– ಎಲ್ಲಾ ಕ್ರಸ್ಟ್ ಗೇಟ್‌ಗಳ ಅಳವಡಿಕೆ ಮೇ ಅಂತ್ಯದೊಳಗೆ ಪೂರ್ಣ
ಕೊಪ್ಪಳ: ರೈತರ ಜೀವನಾಡಿ ತುಂಗಭದ್ರಾ ಜಲಾಶಯದ (Tungabhadra Dam) ಎಲ್ಲಾ 33 ಕ್ರಸ್ಟ್ ಗೇಟ್‌ಗಳ ಅಳವಡಿಕೆ ಕಾರ್ಯವನ್ನು ಮೇ ಅಂತ್ಯದೊಳಗೆ ಪೂರ್ಣಗೊಳಿಸಿ, ರೈತರಿಗೆ ಅನುಕೂಲ ಮಾಡಿಕೊಡಲಾಗುವುದು ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರು ಹಾಗೂ ವಿಧಾನ ಪರಿಷತ್ ಸಭಾ ನಾಯಕರಾದ ಎನ್.ಎಸ್. ಬೋಸರಾಜು (NS Bosaraju) ಹೇಳಿದರು.
ಕೊಪ್ಪಳ ಜಿಲ್ಲೆಯ ಮುನಿರಾಬಾದ್‌ನಲ್ಲಿರುವ ತುಂಗಭದ್ರಾ ಜಲಾಶಯದ ಆಣೆಕಟ್ಟಿನ ನೂತನ ಕ್ರಸ್ಟ್ ಗೇಟ್‌ಗಳ ಅಳವಡಿಕೆ ಕಾಮಗಾರಿಯ ಪರಿವೀಕ್ಷಣೆ ಮಾಡಿ, ಮಾಧ್ಯಮದವರೊಂದಿಗೆ ಮಾತನಾಡಿ, ಮಾಹಿತಿ ನೀಡಿದರು. ಇದನ್ನೂ ಓದಿ: 800 ಕೆ.ಜಿ ಕಂಚಿನ ಅಪ್ಪು ಪುತ್ಥಳಿ ಅನಾವರಣ
ಈಗಾಗಲೇ ತುಂಗಭದ್ರಾ ಜಲಾಶಯದ 18 ನೂತನ ಕ್ರಸ್ಟ್ ಗೇಟ್‌ಗಳ ಅಳವಡಿಕೆ ಕಾರ್ಯ ಪೂರ್ಣಗೊಂಡಿದ್ದು, 5 ಕ್ರಸ್ಟ್ ಗೇಟ್‌ಗಳ ಅಳವಡಿಕೆ ಕಾರ್ಯ ಪ್ರಗತಿಯಲ್ಲಿದೆ. ಮಾರ್ಚ್ ಅಂತ್ಯದ ವೇಳೆಗೆ ಒಟ್ಟು 33 ಗೇಟ್‌ಗಳ ಕೆಲಸ ಮುಗಿಯುವ ನಿರೀಕ್ಷೆಯಿದೆ. ನುರಿತ ತಜ್ಞರ ತಂಡ ಮತ್ತು ಚೀಫ್ ಎಂಜಿನಿಯರ್‌ಗಳ ಪ್ರಕಾರ, ಗೇಟ್ ಬದಲಾವಣೆಯ ಸಮಯದಲ್ಲಿ ಹಳೆಯ ಅಣೆಕಟ್ಟಿನ ರಚನೆಗೆ ಯಾವುದೇ ತೊಂದರೆಯಾಗಿಲ್ಲ. ಏಪ್ರಿಲ್ ತಿಂಗಳಿನಲ್ಲಿ ಉಳಿದ 10 ಗೇಟ್‌ಗಳನ್ನು ಅಳವಡಿಸಿ, ಮೇ ಅಂತ್ಯದೊಳಗೆ ಎಲ್ಲಾ ಕ್ರಸ್ಟ್ ಗೇಟ್‌ಗಳ ಅಳವಡಿಕೆ ಕಾಮಗಾರಿ ಪೂರ್ಣಗೊಳ್ಳುವ ಭರವಸೆ ಇದೆ. ಕಾಮಗಾರಿಯು ನಿರೀಕ್ಷಿತ ಸಮಯಕ್ಕಿಂತ ವೇಗವಾಗಿ ಸಾಗುತ್ತಿದ್ದು, ಜೂನ್‌ನಲ್ಲಿ ಆರಂಭವಾಗುವ ಮುಂಗಾರು ಮಳೆಗಾಲದ ವೇಳೆಗೆ ಜಲಾಶಯವು ಸಂಪೂರ್ಣ ಸಿದ್ಧವಾಗಲಿದೆ ಎಂಬ ವಿಶ್ವಾಸವಿದೆ ಎಂದರು.
