ವಲಸೆ ಕಾರ್ಮಿಕರಿಗೆ ಬಿಗ್ ಶಾಕ್- ಬೆಂಗ್ಳೂರಿನಿಂದ ಹೊರಟವ್ರಿಗೆ ಡಬಲ್ ದರದ ಬಿಸಿ

Public TV
2 Min Read

– ಬೇಕಾಬಿಟ್ಟಿ ಹಣ ವಸೂಲಿಗೆ ಕಾರ್ಮಿಕರ ಆಕ್ರೋಶ
– ಎಲ್ಲಿಗೆ ಎಷ್ಟು ದರ..?

ಬೆಂಗಳೂರು: ಲಾಕ್‍ಡೌನ್ ಘೋಷಣೆಯಿಂದ ಇಕ್ಕಟ್ಟಿಗೆ ಸಿಲುಕಿದ್ದ ವಲಸೆ ಕಾರ್ಮಿಕರು ಹಾಗೂ ಇತರರಿಗೆ ಗುಡ್‍ನ್ಯೂಸ್ ಕೊಟ್ಟ ರಾಜ್ಯ ಸರ್ಕಾರ ಜೊತೆಗೆ ಶಾಕ್ ಕೂಡ ನೀಡಿದೆ.

ಹೌದು. ಬೆಂಗಳೂರಿನ ವಿವಿಧ ಪ್ರದೇಶಗಳಿಗೆ ಪ್ರಯಾಣ ಆರಂಭಿಸಿದ ಬಸ್ಸುಗಳಿಗೆ ಡಬಲ್ ದರವನ್ನು ಪಡೆಯಲಾಗುತ್ತಿದೆ. ಒಂದೂವರೆ ತಿಂಗಳಿಂದ ಸಂಬಳವೂ ಇಲ್ಲದೆ, ಒಂದು ಹೊತ್ತಿನ ಊಟಕ್ಕೂ ಪರದಾಡುತ್ತಿರುವ ಕಾರ್ಮಿಕರಿಗೆ ಬಸ್ಸುಗಳ ಟಿಕೆಟ್ ದರ ಗಾಯದ ಮೇಲೆ ಬರೆ ಹಾಕಿದಂತಾಗಿದೆ.

ಬಸ್ ಸಂಚಾರ ಆರಂಭದ ಸುದ್ದಿ ಕೇಳುತ್ತಿದ್ದಂತೆಯೇ ನೂರಾರು ವಲಸೆ ಕಾರ್ಮಿಕರು ಮೆಜೆಸ್ಟಿಕ್‍ನ ಕೆಎಸ್ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಇಂದು ಬೆಳಗ್ಗೆ ಜಮಾಯಿಸಿದರು. ಹೀಗಾಗಿ ಅಲ್ಲಿಯೇ ವಲಸೆ ಕಾರ್ಮಿಕರಿಗೆ ಆರೋಗ್ಯ ತಪಾಸಣೆ ಕೂಡ ಮಾಡಲಾಗುತ್ತಿದೆ. ಪ್ರತಿಯೊಬ್ಬರನ್ನೂ ಥರ್ಮಲ್ ಸ್ಕ್ರೀನಿಂಗ್ ಮಾಡಿ ನಂತರ ಬಸ್ ಹತ್ತಲು ಸೂಚನೆ ನೀಡಲಾಗುತ್ತಿದೆ. ಆದರೆ ಯಾವುದೇ ಮಾಹಿತಿ ನೀಡದೆ ಬಸ್ ಟಿಕೆಟ್ ದರವನ್ನು ದುಪ್ಪಟ್ಟು ಮಾಡಿರುವುದು ಪ್ರಯಾಣಿಕರಿಗೆ ಬಿಗ್ ಶಾಕ್ ನೀಡಿದಂತಾಗಿದೆ.

