ಪಾದರಾಯನಪುರ ಪುಂಡರು ಬೆಂಗ್ಳೂರಿನ ಹಜ್ ಭವನಕ್ಕೆ ಶಿಫ್ಟ್: ಬೊಮ್ಮಾಯಿ

Public TV
2 Min Read

– ಹೆಚ್‍ಡಿಕೆ ಹೇಳಿಕೆಗೆ ಗೃಹಸಚಿವ ತಿರುಗೇಟು

ಬೆಂಗಳೂರು: ಪಾದರಾಯನಪುರ ಆರೋಪಿಗಳನ್ನು ಬೆಂಗಳೂರಿನ ಹಜ್ ಭವನಕ್ಕೆ ಶಿಫ್ಟ್ ಮಾಡುತ್ತೇವೆ. ಇದಕ್ಕಾಗಿ ಎಲ್ಲ ಅಗತ್ಯ ತಯಾರಿ ಮಾಡಿಕೊಳ್ಳುತ್ತಿದ್ದೇವೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.

ಮಾಧ್ಯಮಗಳ ಜೊತೆ ಮಾತನಾಡಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಆರೋಪಿಗಳನ್ನು ಬಂಧಿಸುವ ಸಂದರ್ಭದಲ್ಲೇ ಕೊರೊನಾ ಟೆಸ್ಟ್ ಮಾಡಿಸಬೇಕೆಂದು ಆದೇಶ ಕೊಟ್ಟಿದ್ದೆವು. ಈ ವೇಳೆ ಇಬ್ಬರಿಗೆ ಕೊರೊನಾ ಸೋಂಕು ಬಂದಿದೆ. ಈ ಹಿನ್ನೆಲೆಯಲ್ಲಿ ಎಲ್ಲಾ ಅಧಿಕಾರಿಗಳ ಜೊತೆ ಮಾತನಾಡಿದ್ದೇವೆ. ಮುಖ್ಯಮಂತ್ರಿಗಳು ಕೂಡ ಅವರನ್ನು ಶಿಫ್ಟ್ ಮಾಡಬೇಕೆಂದು ಆದೇಶಿಸಿದ್ದಾರೆ. ಹೀಗಾಗಿ ಪಾದರಾಯನಪುರ ಆರೋಪಿಗಳನ್ನು ಬೆಂಗಳೂರಿನ ಹಜ್ ಭವನಕ್ಕೆ ಶಿಫ್ಟ್ ಮಾಡುತ್ತೇವೆ. ಇದಕ್ಕಾಗಿ ಎಲ್ಲ ಅಗತ್ಯ ತಯಾರಿ ಮಾಡಿಕೊಳ್ಳುತ್ತಿದ್ದೇವೆ ಎಂದರು.

ಜೈಲ್ ಸಿಬ್ಬಂದಿಗೂ ಪರೀಕ್ಷೆ ಮಾಡಿ ಕ್ವಾರಂಟೈನ್ ಮಾಡಬೇಕು. ಜೊತೆಗೆ ಅವರ ಸಂಪರ್ಕದಲ್ಲಿದ್ದರನ್ನು ಪರೀಕ್ಷೆ ಮಾಡಿ, ಕ್ವಾರಂಟೈನ್ ಮಾಡಲು ಸೂಚನೆ ಕೊಟ್ಟಿದ್ದೇವೆ. ಇನ್ನೂ ಪಾದರಾಯನಪುರದಲ್ಲಿ ಮುಂಚೂಣಿಯಲ್ಲಿದ್ದ ಪೊಲೀಸರಿಗೂ ಆರೋಗ್ಯ ತಪಾಸಣೆ ಮಾಡಿ ಅವಶ್ಯಕತೆ ಇದ್ದರೆ ಅವರನ್ನು ಕ್ವಾರಂಟೈನ್ ಮಾಡುವಂತೆ ತಿಳಿಸಿದ್ದೇವೆ. ಈ ವಿಚಾರದಲ್ಲಿ ಕೋರ್ಟಿಗೆ ತಿಳಿಸಬೇಕಾದ ವಿಚಾರವನ್ನು ನಾವು ತಿಳಿಸುತ್ತೇವೆ ಎಂದರು.

