ಬಿಜೆಪಿ ಅವಿಶ್ವಾಸ ನಿರ್ಣಯ ಮಂಡನೆ ಮಾಡಲಿ – ಕೃಷ್ಣ ಬೈರೇಗೌಡ ಸವಾಲು

Public TV
1 Min Read

ಬೆಂಗಳೂರು: ಪ್ರತಿಪಕ್ಷ ಬಿಜೆಪಿಗೆ ವಿಶ್ವಾಸ ಇದ್ದರೆ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ ಮಾಡಲಿ ಎಂದು ಕೃಷ್ಣ ಬೈರೇಗೌಡ ಅವರು ಸವಾಲು ಎಸೆದಿದ್ದಾರೆ.

ಸಚಿವ ಸಂಪುಟ ಸಭೆಯ ಬಳಿಕ ಮಾತನಾಡಿದ ಅವರು, ಸಂಪುಟ ಸಭೆಯಲ್ಲಿ ಪ್ರಸಕ್ತ ರಾಜಕೀಯ ಬೆಳವಣಿಗೆಗಳ ಬಗ್ಗೆ ಚರ್ಚೆ ನಡೆಸಲಾಯಿತು. ಇದುವರೆಗೆ ಮೈತ್ರಿ ಸರ್ಕಾರ ಮೇಲೆ ಬಿಜೆಪಿ ನಡೆಸುತ್ತಿರುವ 7ನೇ ದಾಳಿ ಇದಾಗಿದೆ. ಇದುವರೆಗೂ ಎಲ್ಲಾ ದಾಳಿಗಳನ್ನು ಮೆಟ್ಟಿ ನಿಂತಿದ್ದೇವೆ. ಈ ಬಾರಿ ಹೆಚ್ಚಿನ ಮಟ್ಟದಲ್ಲಿ ದಾಳಿ ಆಗಿದೆ. ಒಗ್ಗಟ್ಟಿನಿಂದ ಏನೆಲ್ಲಾ ಅವಕಾಶಗಳಿದೆ ಅವುಗಳನ್ನು ಬಳಕೆ ಮಾಡಿಕೊಂಡು ಸರ್ಕಾರ ಉಳಿಸಿಕೊಳ್ಳುವ ತೀರ್ಮಾನ ಮಾಡಲಾಯಿತು ಎಂದರು.

ಬಿಜೆಪಿ ಅವರು ಸಂಖ್ಯಾಬಲ ಇಲ್ಲ ಎಂದು ಆರೋಪ ಮಾಡಿದ್ದಾರೆ. ಆದರೆ ಅವರಿಗೆ ಅಷ್ಟು ವಿಶ್ವಾಸ ಇದ್ದರೆ, ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಾಡಲಿ ಎಂದರು. ಅಲ್ಲದೇ ರಾಜ್ಯ ಸರ್ಕಾರ ರಾಜ್ಯಪಾಲರ ಎಲ್ಲ ಸಲಹೆ, ಸೂಚನೆಗಳನ್ನು ಪಾಲಿಸುತ್ತದೆ. ನಾಳೆಯಿಂದ ಸದನ ಆರಂಭ ಆಗಲಿದ್ದು, ಸರ್ಕಾರ ಹಣಕಾಸು ವಿಧೇಯಕವನ್ನು ಮತಕ್ಕೆ ಹಾಕಲಿದೆ. ಆಗ ನಮಗೆ ಬಹುಮತ ಇದೆಯೋ ಇಲ್ವೋ ಗೊತ್ತಾಗುತ್ತದೆ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದರು.

ಇದೇ ವೇಳೆ ಸಂಪುಟ ಸಭೆಯಲ್ಲಿ ಬಿಬಿಎಂಪಿ ವಿಭಜನೆ ಮಸೂದೆ ಹಿಂಪಡೆಯುವ ಬಗ್ಗೆ ಮಾಹಿತಿ ನೀಡಿದರು. ಅಲ್ಲದೇ ಬಿ.ಎಸ್ ಪಾಟೀಲ್ ಕಮಿಟಿ ವರದಿ ತಿರಸ್ಕಾರ ಮಾಡಿಲ್ಲ, ಬೇರೆ ರೀತಿ ಅನುಷ್ಠಾನ ಗೊಳಿಸುವ ಕುರಿತು ಚಿಂತನೆ ಮಾಡುತ್ತಿದ್ದೇವೆ ಎಂದು ಸ್ಪಷ್ಟನೆಯನ್ನು ನೀಡಿದರು.

ನಗರಾಭಿವೃದ್ಧಿ ಇಲಾಖೆ ವತಿಯಿಂದ ಕುಷ್ಟಗಿ ತಾಲ್ಲೂಕಿನ ತಾವರಗೆಡ ಗ್ರಾಮಕ್ಕೆ ನೀರಾವರಿಗೆ 88 ಕೋಟಿ ರೂ. ಮೇಲುಕೋಟೆಯ ಎಲ್ಲಾ ಕಲ್ಯಾಣಿಗಳ ಅಭಿವೃದ್ಧಿಗೆ 32 ಕೋಟಿ, ಮಂಡ್ಯದಲ್ಲಿ ಲೋಕ ಪಾವನ ನದಿಯಿಂದ ಕೆರೆ ತುಂಬಲು 30 ಕೋಟಿ ರೂ. ಹಣವನ್ನು ಬಿಡುಗಡೆ ಮಾಡಲು ಒಪ್ಪಿಗೆ ನೀಡಲಾಯಿತು ಎಂದು ಹೇಳಿದರು.

Share This Article
Leave a Comment

Leave a Reply

Your email address will not be published. Required fields are marked *