25 ವರ್ಷದ ಬಳಿಕ ಪಾಕ್‌ ತೊರೆದ ಮೈಕ್ರೋಸಾಫ್ಟ್‌

Public TV
1 Min Read

ಇಸ್ಲಾಮಾಬಾದ್‌: ಆರ್ಥಿಕ ಕುಸಿತದಲ್ಲಿರುವ (Economic Crisis) ಪಾಕಿಸ್ತಾನಕ್ಕೆ ಈ ಮೈಕ್ರೋಸಾಫ್ಟ್‌ (Microsoft) ದೊಡ್ಡ ಶಾಕ್‌ ನೀಡಿದೆ. 25 ವರ್ಷದ ಬಳಿಕ ಪಾಕಿಸ್ತಾನದಲ್ಲಿರುವ ತನ್ನ ಕಚೇರಿಯನ್ನು ಮುಚ್ಚಲು ಮೈಕ್ರೋಸಾಫ್ಟ್‌ ಮುಂದಾಗಿದೆ.

2000ನೇ ಇಸ್ವಿಯಲ್ಲಿ ಮೈಕ್ರೋಸಾಫ್ಟ್‌ ಪಾಕಿಸ್ತಾನದಲ್ಲಿ (Pakistan) ತನ್ನ ಕಾರ್ಯಾಚರಣೆಯನ್ನು ಆರಂಭಿಸಿತ್ತು. ಮೈಕ್ರೋಸಾಫ್ಟ್ ಯಾವ ಕಾರಣಕ್ಕೆ ಈ ನಿರ್ಧಾರ ಕೈಗೊಂಡಿದೆ ಎನ್ನುವುದನ್ನು ಕಾರಣ ತಿಳಿಸದೇ ಇದ್ದರೂ ಆರ್ಥಿಕ ಪ್ರಕ್ಷುಬ್ಧತೆ ಮತ್ತು ಬದಲಾಗುತ್ತಿರುವ ರಾಜಕೀಯ ಕಾರಣದಿಂದ ಈ ನಿರ್ಧಾರ ಕೈಗೊಂಡಿದೆ ಎಂಬ ವಿಶ್ಲೇಷಣೆ ಕೇಳಿ ಬಂದಿದೆ.

ವಿಶ್ವಾದ್ಯಂತ ಸುಮಾರು 9,100 ಉದ್ಯೋಗಗಳನ್ನು ಕಡಿತಗೊಳಿಸುವ ನಿರ್ಧಾರ ಕೈಗೊಂಡ ಬೆನ್ನಲ್ಲೇ ಮೈಕ್ರೋಸಾಫ್ಟ್‌ ಪಾಕ್‌ ತೊರೆಯುವ ಸುದ್ದಿ ಪ್ರಕಟವಾಗಿದೆ.

ಪಾಕಿಸ್ತಾನದಲ್ಲಿ ಮೈಕ್ರೋಸಾಫ್ಟ್‌ ಹೂಡಿಕೆ ಮಾಡಲು ಮುಂದಾಗಿತ್ತು. ಆದರೆ ಇಮ್ರಾನ್ ಖಾನ್ ಪದಚ್ಯುತಗೊಳಿಸಿದ ನಂತರ ದೇಶದಲ್ಲಿನ ಅಸ್ಥಿರತೆಯಿಂದಾಗಿ ಮೈಕ್ರೋಸಾಫ್ಟ್ ತನ್ನ ವಿಸ್ತರಣೆಯನ್ನು ವಿಯೆಟ್ನಾಂಗೆ ಬದಲಾಯಿಸಿದೆ.  ಇದನ್ನೂ ಓದಿ9 ಸಾವಿರ ಉದ್ಯೋಗಿಗಳನ್ನು ಮನೆಗೆ ಕಳುಹಿಸಲು ಮುಂದಾದ ಮೈಕ್ರೋಸಾಫ್ಟ್‌ 

