಮತ್ತು ಭಾರತೀಯ ಪರ್ವತಾರೋಹಣ ಒಕ್ಕೂಟ ಸಂಸ್ಥೆಗಳಿಗೆ ದುರ್ಘಟನೆಯ ಬಗ್ಗೆ ಮಾಹಿತಿ ನೀಡಿ ಎಚ್ಚರಿಸಿದ್ದಾರೆ. ಕರ್ನಾಟಕ ಮತ್ತು ಉತ್ತರಾಖಂಡ ಸರ್ಕಾರಗಳು ಜೂನ್ 4 ರ ರಾತ್ರಿ ವೇಳೆಗೆ ರಕ್ಷಣಾ ಕಾರ್ಯಾಚರಣೆಗಳ ಸಿದ್ಧತೆಗಳನ್ನು ಪ್ರಾರಂಭಿಸಿತ್ತು. ಭೂ ಸೇನೆ, ವಾಯುಪಡೆ, ಎಸ್‌ಡಿಆರ್‌ಎಫ್ ಮತ್ತು ವಿವಿಧ ಸರ್ಕಾರಿ-ಸರ್ಕಾರೇತರ ಸಂಸ್ಥೆಗಳು ಜೂನ್ 5 ರ ಬೆಳಿಗ್ಗೆ 5 ಗಂಟೆ ವೇಳೆಗೆ ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿವೆ ಎಂದು ಸಚಿವರು ಟ್ವೀಟ್‌ ಮಾಡಿ ಮಾಹಿತಿ ನೀಡಿದ್ದಾರೆ.

ಚಾರಣಕ್ಕೆ ಹೋಗಿದ್ದವರು ಇವರು
ಭರತ್‌ ಬೊಮ್ಮನ ಗೌಡರ್‌, ಆಶಾ ಸುಧಾಕರ್‌, ಕೆ.ಪಿ.ಪದ್ಮನಾಭ, ವಿವೇಕ್‌ ಶ್ರೀಧರ್‌, ಸೌಮ್ಯಾ ಕನಾಲೆ, ಬಿ.ಎಸ್‌.ಜಯಪ್ರಕಾಶ್‌, ಎಸ್‌.ಸುಧಾಕರ್‌, ಸಿಂಧು ವಕೇಕಮಲ್‌, ರಿತಿಕಾ ಜಿಂದಾಲ್‌, ಎ.ನವೀನ್‌, ಎಸ್‌.ಶಿವ ಜ್ಯೋತಿ, ಎಂ.ಕೆ.ವಿನಯ್‌, ಶೀನಾ ಲಕ್ಷ್ಮಿ, ಕೆ.ಎನ್.ವೆಂಕಟೇಶ ಪ್ರಸಾದ್‌, ಅನಿತಾ ರಂಗಪ್ಪ, ಪದ್ಮಿನಿ ಹೆಗ್ಡೆ, ಮಧು ಕಿರಣ್‌ ರೆಡ್ಡಿ, ಚಿತ್ರಾ ಪ್ರಣೀತ್‌, ವಿನಾಯಕ್‌ ಮುಂಗರ್‌ವಾಡಿ, ಸುಜಾತಾ ಮುಂಗುರ್‌ವಾಡಿ, ಸ್ಮೃತಿ ಡೋಲಸ್‌, ಅನಿಲ್‌ ಭಟ್ಟ. ಇದನ್ನೂ ಓದಿ:

Share This Article