‘ಕೈ’ ತೆಲಂಗಾಣ ಗೆದ್ದಿದ್ದಕ್ಕೆ ಬಿಜೆಪಿ ಅಸೂಯೆ ಪಡುವ ಬದಲು ತಾನು ಗೆದ್ದ ರಾಜ್ಯಗಳಲ್ಲಿ ಸಿಎಂ ಆಯ್ಕೆ ಮಾಡಲಿ: ದಿನೇಶ್ ಗುಂಡೂರಾವ್

Public TV
2 Min Read

ಬೆಳಗಾವಿ: ತೆಲಂಗಾಣದಲ್ಲಿ ಪಕ್ಷ ವಹಿಸಿದ ಜವಾಬ್ದಾರಿಯನ್ನ ನಾವು ಒಗ್ಗಟ್ಟಾಗಿ ನಿರ್ವಹಿಸಿದ್ದೇವೆ. ದಕ್ಷಿಣ ಭಾರತದ ಎರಡನೇ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿದಿರುವುದಕ್ಕೆ ರಾಜ್ಯ ಬಿಜೆಪಿ ನಾಯಕರಿಕೆ ಸಹಿಸಿಕೊಳ್ಳಲು ಆಗುತ್ತಿಲ್ಲ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.

ಬೆಳಗಾವಿಯಲ್ಲಿ ಇಂದು (ಗುರುವಾರ) ಮಾಧ್ಯಮಗಳ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಸಚಿವ ದಿನೇಶ್ ಗುಂಡೂರಾವ್, ಕರ್ನಾಟಕ ಕಾಂಗ್ರೆಸ್ ನಾಯಕರು ತೆಲಂಗಾಣ ಚುನಾವಣೆಯಲ್ಲಿ ಕೆಲಸ ಮಾಡಿದ್ದರಲ್ಲಿ ತಪ್ಪೇನಿದೆ ಎಂದರು.

ರಾಜ್ಯದಲ್ಲಿ ಸಚಿವರಾಗಿ ನಮ್ಮ ಕರ್ತವ್ಯವವನ್ನು ನಾವು ಅರಿತಿದ್ದೇವೆ. ಜೊತೆಗೆ ತೆಲಂಗಾಣದಲ್ಲಿ ಪಕ್ಷ ವಹಿಸಿದ ಜವಾಬ್ದಾರಿಯನ್ನೂ ನಾವು ನಿಭಾಯಿದ್ದೇವೆ. ರಾಜ್ಯದ ಕಾಂಗ್ರೆಸ್ ನಾಯಕರಿಗೆ ತೆಲಂಗಾಣದಲ್ಲೇನು ಕೆಲಸ ಎಂಬ ಬಿಜೆಪಿ ಟೀಕೆ ಅರ್ಥಹೀನ ಎಂದರು.

