ಮಂಗ್ಳೂರಲ್ಲಿ ಬಾಂಬ್ ಇಟ್ಟಿದ್ದು ಪೊಲೀಸರೇ ಎಂದು ಹೇಳುತ್ತೀರಾ: ಸಚಿವ ಈಶ್ವರಪ್ಪ ಪ್ರಶ್ನೆ

Public TV
2 Min Read

ಶಿವಮೊಗ್ಗ: ಮಂಗಳೂರಿನಲ್ಲಿ ಬಾಂಬ್ ಪತ್ತೆಯಾದ ವಿಚಾರದಲ್ಲಿ ಯಾವುದೇ ಭದ್ರತಾ ವೈಫಲ್ಯವಾಗಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಸಮರ್ಥಿಸಿಕೊಂಡಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂಗಳೂರು ವಿಮಾನ ನಿಲ್ದಾಣದ ಬಳಿ ಪತ್ತೆಯಾದ ಬಾಂಬ್ ಪ್ರಕರಣದಲ್ಲಿ ಯಾವುದೇ ಭದ್ರತಾ ವೈಫಲ್ಯವಾಗಿಲ್ಲ. ಹಿಂದೆ ಇಂದಿರಾ ಗಾಂಧಿಯವರನ್ನು ಹೊಡೆದು ಹಾಕಿದ್ದರು. ವೈಟ್ ಹೌಸ್ ಮೇಲೆಯೇ ಬಾಂಬ್ ಹಾಕಿದ್ದರು. ಇವೆಲ್ಲವೂ ಭದ್ರತಾ ವೈಫಲ್ಯ ಎಂದು ಹೇಳಲಿಕ್ಕೆ ಆಗುತ್ತಾ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಮಂಗಳೂರಲ್ಲಿ ಬಾಂಬ್ ಪತ್ತೆ, ಪೊಲೀಸರು ಮತ್ತೊಂದು ಕಥೆ ಸೃಷ್ಟಿಸದಿರಲಿ: ಹೆಚ್‍ಡಿಕೆ

ಈ ಪ್ರಕರಣದಲ್ಲಿ ಹಾಗೂ ದುಷ್ಟ ಶಕ್ತಿಗಳನ್ನು ಹಿಮ್ಮೆಟ್ಟಿಸುವ ವಿಚಾರದಲ್ಲಿ ಯಾವುದೇ ಪಕ್ಷದವರಾಗಲೀ, ಸಂಸ್ಥೆಯವರಾಗಲೀ ರಾಜಕೀಯ ಮಾಡ್ದೆ ಎಲ್ಲರೂ ಒಟ್ಟಾಗಿದ್ದು, ಇಂತಹ ಹೀನ ಕೆಲಸ ಮಾಡುವವರಿಗೆ ತಕ್ಕ ಪಾಠ ಕಲಿಸಬೇಕಿದೆ ಎಂದರು.

