ಒಪ್ಪಂದದಂತೆ 5 ವರ್ಷ ಅಧಿಕಾರ ನೀಡಿದ್ರೆ ಮಾತ್ರ ಬೆಂಬಲ: ‘ಕೈ’ ನಾಯಕರಿಗೆ ಎಚ್‍ಡಿಡಿ ಎಚ್ಚರಿಕೆ

Public TV
3 Min Read

– ಸಿದ್ದರಾಮಯ್ಯ ಸಿಎಂ ಆಗೋದಾದ್ರೆ ಜೆಡಿಎಸ್ ಬೆಂಬಲ ಇಲ್ಲ
– ಖರ್ಗೆ ಸಿಎಂ ಮಾಡೋಕೂ ಎಚ್‍ಡಿಡಿ ವಿರೋಧ

ಬೆಂಗಳೂರು: ಒಪ್ಪಂದದ ಪ್ರಕಾರ ಐದು ವರ್ಷ ಜೆಡಿಎಸ್‍ಗೆ ಅಧಿಕಾರ ಕೊಟ್ಟರೆ ಮಾತ್ರ ಬೆಂಬಲ ಕೊಡುತ್ತೇವೆ. ಇಲ್ಲ ಅಂದರೆ ನಾವು ಸರ್ಕಾರಕ್ಕೆ ಕೊಟ್ಟ ಬೆಂಬಲ ವಾಪಸ್ ಪಡೆಯುತ್ತೇವೆ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು, ಕಾಂಗ್ರೆಸ್ ಹೈಕಮಾಂಡ್‍ಗೆ ಖಡಕ್ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.

ಪದ್ಮನಾಭನಗರದ ಎಚ್.ಡಿ.ದೇವೇಗೌಡ ಅವರ ನಿವಾಸಕ್ಕೆ ಟ್ರಬಲ್ ಶೂಟರ್, ಸಚಿವ ಡಿ.ಕೆ.ಶಿವಕುಮಾರ್ ಭೇಟಿ ನೀಡಿ ಅರ್ಧ ಗಂಟೆಗೂ ಹೆಚ್ಚು ಸಮಯ ಮಾತುಕತೆ ನಡೆಸಿದ್ದಾರೆ. ಈ ವೇಳೆ ಎಚ್.ಡಿ.ದೇವೇಗೌಡ ಅವರು ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಅವರ ಶಿಷ್ಯರ ವಿರುದ್ಧ ಗುಡುಗಿದ್ದಾರೆ. ಅಷ್ಟೇ ಅಲ್ಲದೆ ಸಿಎಂ ಹುದ್ದೆ ಬದಲಾವಣೆಗೆ ಭಾರೀ ವಿರೋಧ ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ಕೆಲ ಶಾಸಕರು ಸಿದ್ದರಾಮಯ್ಯ ಅವರು ಸಿಎಂ ಆಗಲಿ ಎನ್ನುತ್ತಿದ್ದಾರೆ ಎಂದು ದೇವೇಗೌಡರ ಮುಂದೆ ಸಚಿವ ಡಿಕೆ ಶಿವಕುಮಾರ್ ಅವರು ವಿಷಯ ಪ್ರಸ್ತಾಪಿಸಿದ್ದಾರೆ. ಇದರಿಂದ ಕೆಂಡಾಮಂಡಲವಾದ ಎಚ್‍ಡಿಡಿ, ಸಾಧ್ಯವೇ ಇಲ್ಲ. ಸಿದ್ದರಾಮಯ್ಯ ಅವರು ಸಿಎಂ ಆಗುವುದಾದರೆ ನಮ್ಮ ಬೆಂಬಲವಿಲ್ಲ. ಈ ಎಲ್ಲ ಬೆಳವಣಿಗೆಗೆ ಕಾರಣವೇ ಸಿದ್ದರಾಮಯ್ಯ. ಹೀಗಿದ್ದೂ ನಾವು ಅವರಿಗೆ ಸಿಎಂ ಸ್ಥಾನ ಕೊಡುವುದಕ್ಕೆ ಹೇಗೆ ಸಾಧ್ಯ? ಅವರ ಶಿಷ್ಯಂದಿರೇ ರಾಜೀನಾಮೆ ಕೊಟ್ಟಿದ್ದಾರೆ. ಮಾಜಿ ಸಿಎಂ ಶಿಷ್ಯರ ಮೂಲಕ ಹೀಗೆ ಹೇಳಿಸುತ್ತಿದ್ದಾರೆ. ನಮ್ಮವರು ಯಾರೂ ಅದಕ್ಕೆ ಒಪ್ಪುವುದಿಲ್ಲ. ನಾಲ್ಕಾರು ಶಾಸಕರು ಹೇಳಿದಾಕ್ಷಣ ಸಿಎಂ ಮಾಡುವುಕ್ಕೆ ಆಗುವುದಿಲ್ಲ ಎಂದು ಕಡ್ಡಿ ಮುರಿದಂತೆ ತಿಳಿಸಿದ್ದಾರೆ.

