ಸಚಿವ ಸಂಪುಟ ವಿಸ್ತರಣೆ – ಮೈತ್ರಿ ಸರ್ಕಾರ ಉಳಿಸಿಕೊಳ್ಳೋ ಪ್ರಯತ್ನದ ಒಂದು ಭಾಗ: ಸದಾನಂದ ಗೌಡ

Public TV
1 Min Read

ಬೆಂಗಳೂರು: ರಾಜ್ಯ ಸರ್ಕಾರ ಜನರ ಸೇವೆ ಮಾಡಲು ಯಾವುದೇ ಕ್ರಮಕೈಗೊಳ್ಳದೆ, ಸಚಿವ ಸಂಪುಟ ವಿಸ್ತರಣೆ ಹೆಸರಿನಲ್ಲಿ ಸರ್ಕಾರ ಉಳಿಸಿಕೊಳ್ಳಲು ಆಡುತ್ತಿರುವ ನಾಟಕದ ಒಂದು ಭಾಗ ಅಷ್ಟೇ ಎಂದು ಕೇಂದ್ರ ಸಚಿವ ಸದಾನಂದ ಗೌಡ ಹೇಳಿದ್ದಾರೆ.

ಕೇಂದ್ರ ಸಚಿವರಾದ ಬಳಿಕ ಆದಿಚುಂಚನ ಗಿರಿ ಮಠಕ್ಕೆ ಇಂದು ಮೊದಲ ಬಾರಿಗೆ ಭೇಟಿ ನೀಡಿ ಮಾತನಾಡಿದ ಅವರು, ರಾಜ್ಯಸರ್ಕಾರ ಅಭಿವೃದ್ಧಿ ಮಾಡಬೇಕು. ಒಂದು ಒಳ್ಳೆಯ ಸಂಪುಟ ರಚನೆ ಮಾಡಬೇಕು. ಆದರೆ ಮೈತ್ರಿ ಪಕ್ಷಗಳು ಸಂಪುಟ ವಿಸ್ತರಣೆ ಮಾಡುತ್ತಿಲ್ಲ. ಬದಲಾಗಿ ಸಮ್ಮಿಶ್ರ ಸರ್ಕಾರ ಉಳಿವಿಗೆ ಅವರು ಆಡುತ್ತಿರುವ ನಾಟಕದ ಒಂದು ಭಾಗವಷ್ಟೇ ಎಂದರು.

ಸಂಪುಟ ವಿಸ್ತರಣೆ ಮಾಡುವ ಆರಂಭದಿಂದ ನಿನ್ನೆವರೆಗೂ ಫಾರೂಕ್, ವಿಶ್ವನಾಥ್ ಅವರ ಹೆಸರು ಕೇಳಿ ಬರುತ್ತಿತ್ತು. ಇಂದು ಅವರೇ ಪಕ್ಷೇತರಾಗಿದ್ದಾರೆ. ಸರ್ಕಾರ ಭದ್ರ ಮಾಡಿಕೊಳ್ಳಬೇಕು ಅನ್ನೋ ಉದ್ದೇಶದಿಂದ ಇಬ್ಬರನ್ನು ಮಂತ್ರಿ ಮಾಡಿದ್ದಾರೆ. ಈಗಾಗಲೇ ಅವರಿಗೆ ಮಂತ್ರಿ ಸ್ಥಾನ ಕೊಟ್ಟು ಕೆಳಗಿಳಿಸಿದ್ದಾರೆ. ಮತ್ತೆ ಈಗ ಮಂತ್ರಿ ಮಾಡುತ್ತಿದ್ದಾರೆ. ಆ ಮೂಲಕ ಬೆಂಬಲ ವಾಪಸ್ ಪಡೆಯದಂತೆ ಮಾಡುತ್ತಿದ್ದು, ಇದು ಹೆಚ್ಚು ದಿನ ನಡೆಯುವುದಿಲ್ಲ ಎಂದರು.

ಇದೇ ವೇಳೆ ಆಪರೇಷನ್ ಕಮಲ ನಡೆಸುವುದಿಲ್ಲ ಎಂದು ಸ್ಪಷ್ಟನೆ ನೀಡಿದ ಸಚಿವರು, ಈ ಕುರಿತಂತೆ ಬಿಜೆಪಿ ಯಾರನ್ನೂ ಸಂಪರ್ಕಿಸಿಲ್ಲ. ಮೈತ್ರಿ ಸರ್ಕಾರವನ್ನು ಅವರೇ ಉಳಿಸಿಕೊಳ್ಳೋಕೆ ಈ ರೀತಿಯ ಆಡುತ್ತಿದ್ದಾರೆ. ಸಚಿವ ಸ್ಥಾನ ನೀಡಿ ಬೇರೆ ಪಕ್ಷಕ್ಕೆ ಹೋಗದೇ ಇರುವಂತೆ ಮಾಡಲು ಈ ತಂತ್ರಷ್ಟೇ. ಆ ಮೂಲಕ ಪಕ್ಷಾಂತರ ನಿಷೇಧ ಕಾರ್ಯವನ್ನು ಮೈತ್ರಿ ಪಕ್ಷಗಳ ನಡುವೆಯೇ ಮಾಡಿಕೊಂಡಿದ್ದಾರೆ ಎಂದರು.

ಮಠದ ಭೇಟಿ ಬಗ್ಗೆ ಪ್ರತಿಕ್ರಿಯೆ ನೀಡಿ, ಮಠದೊಂದಿಗೆ ನಾನು ದೀರ್ಘ ಸಂಪರ್ಕವನ್ನು ಹೊಂದಿದ್ದು, ಹಿರಿಯ ಗುರುಗಳು ನನಗೆ ಮೊದಲು ಮಾರ್ಗದರ್ಶನ ನೀಡುತ್ತಿದ್ದರು. ಈಗ ಕಿರಿಯ ಶ್ರೀಗಳು ಮಾರ್ಗದರ್ಶನ ಮಾಡುತ್ತಿದ್ದಾರೆ. ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮಕ್ಕೂ ಶ್ರೀಗಳು ಆಗಮಿಸಿದ್ದರು. ಅವರ ಭೇಟಿ ಮಾಡಿ ಆಶೀರ್ವಾದ ಪಡೆದಿದ್ದೇನೆ ಎಂದರು.

Share This Article
Leave a Comment

Leave a Reply

Your email address will not be published. Required fields are marked *