ಇನ್ನೂ ಕುಮಾರಸ್ವಾಮಿ ಹೇಳಿಕೆಗೆ ಬಸವರಾಜ ಬೊಮ್ಮಾಯಿ ತಿರುಗೇಟು ನೀಡಿದ್ದಾರೆ. ಯಾರು ಸಲಹೆ ಕೊಡುತ್ತಾರೆ ಅನ್ನೋದು ಮುಖ್ಯ ಅಲ್ಲ. ಅವತ್ತಿನ ಸಂದರ್ಭದಲ್ಲಿ ಆರೋಪಿಗಳನ್ನು ಜೈಲಿನಲ್ಲಿಡಬೇಕಾಗಿತ್ತು. ಏನೇ ಮಾಡಿದರೂ ಆಪಾದನೆ ಬಂದೇ ಬರುತ್ತೆ. ಆರೋಪಿಗಳನ್ನು ಜೈಲಿನ ಬದಲು ಆಸ್ಪತ್ರೆಯಲ್ಲಿ ಇರಿಸಿದ್ದರೂ ಟೀಕೆ ಬರುತ್ತಿತ್ತು. ಹೀಗೇ ಮಾಡಬೇಕು ಹಾಗೇ ಮಾಡಬೇಕು ಅಂತ ನೋಡುವ ಕಾಲ ಅಲ್ಲ ಇದು. ಸಂದರ್ಭ, ಸಮಯ ನೋಡಿಕೊಂಡು ನಿರ್ಧಾರ ಕೈಗೊಳ್ಳಬೇಕಾಗುತ್ತದೆ. ರಾಮನಗರದ ಜೈಲಿನಲ್ಲಿ ಆರೋಪಿಗಳಿಗೆ ಸೋಂಕು ಕಂಡು ಬಂದರೆ ಶಿಫ್ಟ್ ಮಾಡುತ್ತೇವೆ ಅಂತ ಮೊದಲೇ ನಾವು ಹೇಳಿದ್ವಿ ಎಂದು ತಿಳಿಸಿದರು.

ರಾಮನಗರಕ್ಕೆ ಆರೋಪಿಗಳನ್ನು ಶಿಫ್ಟ್ ಮಾಡಿದ್ದರಲ್ಲಿ ತಪ್ಪಾಗಿಲ್ಲ, ಯಾರದ್ದೂ ತಪ್ಪಿಲ್ಲ, ಕೊರೊನಾ ಹೋರಾಟದಲ್ಲಿ ಬೇರೆ ಬೇರೆ ಆಯಾಮಗಳು ಬರುತ್ತಿರುತ್ತವೆ. ಸಂದರ್ಭಕ್ಕೆ ತಕ್ಕಂತೆ ಸರ್ಕಾರ ನಿರ್ಧಾರ ಕೈಗೊಳ್ಳಬೇಕಾಗುತ್ತದೆ ಎಂದರು.

ರಾಮನಗರದ ಜೈಲಿನಲ್ಲಿರುವ ಎಲ್ಲರನ್ನೂ ಪರೀಕ್ಷೆ ಮಾಡುತ್ತೇವೆ. ಹೀಗಾಗಿ ರಾಮನಗರ ಜಿಲ್ಲೆಯ ಜನರು ಭಯ ಪಡುವ ಅಗತ್ಯತೆ ಇಲ್ಲ. ಈಗಾಗಲೇ ಆ ಕೈದಿಗಳನ್ನು ಸ್ಥಳಾಂತರ ಮಾಡಲಾಗುತ್ತಿದೆ. ಅವರಿಂದ ಸೋಂಕು ಹರಡದಂತೆ ಕ್ರಮ ವಹಿಸಲಾಗಿದೆ. ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮವಹಿಸಲಾಗಿದೆ. ಹೀಗಾಗಿ ಭಯ ಪಡಬೇಡಿ ಎಂದು ರಾಮನಗರ ಜಿಲ್ಲೆಯ ಜನರಿಗೆ ಗೃಹ ಸಚಿವ ಬೊಮ್ಮಾಯಿ ಅಭಯ ನೀಡಿದರು.

Share This Article
Leave a Comment

Leave a Reply

Your email address will not be published. Required fields are marked *