ಮಾಜಿ ಸಂಸದ ಮಲ್ಲಿಕಾರ್ಜುನ ಖರ್ಗೆ ಅವರನ್ನು ಮುಖ್ಯಮಂತ್ರಿ ಮಾಡುವುದಕ್ಕೂ ಎಚ್.ಡಿ.ದೇವೇಗೌಡ ಅವರು ವಿರೋಧ ವ್ಯಕ್ತಪಡಿಸಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಸಿಎಂ ಮಾಡುವುಕ್ಕೂ ನಾವು ಒಪ್ಪುವುದಿಲ್ಲ. ದಲಿತ ಮುಖ್ಯಮಂತ್ರಿಯನ್ನು ಕಾಂಗ್ರೆಸ್ ಮಾಡಿಲ್ಲ. ಈಗ ನಾವ್ಯಾಕೆ ಮಾಡಬೇಕು. ಸರ್ಕಾರ ರಚಿಸಲು ಆಸಕ್ತಿ ತೋರಿದ್ದೇ ಕಾಂಗ್ರೆಸ್. ಈಗ ಸಿಎಂ ಬದಲಾವಣೆ ವಿಚಾರವನ್ನು ಪ್ರಸ್ತಾಪ ಮಾಡುವುದು ಎಷ್ಟು ಸರಿ ಎಂದು ಡಿ.ಕೆ.ಶಿವಕುಮಾರ್ ಅವರಿಗೆ ಪ್ರಶ್ನಿಸಿದ್ದಾರೆ.

ನೀವೇ ಸರ್ಕಾರ ಮಾಡಿ ಅಂದು ನಿಮ್ಮವರೇ ರಾಜೀನಾಮೆ ಕೊಡುತ್ತಿದ್ದಾರೆ. ನಿಮ್ಮ ಶಾಸಕರ ಜೊತೆ ನಮ್ಮ ಶಾಸಕರನ್ನು ಹಾಳು ಮಾಡಿದ್ದೀರಿ. ನಾವು ಬೇಡ ಅಂದರೂ ಸಿಎಂ ಆಗಿ ಅಂತ ಮಾಡಿ ಕೈ ಬಿಟ್ಟಿರಿ. ಸಿದ್ದರಾಮಯ್ಯ ಅವರ ಶಿಷ್ಯರೇ ಸರ್ಕಾರ ಬೀಳಿಸಲು ಪ್ಲ್ಯಾನ್ ಮಾಡಿದರೆ ಹೇಗೆ? ಸಿಎಂ ಬೆಂಗಳೂರಿಗೆ ಆಗಮಿಸಿದ ಮೇಲೆ ತೀರ್ಮಾನ ಕೈಗೊಳ್ಳುತ್ತೇವೆ. ಇನ್ನು ನಿಮ್ಮ ಸಹವಾಸ ಸಾಕು. ಕಾಂಗ್ರೆಸ್ ಹೈಕಮಾಂಡ್ ಜೊತೆ ನಾನೇ ಮಾತನಾಡುತ್ತೇನೆ. ಕಾಂಗ್ರೆಸ್ ಶಾಸಕರೇ ಮೈತ್ರಿ ಸರ್ಕಾರಕ್ಕೆ ಶತ್ರುಗಳಾಗಿದ್ದಾರೆ. ಹೀಗಾಗಿ ಸರ್ಕಾರ ಉಳಿಯಬೇಕು ಅಂತ ನಿಮಗೆ ಅನಿಸುತ್ತಿದೆಯಾ? ಕಾಂಗ್ರೆಸ್ ನಾಯಕರ ವರ್ತನೆಯಿಂದ ಬೇಸತ್ತಿದ್ದೇನೆ. ನಾವು ಎಷ್ಟು ಸಮಾಧಾನವಾಗಿ ಇದ್ದರೂ ನೀವೇ ತೊಂದರೆ ಕೊಡುತ್ತೀದ್ದೀರಾ ಎಂದು ಅಸಮಾಧಾನ ಹೊರ ಹಾಕಿದ್ದಾರೆ ಎನ್ನಲಾಗಿದೆ.

