ಶೀಘ್ರದಲ್ಲೇ ಇನ್ನೂ ಕೆಲ ಕಾಂಗ್ರೆಸ್ ಶಾಸಕರು ಬಿಜೆಪಿಗೆ ಸೇರ್ಪಡೆ – ಸಿ.ಟಿ.ರವಿ

Public TV
1 Min Read

ಚಿಕ್ಕಮಗಳೂರು: ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಹೊಸ ಬಾಂಬ್ ಸಿಡಿಸಿದ್ದು, ಇನ್ನೂ ಕೆಲವು ಕಾಂಗ್ರೆಸ್ ಶಾಸಕರು ಬಿಜೆಪಿ ಸೇರಲಿದ್ದಾರೆ ಎಂಬ ಅಚ್ಚರಿಯ ಮಾಹಿತಿ ಹೊರ ಹಾಕಿದ್ದಾರೆ.

ಈ ಕುರಿತು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಪಚುನಾವಣೆ ಪೂರ್ವದಲ್ಲಿ ಹಾಗೂ ಚುನಾವಣಾ ನಂತರ ಮತ್ತಷ್ಟು ಕಾಂಗ್ರೆಸ್ ಶಾಸಕರು ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ. ಈ ಮೂಲಕ ಕಾಂಗ್ರೆಸ್ ವಿಭಜನೆಯಾಗಲಿದೆ. ಈಗಾಗಲೇ ಕೈ ಶಾಸಕರು ಬಿಜೆಪಿಯೊಂದಿಗೆ ಬರುವ ಅಶಯ ಹೊರಹಾಕಿದ್ದಾರೆ. ಯಾವುದನ್ನೂ ಕದ್ದು ಮುಚ್ಚಿ ಮಾಡಲು ಸಾಧ್ಯವಿಲ್ಲ. ಎಷ್ಟು ಜನ ಬರಲಿದ್ದಾರೆ ಎಂದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ ಎಂದರು.

ಎಲ್ಲ ಶಾಸಕರು ವೈಚಾರಿಕ ಹಿನ್ನೆಲೆಯಲ್ಲಿ ಬಿಜೆಪಿಗೆ ಬರುತ್ತಿದ್ದು ವ್ಯವಹಾರಿಕ ದೃಷ್ಟಿಯಿಂದಲ್ಲ. ಕೈ ಶಾಸಕರು ಬಿಜೆಪಿಗೆ ಬರುವ ಮೂಲಕ ಕಾಂಗ್ರೆಸ್ ವಿಭಜನೆಯಾಗಲಿದೆ ಎಂದು ಹೇಳಿಕೆ ನೀಡಿದರು.

ಸಿದ್ದರಾಮಯ್ಯ ಭವಿಷ್ಯ ಎಷ್ಟು ಬಾರಿ ಸತ್ಯವಾಗಿದೆ? ಮಕಾಡೆ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎಂಬ ಗಾದೆ ಅವರಿಗೆ ಅನ್ವಯವಾಗುತ್ತದೆ. ಮೋದಿ ಅಪ್ಪನ ಆಣೆ ಪ್ರಧಾನಿಯಾಗಲ್ಲ ಎಂದರು. ಅವರಪ್ಪನನ್ನೂ ತಂದರು. ನಂತರ 2019ರಲ್ಲಿ ಬಿಜೆಪಿಯನ್ನು ಸಿಂಗಲ್ ನಂಬರ್‍ಗೆ ಇಳಿಸುತ್ತೇವೆ ಎಂದರು ಯಾರು ಇಳಿದರು. ಎದೆ ತಟ್ಟಿಕೊಂಡು ನಾನೇ ಮುಖ್ಯಮಂತ್ರಿ ಅಂತಿದ್ದರು, ಏನಾಯಿತು? ಬಯಲುಸೀಮೆ ನಾಟಕದಲ್ಲಿ ಅಬ್ಬರಿಸಿದಂತೆ ಹೇಳುತ್ತಾರೆ ಅಷ್ಟೇ ಎಂದು ವ್ಯಂಗ್ಯವಾಡಿದರು.

ನಾಟಕ ಮಾಡಿದವರೆಲ್ಲಾ ನಿಜ ಜೀವನದಲ್ಲಿ ಅದೇ ರೀತಿ ಇರುತ್ತಾರೆ ಅಂತಿಲ್ಲ. ನಾನೇ ಸಿಎಂ ಎಂದು ಎದೆತಟ್ಟಿಕೊಂಡವರು ಚಾಮುಂಡೇಶ್ವರಿಯಲ್ಲಿ ಸೋಲಬೇಕಾಯಿತು. ಅಪ್ಪನಾಣೆ ಮೋದಿ ಪ್ರಧಾನಿಯಾಗಲ್ಲ ಅಂದವರು ಕಣ್ಣಮುಂದೆಯೇ ಎರಡೆರಡು ಬಾರಿ ಪ್ರಧಾನಿಯಾಗಿದ್ದನ್ನು ನೋಡಬೇಕಾಯಿತು. ಪ್ರಜಾಭುತ್ವದಲ್ಲಿ ತೀರ್ಮಾನ ಮಾಡುವುದು ನಾನು ಸಿದ್ದರಾಮಯ್ಯ ಅಲ್ಲ, ಜನ ಇವರ ಕೈಯಲ್ಲಿ ಇದ್ದಿದ್ದರೆ ಅಪ್ಪನ ಆಸ್ತಿ ಮಗನಿಗೆ ಬರೆದಂತೆ ಬರೆದಿಡುತ್ತಿದ್ದರು. ನನ್ನ ಬಳಿಕ ನನ್ನ ಮಗನೇ ಮುಖ್ಯಮಂತ್ರಿ ಎಂದು ಬರೆದಿಡುತ್ತಿದ್ದರು ಎಂದು ಸಿದ್ದರಾಮಯ್ಯನವರನ್ನು ತಿವಿದರು.

Share This Article
Leave a Comment

Leave a Reply

Your email address will not be published. Required fields are marked *