ಪಾಕಿಸ್ತಾನದಲ್ಲಿ ಮೈಕ್ರೋಸಾಫ್ಟ್‌ ಸ್ಥಾಪಕ ಮುಖ್ಯಸ್ಥ ಜವಾದ್ ರೆಹಮಾನ್ ಲಿಕ್ಡ್‌ಇನ್‌ನಲ್ಲಿ ಈ ವಿಚಾರವನ್ನು ತಿಳಿಸಿದ್ದಾರೆ. ಮೈಕ್ರೋಸಾಫ್ಟ್ ಪಾಕಿಸ್ತಾನದಲ್ಲಿ ತನ್ನ ಕಾರ್ಯಾಚರಣೆಗಳನ್ನು ಅಧಿಕೃತವಾಗಿ ಮುಚ್ಚುತ್ತಿದೆ ಎನ್ನುವುದನ್ನು ನಾನು ತಿಳಿದುಕೊಂಡೆ. ಉಳಿದಿರುವ ಕೊನೆಯ ಕೆಲವು ಉದ್ಯೋಗಿಗಳಿಗೆ ಔಪಚಾರಿಕವಾಗಿ ತಿಳಿಸಲಾಯಿತು. ಒಂದು ಯುಗ ಕೊನೆಗೊಳ್ಳುತ್ತದೆ ಎಂದು ಬರೆದುಕೊಂಡಿದ್ದಾರೆ.

ಮೈಕ್ರೋಸಾಫ್ಟ್ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸುವ ಸುದ್ದಿಗೆ ಪ್ರತಿಕ್ರಿಯಿಸಿದ ಮಾಜಿ ಅಧ್ಯಕ್ಷ ಆರಿಫ್ ಅಲ್ವಿ, ಮೈಕ್ರೋಸಾಫ್ಟ್ ನಿರ್ಧಾರವು ನಮ್ಮ ಆರ್ಥಿಕ ಭವಿಷ್ಯಕ್ಕೆ ಕಳವಳಕಾರಿ ಸಂಕೇತವಾಗಿದೆ. ಫೆಬ್ರವರಿ 2022 ರಲ್ಲಿ ಬಿಲ್ ಗೇಟ್ಸ್ ನನ್ನ ಕಚೇರಿಗೆ ಭೇಟಿ ನೀಡಿದ್ದನ್ನು ನಾನು ಸ್ಪಷ್ಟವಾಗಿ ನೆನಪಿಸಿಕೊಳ್ಳುತ್ತೇನೆ. ಪಾಕಿಸ್ತಾನದ ಜನರ ಪರವಾಗಿ, ನಮ್ಮ ದೇಶದಲ್ಲಿ ಪೋಲಿಯೊ ನಿರ್ಮೂಲನೆಗೆ ಅವರ ಗಮನಾರ್ಹ ಕೊಡುಗೆಗಳಿಗಾಗಿ ಅವರಿಗೆ ಹಿಲಾಲ್-ಎ-ಇಮ್ತಿಯಾಜ್ ಪ್ರಶಸ್ತಿಯನ್ನು ನೀಡುವ ಗೌರವ ನನಗೆ ಸಿಕ್ಕಿತು ಎಂದು ಬರೆದುಕೊಂಡಿದ್ದಾರೆ.

ಪಾಕಿಸ್ತಾನ ಈಗ ಅನಿಶ್ಚಿತತೆಯ ಸುಳಿಯಲ್ಲಿ ಸಿಲುಕಿದೆ. ಹೆಚ್ಚುತ್ತಿರುವ ನಿರುದ್ಯೋಗವಿದೆ. ನಮ್ಮಲ್ಲಿನ ಪ್ರತಿಭಾವಂತರು ವಿದೇಶಗಳಿಗೆ ವಲಸೆ ಹೋಗುತ್ತಿದ್ದಾರೆ. ಖರೀದಿಸುವ ಶಕ್ತಿ ಕಡಿಮೆಯಾಗಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.

Share This Article