ಮಂಗಳೂರು ಗಲಭೆ ಸಂಭವಿಸಿದ ವೇಳೆ ಪೊಲೀಸರು ಬಹಳ ಯಶಸ್ವಿಯಾಗಿ ನಿಯಂತ್ರಿಸಿದ್ದರು. ಆಗ ನಿಜಕ್ಕೂ ಗಲಭೆಕೋರರಿಗೆ ಭಯ ಉಂಟಾಗಿತ್ತು. ಆದರೆ ಕಾಂಗ್ರೆಸ್, ಜೆಡಿಎಸ್ ನವರು ಪೊಲೀಸರದ್ದೇ ತಪ್ಪು ಎಂದು ಹೇಳಿದರು. ಇದರಿಂದ ಸಂಚುಕೋರರಿಗೆ ಕುಮ್ಮಕ್ಕು ಸಿಕ್ಕಿತು. ಜೆಡಿಎಸ್, ಕಾಂಗ್ರೆಸ್ಸಿನವರ ಬೆಂಬಲವಿದೆ ಎಂಬ ಭಾವನೆ ಬಂದಿತ್ತು. ಹಾಗಾಗಿಯೇ ಇಂದು ಬಾಂಬ್ ತಂದಿಟ್ಟಿದ್ದಾರೆ. ಈಗ ಕಾಂಗ್ರೆಸ್, ಜೆಡಿಎಸ್ ನವರು ಏನು ಹೇಳುತ್ತಾರೆ, ವಿಮಾನ ನಿಲ್ದಾಣದ ಬಳಿ ಪೊಲೀಸರು ಬಾಂಬ್ ತಂದು ಇಟ್ಟರು ಎಂದು ಹೇಳುತ್ತಾರಾ? ರಾಜಕೀಯ ಮಾಡುವ ಜಾಗದಲ್ಲಿ ಮಾಡೋಣಾ ಇದು ರಾಜ್ಯದ ಭದ್ರತೆಯ ವಿಚಾರ. ಪ್ರತಿಯೊಬ್ಬರು ರಾಜ್ಯದಲ್ಲಿ ನೆಮ್ಮದಿಯಿಂದ ಇದ್ದಾರೆ. ಇದನ್ನು ಸಹಿಸದ ಕೆಲ ವ್ಯಕ್ತಿಗಳು ಕುತಂತ್ರ ರಾಜಕಾರಣ ಮಾಡಲು ಪ್ರಯತ್ನ ಮಾಡಿದರು. ಅವರಿಗೆ ಪೊಲೀಸರಿಂದ ಸರಿಯಾದ ಬಿಗಿ ಕ್ರಮವಾಯಿತು. ರಾಜ್ಯದ ಹಿತದೃಷ್ಟಿಯಿಂದ ಈ ರೀತಿಯ ದುಷ್ಕೃತ್ಯ ಮಾಡುವವರ ವಿರುದ್ಧ ಎಲ್ಲ ಪಕ್ಷದವರು ಒಂದಾಗಬೇಕಿದೆ ಎಂದರು.

ಕಾಂಗ್ರೆಸ್-ಜೆಡಿಎಸ್‍ನವರ ಬೆಂಬಲ ಇದೆ ಎಂದು ಬಾಂಬ್ ಇಟ್ಟಿದ್ದಾರೆ. ಈ ಕುಮ್ಮಕ್ಕು ಕೊಡುವ ವ್ಯವಸ್ಥೆಯನ್ನು ಯಾವುದೇ ಕಾರಣಕ್ಕೂ ರಾಜಕೀಯ ಪಕ್ಷಗಳು ಮಾಡಬಾರದು. ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಎನ್ನದೆ ಎಲ್ಲರೂ ಒಟ್ಟಾಗಿ ದುಷ್ಕರ್ಮಿಗಳನ್ನು ಸೆದೆ ಬಡಿಯುವ ಕೆಲಸ ಆಗಬೇಕಿದೆ. ಈಗಾಗಲೇ ಸಿಸಿಟಿವಿಯಲ್ಲಿ ಬಾಂಬ್ ಇಟ್ಟಿರುವ ದೃಶ್ಯ ಸಹ ಸಿಕ್ಕಿದೆ. ಇದರಲ್ಲೂ ರಾಜಕೀಯ ಹುಡುಕಲು ಯಾರು ಹೋಗಬೇಡಿ ಎಂದು ಮನವಿ ಮಾಡಿದ್ದಾರೆ.

ಮುಂದಿನ ದಿನಗಳಲ್ಲಿ ಕ್ಯಾಬಿನೆಟ್ ಸಭೆಯಲ್ಲಿ ಚರ್ಚಿಸಿ, ಪಿಎಫ್‍ಐ ಮತ್ತು ಎಸ್‍ಡಿಪಿಐ ಸಂಘಟನೆಗಳನ್ನು ನಿಷೇಧಿಸುವ ಬಗ್ಗೆ ತೀರ್ಮಾನಿಸಲಾಗುವುದು ಎಂದು ಇದೇ ವೇಳೆ ಈಶ್ವರಪ್ಪ ತಿಳಿಸಿದರು.

Share This Article
Leave a Comment

Leave a Reply

Your email address will not be published. Required fields are marked *