ರಾಯಚೂರು, ಬೆಳಗಾವಿ, ಬಾಗಲಕೋಟೆ, ಕಲಬುರಗಿ, ಶಿವಮೊಗ್ಗ, ಮೈಸೂರು ಸೇರಿದಂತೆ 28 ಜಿಲ್ಲೆಗಳಿಗೆ ಬಸ್ ಸಂಚಾರ ಆರಂಭವಾಗಲಿದೆ. 55 ಸೀಟ್‍ಗಳುಳ್ಳ ಬಸ್ಸಿನಲ್ಲಿ ಕೇವಲ 30 ಜನರಿಗೆ ಮಾತ್ರ ಪ್ರಯಾಣ ಮಾಡಲು ಅವಕಾಶವನ್ನ ನೀಡಲಾಗಿದೆ. ಟಿಕೆಟ್ ದರ ನಿಗದಿತ ಬೆಲೆಗಿಂತ ಒಂದು ಪಟ್ಟು ಹೆಚ್ಚು ಮಾಡಲಾಗಿದ್ದು, ಮಾಸ್ಕ್, ಸ್ಯಾನಿಟೈಸರ್, ಸಾಮಾಜಿಕ ಅಂತರ ಕಡ್ಡಾಯ ಮಾಡಲಾಗಿದೆ.

ಕೊರೊನಾ ಸೋಂಕು ಹರಡದಂತೆ ಮುಂಜಾಗ್ರತಾ ಕ್ರಮವಾಗಿ ಒಂದು ಬಸ್ಸಿನಲ್ಲಿ ಕೇವಲ 30 ಜನ ಪ್ರಯಾಣಿಸಲು ಅವಕಾಶ ನೀಡಲಾಗಿದೆ. ಅಷ್ಟೇ ಅಲ್ಲದೆ ಬೆಂಗಳೂರಿನಿಂದ ಬೇರೆ ಜಿಲ್ಲೆಗಳಿಗೆ ಹೊರಟ ಬಸ್ಸುಗಳು ವಾಪಸ್ ಬರುವಾಗ ಖಾಲಿ ಬರುತ್ತವೆ. ಹೀಗಾಗಿ ಟಿಕೆಟ್ ಏರಿಕೆ ಮಾಡಲಾಗಿದೆ ಎಂದು ಸಿಬ್ಬಂದಿ ಹೇಳುತ್ತಾರೆ. ಈ ಸಂಬಂಧ ಸಾರಿಗೆ ಸಚಿವ ಲಕ್ಷ್ಮಣ ಸವದಿ ಅವರನ್ನು ಸಂಪರ್ಕಿಸಲು ಯತ್ನಿಸಿದರೆ ಮೊಬೈಲ್ ಸ್ವಿಚ್ ಆಫ್ ಬರುತ್ತಿದೆ.

ಎಲ್ಲಿಗೆ, ಎಷ್ಟು ದರ..?
ಬಾಗಲಕೋಟೆಗೆ ಈ ಹಿಂದೆ ನಿಗದಿಯಾಗಿದ್ದ 700 ರೂ. ಬದಲು 1,311 ರೂ. ಪಡೆಯಲಾಗುತ್ತಿದೆ. ಅಂತೆಯೇ ಬಳ್ಳಾರಿಗೆ ತೆರಳಲು 450 ರೂ. ಬದಲು 884 ರೂ., ಬೆಳಗಾವಿಗೆ ಹೋಗಲು 800 ರೂ. ಬದಲು 1,478 ರೂ., ವಸೂಲಿ ಮಾಡಲಾಗುತ್ತಿದೆ. ಬೆಳಗಾವಿಗೆ ಹೋಗಲು 800 ರೂ. ಬದಲು 1,478 ರೂ., ಚಿತ್ರದುರ್ಗಕ್ಕೆ ತೆರಳಲು 300 ರೂ. ಬದಲು 602 ರೂ., ಕೊಪ್ಪಳಕ್ಕೆ ತೆರಳಲು 600 ರೂಪಾಯಿ ಬದಲು 1,000 ರೂ., ಕಲಬುರಗಿಗೆ ತೆರಳಲು 900 ರೂಪಾಯಿ ಬದಲು 1,619 ರೂ. ಪಡೆಯಲಾಗುತ್ತಿದೆ. ಹೀಗೆ ವಿವಿಧ ಪ್ರದೇಶಗಳಿಗೆ ಹೋಗಲು ಸಿದ್ಧರಾದ ವಲಸೆ ಕಾರ್ಮಿಕರಿಗೆ ಬಸ್ ಟಿಕೆಟ್ ದರ ಆಘಾತ ನೀಡಿದೆ.

Share This Article
Leave a Comment

Leave a Reply

Your email address will not be published. Required fields are marked *