ಜಿಲ್ಲೆಯಲ್ಲಿ 436 ಮನೆಗಳಿಗೆ ಹಾನಿಯಾಗಿದ್ದು, 5 ಲಕ್ಷ ರೂ. ಪರಿಹಾರದ ವ್ಯವಸ್ಥೆ: ಸುಧಾಕರ್

Public TV
1 Min Read

ಚಿಕ್ಕಬಳ್ಳಾಪುರ: ಅಕಾಲಿಕ ಮಳೆಗೆ ಜಿಲ್ಲೆಯಲ್ಲಿ 436 ಮನೆಗಳು ಹಾನಿಗೊಳಗಾಗಿದ್ದು, ಮನೆ ಕಳೆದುಕೊಂಡವರಿಗೆ 5 ಲಕ್ಷ ರೂಪಾಯಿ ಪರಿಹಾರದ ವ್ಯವಸ್ಥೆ ಮಾಡಿಕೊಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸುಧಾಕರ್ ಹೇಳಿದ್ದಾರೆ.

ಚಿಕ್ಕಬಳ್ಳಾಪುರದಲ್ಲಿ ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಪ್ರಮಾಣದ ಮಳೆ ನನ್ನ ಜೀವನದಲ್ಲಿ ಇದೇ ಮೊದಲ ಬಾರಿಗೆ ನೋಡಿದ್ದೇನೆ. ಅನೇಕ ಕೆರೆಗಳು ತುಂಬಿ ಹರಿದು ಬೆಳೆಗಳು ನಾಶವಾಗಿ ರೈತ ಸಮುದಾಯಕ್ಕೆ ನಷ್ಟವಾಗಿದೆ. ಅಕಾಲಿಕ ಮಳೆಗೆ ಜಿಲ್ಲೆಯಲ್ಲಿ 436 ಮನೆಗಳಿಗೆ ಹಾನಿಯಾಗಿವೆ. ಮನೆ ಕಳೆದುಕೊಂಡವರಿಗೆ 5 ಲಕ್ಷ ರೂ. ಪರಿಹಾರದ ವ್ಯವಸ್ಥೆ ಮಾಡಿಕೊಡಲಾಗುವುದು. ಮಳೆ ನೀರಿನಿಂದ ಬರುವ ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ಕ್ರಮ ಕೈಗೊಳ್ಳುತ್ತದೆ ಎಂದರು.

ಮುಂದಿನ ಎರಡ್ಮೂರು ದಿನ ಮಳೆ ಇರುವುದರಿಂದ ಜಿಲ್ಲೆಯ ಸಮಸ್ಯೆಗಳ ಕುರಿತು ಕ್ರಮಕ್ಕೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಎಲ್ಲಾ ತಾಲೂಕುಗಳಿಗೆ ಭೇಟಿ ನೀಡಲಿದ್ದು, ರಾಜಕಾಲುವೆ ಒತ್ತುವರಿ ತೆರವಿಗೆ ಸೂಚನೆ ನೀಡಲಾಗಿದೆ. ತಗ್ಗು, ಮುಳುಗಡೆ ಪ್ರದೇಶಗಳಲ್ಲಿ ಮನೆ ನಿರ್ಮಾಣ ಮಾಡಿಕೊಂಡು ಸರ್ಕಾರದ ದೂರಿದರೆ ಪ್ರಯೋಜನವಿಲ್ಲ. ರಾಜಕಾಲುವೆಗಳನ್ನ ಯಾರೇ ಒತ್ತುವರಿ ಮಾಡಿಕೊಂಡಿದ್ದರೆ ಮುಲಾಜಿಲ್ಲದೇ ತೆರವು ಮಾಡಬೇಕು ಅಧಿಕಾರಿಗಳಿಗೆ ಸಚಿವ ಸುಧಾಕರ್ ಖಡಕ್ ಸೂಚನೆ ನೀಡಿದ್ದಾರೆ. ಇದನ್ನೂ ಓದಿ: ಆಂಧ್ರಪ್ರದೇಶದಲ್ಲಿ ವರುಣನ ಆರ್ಭಟ – 14 ಮಂದಿ ಸಾವು, 10ಕ್ಕೂ ಹೆಚ್ಚು ಮಂದಿ ನಾಪತ್ತೆ

ಕಳೆದ 40 ವರ್ಷಗಳಲ್ಲೇ ಅತ್ಯಧಿಕ ಮಳೆ ಚಿಕ್ಕಬಳ್ಳಾಪುರದಲ್ಲಾಗಿದೆ. ಬರದ ನಾಡು ಚಿಕ್ಕಬಳ್ಳಾಪುರದಲ್ಲಿ ಮಲೆನಾಡಿನ ವೈಭವದಂತಾಗಿದೆ. ಈಗಾಗಲೇ ಮಳೆಗೆ ಮೂರು ಜನ ಕೊಚ್ಚಿ ಹೋಗಿದ್ದಾರೆ. ಇನ್ನಾದರೂ ಜನ ಎಚ್ಚೆತ್ತುಕೊಳ್ಳಬೇಕು. ಸಾಮಾಜಿಕ ಜಾಲತಾಣಗಳ ಮೂಲಕ ಪ್ರಕೃತಿ ವಿಕೋಪ ತಡೆ ಹಾಗೂ ಅರಿವಿಗೆ ಜಿಲ್ಲಾಡಳಿತ ಸಜ್ಜುಗೊಳಿಸುತ್ತಿದೆ. ಪಕ್ಷ ಬೇಧ ಮಾಡದೇ ಸಮತೋಲನದಲ್ಲಿ ಜನರ ಸಮಸ್ಯೆಗಳಿಗೆ ಒತ್ತು ನೀಡಲಾಗುವುದು ಎಂದು ತಿಳಿಸಿದರು.

Share This Article
Leave a Comment

Leave a Reply

Your email address will not be published. Required fields are marked *