ಯಡಿಯೂರಪ್ಪರನ್ನು ಯಾರೂ ಆಟವಾಡಿಸಲು ಸಾಧ್ಯವಿಲ್ಲ: ಸಿ.ಟಿ ರವಿ

Public TV
1 Min Read

ತುಮಕೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಯಾರೂ ಆಟವಾಡಿಸಲು ಸಾಧ್ಯವಿಲ್ಲ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ.ರವಿ ಹೇಳಿದ್ದಾರೆ.

ಯಡಿಯೂರಪ್ಪ ಸರ್ಕಾರದ ಸಂಪುಟ ವಿಸ್ತರಣೆಗೆ ಅವಕಾಶ ನೀಡದೇ ಆಟವಾಡಿಸುತ್ತಿದ್ದಾರೆ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಿ.ಟಿ.ರವಿ, ಯಡಿಯೂರಪ್ಪ ಅವರು ಒಬ್ಬ ಪ್ರಬುದ್ಧ ಮತ್ತು ಪಳಗಿದ ರಾಜಕಾರಣಿ. ಹೀಗಾಗಿ ಅವರನ್ನು ಯಾರೂ ಆಟವಾಡಿಸಲು ಸಾಧ್ಯವಿಲ್ಲ. ಬೇಕಾದರೆ ಅವರೇ ಬೇರೆಯವರನ್ನು ಆಟವಾಡಿಸಬಲ್ಲರು ಎಂದರು.

ಗಾಂಧಿ ಹತ್ಯೆ ದಿನವೇ ದೆಹಲಿಯಲ್ಲಿ ವ್ಯಕ್ತಿಯೊಬ್ಬ ಪ್ರತಿಭಟನಾ ನಿರತರ ಮೇಲೆ ಗುಂಡಿನ ದಾಳಿ ಮಾಡಿರುವ ಕುರಿತು ಪ್ರತಿಕ್ರಿಯಿಸಿ, ಪ್ರಜಾಪ್ರಭುತ್ವದಲ್ಲಿ ಬಂದೂಕಿಗೆ ಅವಕಾಶವಿಲ್ಲ. ಇಲ್ಲಿ ಬ್ಯಾಲೆಟ್‍ಗೆ ಅವಕಾಶ ಇದಿಯೇ ಹೊರತು, ಬುಲೆಟ್‍ಗೆ ಅಲ್ಲ. ಹಾಗಾಗಿ ತಪ್ಪಿತಸ್ಥ ಯಾರೇ ಇರಲಿ ಅವನ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ನಾನು ಆಗ್ರಹಿಸುತ್ತೇನೆ ಎಂದರು.

ಕಾಂಗ್ರೆಸ್‍ನಿಂದ ಗೋಡ್ಸೆಗೂ ಮೀರಿದ ಅನ್ಯಾಯ
ಗಾಂಧಿಯ ಹೆಸರು ಇಟ್ಟುಕೊಳ್ಳುವುದು, ಅವರಂತೆ ವೇಷ ಧರಿಸುವುದು ಸುಲುಭ. ಆದರೆ ಗಾಂಧಿಯಾಗುವುದು ಸುಲಭವಲ್ಲ. ಗೋಡ್ಸೆ ಗಾಂಧಿಯ ದೇಹ ಮಾತ್ರ ಕೊಂದರೆ, ಕಾಂಗ್ರೆಸ್ ಗಾಂಧಿಯ ತತ್ವಗಳನ್ನು ಕೊಂದಿದೆ. ಈ ಮೂಲಕ ಗೋಡ್ಸೆಗೂ ಮೀರಿದ ಅನ್ಯಾಯವನ್ನು ಕಾಂಗ್ರೆಸ್ ಮಾಡಿದೆ. ಗಾಂಧಿ ತತ್ವ ರಹಿತ ರಾಜಕಾರಣ ಮಾಡಬಾರದು ಎಂದು ಬಯಸಿದ್ದರು. ಆದರೆ ಕಾಂಗ್ರೆಸ್ ತತ್ವರಹಿತ ರಾಜಕಾರಣ ಮಾಡುತ್ತಿದೆ ಎಂದರು.

ಕಾಂಗ್ರೆಸ್‍ಗೆ ದೇಶಕ್ಕಿಂತ ವೋಟ್ ಮುಖ್ಯವಾಗಿದೆ. ರಾಹುಲ್ ಗಾಂಧಿಯ ಪ್ರತಿಯೊಂದು ಮಾತು ಅವರ ಹತಾಷೆ ಅವರ ಅಪ್ರಬುದ್ಧತೆಯನ್ನು ತೋರಿಸುತ್ತದೆ. ಮುಸಲೋನಿ ಸೈನ್ಯದಲ್ಲಿ ರಾಹುಲ್ ತಾತ ಇದ್ದರೆಂದು ಕೇಳಿದ್ದೇನೆ. ಬಹುಶಃ ಆ ಒಂದು ಬೆರಕೆಯ ಮಾತುಗಳನ್ನು ಇಲ್ಲಿ ರಾಹುಲ್ ಆಡುತ್ತಿದ್ದಾರೆ. ಅವರು ಮುಂದಿನ ಪ್ರಧಾನಿ ಎಂಬುದು ತಿರುಕನೊರ್ವ ಊರಮುಂದೆ ಮುರುಕು ಧರ್ಮಶಾಲೆಯಲ್ಲಿ ಕನಸು ಕಂಡಂತಾಗಿದೆ ಎಂದು ವ್ಯಂಗ್ಯವಾಡಿದರು.

Share This Article
Leave a Comment

Leave a Reply

Your email address will not be published. Required fields are marked *