ಧಾರವಾಡ(ಹುಬ್ಬಳ್ಳಿ): ನನ್ನ ಬಳಿ ಹಣ ಇದ್ದರೆ ಅಕ್ಕನ ಬ್ಯಾಗ್‍ನಲ್ಲಿ ಇಟ್ಟು ಕಳಿಸುತ್ತೇನೆ ಎಂದು ಸಚಿವ ಡಿ.ಕೆ.ಶಿವಕುಮಾರ್, ಸಂಸದೆ ಶೋಭಾ ಕರಂದ್ಲಾಜೆ ಅವರಿಗೆ ತಿರುಗೇಟು ಕೊಟ್ಟಿದ್ದಾರೆ.
ಕುಂದಗೋಳದಲ್ಲಿ ಚುನಾವಣಾ ಪ್ರಚಾರದ ವೇಳೆ ಮಾತನಾಡಿದ ಸಚಿವರು, ಕಾಂಗ್ರೆಸ್‍ನವರು ಹಣದ ಹೊಳೆ ಹರಿಸಿ ಚುನಾವಣೆ ಮಾಡುತ್ತಿದ್ದಾರೆ ಎಂದು ಶೋಭಾ ಕರಂದ್ಲಾಜೆ ಆರೋಪಿಸುತ್ತಾರೆ. ಅವರು ಚೀಲ ಕೇಳಿದರೆ ಅದನ್ನೇ ಗಿಫ್ಟ್ ಕೊಡುತ್ತೇನೆ ಎಂದು ಲೇವಡಿ ಮಾಡಿದರು. ಇದನ್ನೂ ಓದಿ: ಬಿಜೆಪಿ ಮುಖಂಡರೊಬ್ಬರಿಗೆ ಡಿಕೆಶಿಯಿಂದ 5.ಲಕ್ಷ ರೂ. ಆಮಿಷ: ಶೋಭಾ ಕರಂದಾಜ್ಲೆ
ಶಾಸಕ ಶ್ರೀಮಂತ ಕುಮಾರ್ ಪಾಟೀಲ್ ಅವರು ಕಾಂಗ್ರೆಸ್‍ನ ನಿಷ್ಠಾವಂತ ಕಾರ್ಯಕರ್ತರು. ತಮ್ಮ ಕ್ಷೇತ್ರದಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಆದಷ್ಟು ಬೇಗ ಪರಿಹಾರ ಕಂಡುಕೊಳ್ಳಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ. ಅವರು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರೊಂದಿಗೆ ಗುರುತಿಸಿಕೊಂಡಿಲ್ಲ. ಶಾಸಕರು ಪಕ್ಷವನ್ನು ಬಿಡುವುದಿಲ್ಲ ಎಂದು ಭರವಸೆ ನೀಡಿದರು.
ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಬೀಳಿಸುವ ಯತ್ನಗಳು ನಡೆದಿವೆ. ಬಿಜೆಪಿ ರಾಜ್ಯಾಧ್ಯಕ್ಷರಿಗೆ ನನ್ನನ್ನು ಕಂಡರೆ ಪ್ರೀತಿ. ಹೀಗಾಗಿ ಅವರು ನನ್ನನ್ನು ಹೆಚ್ಚು ನೆನಪಿಸಿಕೊಳ್ಳುತ್ತಾರೆ. ಅವರ ಜಪಕ್ಕೆ ನಾನು ಅಡ್ಡಿ ಮಾಡುವುದಿಲ್ಲ. ಬಿಜೆಪಿ ಮುಖಂಡ ಕೆ.ಎಸ್.ಈಶ್ವರಪ್ಪ ಅವರು ಏನು ಹೇಳಿದರೂ ನಮಗೆ ಬೇಜಾರಿಲ್ಲ ಎಂದು ಟಾಂಗ್ ಕೊಟ್ಟರು.
ದಿವಂಗತ ಸಿ.ಎಸ್.ಶಿವಳ್ಳಿ ಅವರ ಕನಸನ್ನು ಈಡೇರಿಸುವ ಕೆಲಸ ಮಾಡುತ್ತೇವೆ. ಕುಂದಗೋಳವನ್ನು ಮಾದರಿ ಕ್ಷೇತ್ರವಾಗಿ ಮಾಡುತ್ತೇವೆ. ಈ ನಿಟ್ಟಿನಲ್ಲಿ ಕ್ಷೇತ್ರದ ಜನರು ಕಾಂಗ್ರೆಸ್‍ಗೆ ಬೆಂಬಲ ನೀಡಬೇಕು ಎಂದು ಮನವಿ ಮಾಡಿಕೊಂಡರು.