ಸರ್ಕಾರ ಇರಬೇಕಾ? ಬೇಡವೇ ಎನ್ನುವುದನ್ನು ನೀವೇ ನಿರ್ಧಾರ ಮಾಡಿ. ನಿಮ್ಮ ನಾಯಕರ ಜೊತೆ ಮಾತನಾಡಿ ಫೈನಲ್ ಮಾಡಿ ಹೇಳಿ. ಸರ್ಕಾರದಿಂದ ಹಿಂದೆ ಸರಿಯಲು ನಮಗೆ ಯಾವುದೇ ಹಿಂಜರಿಕೆ ಇಲ್ಲ. ನಿಮ್ಮ ಶಾಸಕರನ್ನು ಮನವೊಲಿಸುವುದು, ಬಿಡುವುದು ನಿಮಗೆ ಬಿಟ್ಟ ವಿಚಾರ. ಇಂದು ಸಂಜೆ ಒಳಗೆ ಒಂದು ಫೈನಲ್ ನಿರ್ಧಾರ ಹೇಳಿ. ನಿಮ್ಮ ನಾಯಕರು ಶಾಸಕರ ಮನವೊಲಿಸಲು ವಿಫಲವಾದರೆ ಸಿಎಂ ತಮ್ಮ ಹುದ್ದೆಗೆ ರಾಜೀನಾಮೆ ನೀಡುತ್ತಾರೆ. ಭಾನುವಾರ ಸಂಜೆ ನಮ್ಮ ಶಾಸಕರ ಸಭೆ ಇದೆ. ಸಭೆಯಲ್ಲಿ ನಮ್ಮ ನಿರ್ಧಾರ ಫೈನಲ್ ಮಾಡುತ್ತೇವೆ. ಇಷ್ಟೆಲ್ಲ ಗೊಂದಲ ಇಟ್ಟುಕೊಂಡು ಸರ್ಕಾರ ಮುನ್ನಡೆಸುವುದು ನಮಗೂ ಇಷ್ಟ ಇಲ್ಲ. ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಅವರ ಜೊತೆ ಮಾತನಾಡಿ ನಿಮ್ಮ ನಿರ್ಧಾರ ತಿಳಿಸಿ ಎಂದು ಡಿ.ಕೆ.ಶಿವಕುಮಾರ್ ಅವರಿಗೆ ಸಂದೇಶ ರವಾನಿಸಿದ್ದಾರೆ.

ಎಚ್.ಡಿ.ದೇವೇಗೌಡ ಅವರ ಮಾತನ್ನು ಆಲಿಸಿದ ಸಚಿವರು, ಕೆ.ಸಿ.ವೇಣುಗೋಪಾಲ್ ಅವರ ಜೊತೆ ಸಭೆ ನಡೆಸಿ ನಿರ್ಧಾರ ತಿಳಿಸುವುದಾಗಿ ಹೊರಗಡೆ ಬಂದಿದ್ದಾರೆ. ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಡಿಕೆಶಿ, ಸುಮಾರು ದಿನಗಳಿಂದ ಎಚ್.ಡಿ.ದೇವೇಗೌಡ ಅವರನ್ನು ಭೇಟಿ ಮಾಡಿರಲಿಲ್ಲ. ಇಂದು ಭೇಟಿ ಮಾಡಲು ಬಂದಿದ್ದೇನೆ. ಇದು ಸೌಹಾರ್ದ ಭೇಟಿಯಷ್ಟೇ. ಬೇರೆ ಏನು ಕಾರಣವಿಲ್ಲ. ನಮ್ಮ ಪಕ್ಷದ ನಾಯಕರು ಸಂಜೆ ಸಭೆ ಮಾಡುತ್ತೇವೆ. ಈ ಮೂಲಕ ಮುಂದಿನ ನಡೆಯ ಬಗ್ಗೆ ತೀರ್ಮಾನ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.

Share This Article
Leave a Comment

Leave a Reply

Your email address will not be published. Required fields are marked *