ಹಾಸನದಲ್ಲಿ ಕುಟುಂಬದ ಅಭಿವೃದ್ಧಿ ಹೋಗಿ ಪ್ರಜಾಪ್ರಭುತ್ವದ ಪರ್ವ ಆರಂಭವಾಗಿದೆ: ಸಿಟಿ ರವಿ

Public TV
1 Min Read

ಹಾಸನ: ಹಾಸನ ಜಿಲ್ಲೆಯಲ್ಲಿ ಕುಟುಂಬ ರಾಜಕಾರಣದಿಂದ ಪ್ರಜಾಪ್ರಭುತ್ವದ ಕಡೆ ಹೋಗುವ ಹೊಸ ಪರ್ವ ಆರಂಭವಾಗಿದೆ ಎಂದು ಪರೋಕ್ಷವಾಗಿ ದೇವೇಗೌಡರ ಕುಟುಂಬ ರಾಜಕಾರಣದ ಬಗ್ಗೆ ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಟಾಂಗ್ ನೀಡಿದ್ದಾರೆ.

ನಗರದಲ್ಲಿ ನಡೆದ ಬಿಜೆಪಿ ನೂತನ ಜಿಲ್ಲಾಧ್ಯಕ್ಷರ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾನು ಹಾಸನ ಜಿಲ್ಲೆಯ ಅಳಿಯ. ಹೀಗಾಗಿ ಚಿಕ್ಕಮಗಳೂರಿನಲ್ಲಿ ಹಬ್ಬ ನಡೆಯುತ್ತಿದ್ದರೂ ಬಂದಿದ್ದೇನೆ. ಹಾಸನದಲ್ಲಿ ಕುಟುಂಬ ರಾಜಕಾರಣದಿಂದ ಪ್ರಜಾಪ್ರಭುತ್ವದ ಕಡೆ ಹೋಗುವ ಹೊಸ ರಾಜಕೀಯ ಪರ್ವ ಆರಂಭವಾಗಿದೆ. ಕೌಟುಂಬಿಕ ಅಭಿವೃದ್ಧಿಯಿಂದ ಜಿಲ್ಲೆಯ ಅಭಿವೃದ್ಧಿ ಕಡೆ ಹೋಗುವ ಪರ್ವ ಆರಂಭವಾಗಿದ್ದು, ಹಾಸನದ ಏಳು ಕ್ಷೇತ್ರದಲ್ಲೂ, ಪಂಚಾಯಿತಿಯಿಂದ ಪಾರ್ಲಿಮೆಂಟ್ ವರೆಗೆ ಕಮಲ ಅರಳಬೇಕು ಎಂದು ಕರೆ ನೀಡಿದರು.

ನಮ್ಮದು ವ್ಯಕ್ತಿ ನಿಷ್ಠೆ, ಜಾತಿ ನಿಷ್ಠೆ ಸಿದ್ಧಾಂತವಲ್ಲ, ರಾಷ್ಟ್ರ ನಿಷ್ಠೆಯ ಸಿದ್ಧಾಂತ. ನಾವು ಪಾಳೇಗಾರಿಕೆಯ ಬುಡವನ್ನು ಬೇರು ಸಹಿತ ಕಿತ್ತು ಹಾಕುತ್ತೇವೆ ಎಂದು ಪರೋಕ್ಷವಾಗಿ ಮಾಜಿ ಪ್ರಧಾನಿ ದೇವೇಗೌಡರ ಕುಟುಂಬ ರಾಜಕಾರಣದ ಬಗ್ಗೆ ಕಿಡಿಕಾರಿದರು.

ಎನ್‍ಆರ್ ಸಿ ಅಕ್ರಮ ನುಸುಳುಕೋರರ ತಡೆಗೆ ಇರುವುದು. ಇದೇ ಕಾರಣಕ್ಕೆ ಅಸ್ಸಾಂನಲ್ಲಿ ಜಾರಿ ಇದೆ. ಪಾಕಿಸ್ತಾನದಿಂದ ಬರುವ ಅಕ್ರಮ ನುಸುಳುಕೋರರನ್ನು ಹೊರಹಾಕಿದರೆ ಕಾಂಗ್ರೆಸ್, ಜೆಡಿಎಸ್ ಯಾಕೆ ಸಂಕಟ ಪಡಬೇಕು. ಓಟ್ ಬ್ಯಾಂಕ್ ಕಡಿಮೆಯಾಗುತ್ತದೆ ಎನ್ನುವುದು ಅವರ ಭಯ. ಸಿಎಎ ಬಂದಮೇಲೆ ಕೆಲವರು ಸಮಾನತೆ ಬಗ್ಗೆ ಮಾತನಾಡುತ್ತಿದ್ದಾರೆ. ದೇಶದಲ್ಲಿ ಸಮಾನ ನಾಗರಿಕತೆ ಕಾನೂನು ತರಲೇ ಬೇಕು. ಇದಕ್ಕಿಂತಲೂ ಒಳ್ಳೆಯ ಸಮಯ ನರೇಂದ್ರ ಮೋದಿಯವರಿಗೆ ಸಿಗಲು ಸಾಧ್ಯವಿಲ್ಲ. ಇಂತಹ ಕೆಲಸಕ್ಕೆ ಬೆಂಬಲಿಸಬೇಕಾದ ಹೊಣೆಗಾರಿಕೆ ನಮ್ಮ ಮೇಲಿದೆ ಎಂದರು.

Share This Article
Leave a Comment

Leave a Reply

Your email address will not be published. Required fields are marked *