ರಾಜ್ಯದ ನಾಯಕರಿಗೆ ತೆಲಂಗಾಣದ ಚುನಾವಣೆಯ ಮೇಲುಸ್ತುವಾರಿ ನೋಡಿಕೊಳ್ಳುವ ನಿಟ್ಟಿನಲ್ಲಿ ಪಕ್ಷದ ವತಿಯಿಂದ ನನ್ನನ್ನೂ ಸೇರಿದಂತೆ ರಾಜ್ಯದ ಪ್ರಮುಖ ಕಾಂಗ್ರೆಸ್ ನಾಯಕರಿಗೆ ಜವಾಬ್ದಾರಿ ವಹಿಸಿತ್ತು. ವಿಶೇಷವಾಗಿ ನನಗೆ ತೆಲಂಗಾಣದ ವಾರಂಗಲ್ ಜಿಲ್ಲೆಯ ಕ್ಷೇತ್ರಗಳ ಜವಾಬ್ದಾರಿ ನೀಡಲಾಗಿತ್ತು. ವಾರಂಗಲ್‌ನ 11 ಕ್ಷೇತ್ರಗಳಲ್ಲಿ ನಾವು 10 ಕ್ಷೇತ್ರಗಳನ್ನ ಗೆದ್ದಿದ್ದೇವೆ. ಆ ಭಾಗದಲ್ಲಿ ಕಾಂಗ್ರೆಸ್‌ಗೆ ಘಟಾನುಘಟಿ ನಾಯಕರೇ ಎದುರಾಳಿಯಾಗಿದ್ದರು. ಅವರನ್ನ ಸೋಲಿಸಿ ಕಾಂಗ್ರೆಸ್ ಅಭ್ಯರ್ಥಿಗಳನ್ನ ಗೆಲ್ಲಿಸುವಲ್ಲಿ ನಮ್ಮ ಕೆಲವು ರಾಜಕೀಯ ತಂತ್ರಗಾರಿಕೆಗಳು ಹಾಗೂ ನಮ್ಮ ಪಕ್ಷದ ಕಾರ್ಯಕ್ರಮಗಳು ಕೈ ಹಿಡಿದವು. ಅಲ್ಲದೇ ಜನರು ಕೂಡ ಕಾಂಗ್ರೆಸ್ ಮೇಲೆ ವಿಶ್ವಾಸವಿಟ್ಟು ಮತ ಚಲಾಯಿಸಿ ಘಟಾನುಘಟಿ ನಾಯಕರನ್ನ ಸೋಲಿಸಿದ್ದಾರೆ ಎಂದು ಹೇಳಿದರು.‌

ತೆಲಂಗಾಣ ಸಿಎಂ ಆಗಿ ಇಂದು ಅಧಿಕಾರ ಸ್ವೀಕರಿಸಿದ ರೇವಂತ್ ರೆಡ್ಡಿ ಅವರಿಗೆ ಅಭಿನಂದನೆ ಸಲ್ಲಿಸಿದ ದಿನೇಶ್ ಗುಂಡೂರಾವ್, ಫಲಿತಾಂಶ ಪ್ರಕಟವಾದ ಎರಡೇ ದಿನಗಳಲ್ಲಿ ಕಾಂಗ್ರೆಸ್ ಹೈಕಮಾಂಡ್ ಸಿಎಂ ಅಭ್ಯರ್ಥಿಯನ್ನ ಆಯ್ಕೆ ಮಾಡಿ ಸುಲಲಿತವಾಗಿ ಸರ್ಕಾರ ರಚಿಸಲು ಅನುವು ಮಾಡಿಕೊಟ್ಟಿತು. ಆದರೆ ಉತ್ತರ ಭಾರತದ ಮೂರು ರಾಜ್ಯಗಳಲ್ಲಿ‌ ಗೆದ್ದಿರುವ ಬಿಜೆಪಿಗೆ ಇನ್ನೂ ಒಬ್ಬ ಸಿಎಂ ಅಭ್ಯರ್ಥಿಯನ್ನೂ ಆಯ್ಕೆ ಮಾಡಲು ಸಾಧ್ಯವಾಗಿಲ್ಲ ಎಂದು ಟೀಕಿಸಿದರು.

ದಕ್ಷಿಣ ಭಾರತದ ಎರಡನೇ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ ಅಂತಾ ಬಿಜೆಪಿ ಅಸೂಯೆ ಪಟ್ಟುಕೊಳ್ಳುವ ಬದಲು ತಾವು ಗೆದ್ದ ರಾಜ್ಯಗಳಲ್ಲಿ ಸರ್ಕಾರ ರಚಿಸುವತ್ತ ಗಮನ ಕೊಡಲಿ ಎಂದು ಇದೇ ವೇಳೆ ಸಚಿವ ದಿನೇಶ್ ಗುಂಡೂರಾವ್ ಬಿಜೆಪಿಗೆ ತಿರುಗೇಟು ನೀಡಿದರು.

Share This Article