ತುಂಗಭದ್ರಾ ಜಲಾಶಯದಲ್ಲಿ ತುಂಬಿರುವ ಹೂಳಿನ ಸಮಸ್ಯೆಗೆ ಪರಿಹಾರವಾಗಿ `ನವಲಿ’ ಯೋಜನೆಯ ಪ್ರಸ್ತಾವನೆಯನ್ನು ಮಂಡಳಿ ಮತ್ತು ಸಂಬಂಧಿತ ರಾಜ್ಯ ಸರ್ಕಾರಗಳಿಗೆ ಕಳುಹಿಸಲಾಗಿದೆ. ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರಿಗೂ ಸಹ ಪತ್ರ ವ್ಯವಹಾರ ನಡೆಸಲಾಗಿದೆ. ಸಂಬಂಧಪಟ್ಟ ಅಧಿಕಾರಿಗಳ ಮಟ್ಟದಲ್ಲಿ ಮಾತುಕತೆ ನಡೆಯುತ್ತಿದೆ. ತೆಲಂಗಾಣ ಸರ್ಕಾರದೊಂದಿಗೂ ಸಮನ್ವಯ ಸಾಧಿಸಲು ಪ್ರಯತ್ನಿಸಲಾಗುತ್ತಿದ್ದು, ವಿವಿಧ ತಾಂತ್ರಿಕ ಕಾರಣಗಳಿಂದ ವಿಳಂಬವಾಗುತ್ತಿದೆ. ಈ ತಾಂತ್ರಿಕ ಸಮಸ್ಯೆಗಳು ಬಗೆಹರಿದ ನಂತರ ಪೂರ್ಣ ಸಹಕಾರ ಸಿಗುವ ನಿರೀಕ್ಷೆಯಿದೆ. ಈ ಬಗ್ಗೆ ನಮ್ಮ ರಾಜ್ಯದ ವಿವಿಧ ಚುನಾಯಿತ ಪ್ರತಿನಿಧಿಗಳ ನಿಯೋಗವು ನವದೆಹಲಿಯಲ್ಲಿ ಜಲಶಕ್ತಿ ಸಚಿವಾಲಯದ ಅಧಿಕಾರಿಗಳು ಮತ್ತು ವಿವಿಧ ರಾಜ್ಯಗಳ ಸಂಸದರೊಂದಿಗೆ ಮಹತ್ವದ ಚರ್ಚೆ ನಡೆಸಲಾಗಿದೆ. ಕೇಂದ್ರ ಸಚಿವರು ಮತ್ತು ಅಧಿಕಾರಿಗಳು ಕರ್ನಾಟಕದ ನೀರಾವರಿ ಯೋಜನೆಗಳ ಬಗ್ಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಚುನಾವಣಾ ನೀತಿ ಸಂಹಿತೆಯ ಪ್ರಕ್ರಿಯೆಗಳ ನಂತರ ಮತ್ತೊಂದು ಸುತ್ತಿನ ಸಭೆ ನಡೆಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದರು.ಇದನ್ನೂ ಓದಿ: ಲಕ್ಷ್ಮೇಶ್ವರ ಬಸ್ ನಿಲ್ದಾಣದಲ್ಲಿ ಬಸ್ ಡಿಕ್ಕಿ – ಚಿಕಿತ್ಸೆ ಫಲಿಸದೇ ಮಹಿಳೆ ಸಾವು

