ಚೈನಾದಿಂದ ಹೊರ ಬರುತ್ತಿರುವ ಕಂಪನಿಗಳನ್ನ ಸೆಳೆಯಲು ರಾಜ್ಯ ಸರ್ಕಾರದಿಂದ ಪ್ಲಾನ್

Public TV
2 Min Read

– ಕೈಗಾರಿಕೋದ್ಯಮಿಗಳೊಂದಿಗೆ ಸಚಿವ ಜಗದೀಶ್ ಶೆಟ್ಟರ್ ಸಮಾಲೋಚನೆ

ಬೆಂಗಳೂರು: ಕೋವಿಡ್-19 ಲಾಕ್‍ಡೌನ್ ನಂತರ ರಾಜ್ಯದ ಆರ್ಥಿಕತೆಗೆ ಉತ್ತೇಜನ ನೀಡಲು ಹಾಗೂ ಚೈನಾ ದೇಶದಿಂದ ಹೊರ ಬರುತ್ತಿರುವ ಕಂಪನಿಗಳನ್ನು ರಾಜ್ಯಕ್ಕೆ ಸೆಳೆಯುವ ಬಗ್ಗೆ ಇಂದು ವಿಧಾನಸೌಧದಲ್ಲಿ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವರಾದ ಜಗದೀಶ್ ಶೆಟ್ಟರ್ ಅವರ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ ನಡೆಯಿತು.

ರಾಜ್ಯದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್, ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಗೌರವ್ ಗುಪ್ತಾ ಜೊತೆಯಲ್ಲಿ ರಾಜ್ಯದ ಪ್ರಮುಖ ಕೈಗಾರಿಕೋದ್ಯಮಿಗಳಾದ ಇನ್ಫೋಸಿಸ್‍ನ ನಾನ್ ಎಕ್ಸಿಕ್ಯೂಟಿವ್ ಚೇರ್ಮನ್ ನಂದನ್ ನೀಲೇಕಣಿ, ಬಯೋಕಾನ್ ಚೇರ್ ಪರ್ಸನ್ ಕಿರಣ್ ಮಜುಂದಾರ್ ಷಾ ಹಾಗೂ ಇನ್ಫೋಸಿಸ್‍ನ ಸಿಇಓ ಕ್ರಿಸ್ ಗೋಪಾಕೃಷ್ಣನ್ ಅವರ ಜೊತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಮಾಲೋಚನೆಯನ್ನು ನಡೆಸಲಾಯಿತು.

ವಿಡಿಯೋ ಕನ್ಫರೆನ್ಸ್ ನಲ್ಲಿ ಮಾತನಾಡಿದ ಕೈಗಾರಿಕ ಸಚಿವ ಜಗದೀಶ್ ಶೆಟ್ಟರ್, ಲಾಕ್‍ಡೌನ್ ಸಮಯದಲ್ಲಿ ಕೈಗಾರಿಕೆಗಳ ಪ್ರಾರಂಭಕ್ಕೆ ರಾಜ್ಯ ಸರ್ಕಾರ ಕೈಗೊಂಡ ಕ್ರಮಗಳು ಹಾಗೂ ಮುತುವರ್ಜಿಯ ಬಗ್ಗೆ ಮಾಹಿತಿಯನ್ನು ನೀಡಿದರು. ಇದೇ ವೇಳೆ ರಾಜ್ಯ ಸರ್ಕಾರ ರಾಜ್ಯಕ್ಕೆ ಕೈಗಾರಿಕೆಗಳನ್ನು ಸೆಳೆಯುವ ನಿಟ್ಟಿನಲ್ಲಿ ಹೂಡಿಕೆ ಸ್ನೇಹಿ ಕ್ರಮಗಳನ್ನು ಕೈಗೊಳ್ಳುತ್ತಿರುವ ಬಗ್ಗೆ ತಿಳಿಸಿದರು.

ಕೈಗಾರಿಕೋದ್ಯಮಿಗಳಾದ ನಂದನ್ ನೀಲೇಕಣಿ, ಕಿರಣ್ ಮಜುಂದಾರ್ ಷಾ ಹಾಗೂ ಕ್ರಿಸ್ ಗೋಪಾಕೃಷ್ಣನ್ ಕೊರೊನಾ ಮಹಾಮಾರಿಯನ್ನು ನಿಯಂತ್ರಣದಲ್ಲಿಡಲು ರಾಜ್ಯ ಸರ್ಕಾರ ಕೈಗೊಂಡ ಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ರಾಜ್ಯದ ಕೈಗಾರಿಕಾ ಕ್ಷೇತ್ರದ ಸಕಾರಾತ್ಮಕ ಮನೋಭಾವನೆಯನ್ನು ಬೆಳೆಸುವ ನಿಟ್ಟಿನಲ್ಲಿ ಹಲವಾರು ಸಲಹೆಗಳನ್ನು ನೀಡಿದರು. ಏಕಗವಾಕ್ಷಿ ಅರ್ಜಿಗಳ ವಿಲೇವಾರಿಯನ್ನು ಮತ್ತಷ್ಟು ಪರಿಣಾಮಕಾರಿಯಾಗಿಸುವುದು, ಭೂಮಿಯನ್ನು ಕೊಳ್ಳುವ ಹಾಗೂ ಪರಭಾರೆ ಮಾಡಿಕೊಳ್ಳುವ ನಿಯಮಗಳ ಸಡಲಿಕೆ, ರಾಜ್ಯದಲ್ಲಿ ನೂತನ ಕಾರ್ಖಾನೆಯನ್ನು ಪ್ರಾರಂಭಿಸಲು ಇರುವ ನಿಯಮಗಳಲ್ಲಿ ಸ್ಪಷ್ಟತೆ ತರುವುದು ಹೀಗೆ ಹತ್ತು ಹಲವು ಸಲಹೆಗಳನ್ನು ನೀಡಿದರು.

ಕೊರೊನಾ ಮಹಮಾರಿಯ ನಂತರ ಹಲವಾರು ಕಂಪನಿಗಳು ಚೈನಾ ದೇಶದಿಂದ ತಮ್ಮ ಉತ್ಪಾದನಾ ಕಾರ್ಖಾನೆಗಳನ್ನು ಹೊರ ಬರಲು ಯೋಚನೆ ನಡೆಸುತ್ತಿವೆ. ಈ ಸನ್ನಿವೇಶದ ಸದುಪಯೋಗವನ್ನು ಪಡೆದುಕೊಳ್ಳವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮುಂದಾಗಬೇಕು. ಹೊರ ಬರುತ್ತಿರುವ ನೂರು ಕಂಪನಿಗಳ ಲಿಸ್ಟ್ ಅನ್ನು ತಯಾರಿಸಿ ಆ ಕಂಪನಿಗಳ ಜೊತೆ ಚರ್ಚೆ ಮಾಡಬೇಕು. ಈ ಹಂತದಲ್ಲಿ ಆ ಕೈಗಾರಿಕೆಗಳ ಸಿಇಓಗಳ ಜೊತೆ ಸಭೆ ನಡೆಸಲು ಕೈಗಾರಿಕೋದ್ಯಮಿಗಳು ಅಗತ್ಯ ಸಹಾಯ ನೀಡುವ ಭರವಸೆಯನ್ನು ನೀಡಿದರು.

ಕೈಗಾರಿಕೋದ್ಯಮಿಗಳು ನೀಡಿದ ಸಲಹೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಸಚಿವರು, ಮುಂದಿನ ಕ್ರಮಗಳನ್ನು ಕೈಗೊಳ್ಳುವುದಾಗಿ ಭರವಸೆ ನೀಡಿದರು. ಜೊತೆಗೆ ನೂತನ ಕೈಗಾರಿಕಾ ನೀತಿ ಸದ್ಯದಲ್ಲೇ ಹೊರ ಬೀಳಲಿದ್ದು, ಎಂಎಸ್‍ಎಂಇ ಕೈಗಾರಿಕೆಗಳಿಗೆ ಪರಿಹಾರ ನೀಡುವ ಪ್ಯಾಕೇಜ್ ತರುವ ಬಗ್ಗೆ ಸರ್ಕಾರದ ಜೊತೆ ಚರ್ಚೆ ನಡೆಯುತ್ತಿದೆ ಎಂದು ಹೇಳಿದರು.

ಸಭೆಯಲ್ಲಿ ರಾಜ್ಯದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್, ವಾಣಿಜ್ಯ ಹಾಗೂ ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಾದ ಗೌರವ್ ಗುಪ್ತಾ, ಕೈಗಾರಿಕಾ ಇಲಾಖೆಯ ಆಯುಕ್ತೆ ಶ್ರಿಮತಿ ಗುಂಜನ್ ಕೃಷ್ಣ ಪಾಲ್ಗೊಂಡಿದ್ದರು.

Share This Article
Leave a Comment

Leave a Reply

Your email address will not be published. Required fields are marked *