ನಾಳೆ ಮೈಕ್ರೋ ಫೈನಾನ್ಸ್ ಸುಗ್ರೀವಾಜ್ಞೆ ಕರಡು ರಾಜ್ಯಪಾಲರಿಗೆ ಮರು ರವಾನೆ

By
2 Min Read

– ರಾಜ್ಯಪಾಲರ ಆಕ್ಷೇಪಗಳಿಗೆ ಸೂಕ್ತ ಸ್ಪಷ್ಟೀಕರಣ ಕಳಿಸಲು ಸರ್ಕಾರದ ಸಿದ್ಧತೆ

ಬೆಂಗಳೂರು: ಮೈಕ್ರೋ ಫೈನಾನ್ಸ್ ಸುಗ್ರೀವಾಜ್ಞೆಗೆ ರಾಜ್ಯಪಾಲರು ವ್ಯಕ್ತಪಡಿಸಿರುವ ಎಲ್ಲ ಆಕ್ಷೇಪಣೆಗಳಿಗೂ ಕಾನೂನು ಇಲಾಖೆ ಸೂಕ್ತ ಸ್ಪಷ್ಟೀಕರಣಗಳನ್ನು ಸಿದ್ಧಪಡಿಸಿದೆ. ನಾಳೆ ಸ್ಪಷ್ಟೀಕರಣ ಸಹಿತ ಕರ್ನಾಟಕ ಮೈಕ್ರೋ ಫೈನಾನ್ಸ್ ಸುಗ್ರೀವಾಜ್ಞೆ ಕರಡನ್ನು ಸಿಎಂ ಕಚೇರಿಯಿಂದ ರಾಜ್ಯಪಾಲರಿಗೆ ಕಳಿಸಲಾಗ್ತಿದೆ. ಸದ್ಯ ಕಾನೂನು ಇಲಾಖೆ ಸಿದ್ಧಪಡಿಸಿರುವ ಸ್ಪಷ್ಟೀಕರಣಗಳನ್ನು ಸಿಎಂ ಅವಗಾಹನೆಗೆ ಕಳಿಸಲಾಗಿದೆ. ಕರಡನ್ನು ಸಿಎಂ ಕಚೇರಿಯಿಂದ ಅಂತಿಮಗೊಳಿಸಿ ರಾಜ್ಯಪಾಲರಿಗೆ ನಾಳೆ ಕಳಿಸಲಾಗುತ್ತದೆ.

ಸರ್ಕಾರವು ಸುಗ್ರೀವಾಜ್ಞೆಯನ್ನು ಸಮರ್ಥಿಸಿಕೊಂಡು ಸ್ಪಷ್ಟೀಕರಣ ಕೊಡಲು ಮುಂದಾಗಿದೆ. ಇದು ವ್ಯಕ್ತಿ ಮೂಲಭೂತ ಹಕ್ಕನ್ನು ನಿರ್ಬಂಧಿಸುವುದಿಲ್ಲ. ಸಾಲದಾತರ ಹಿತಾಸಕ್ತಿಯನ್ನು ನಿರ್ಲಕ್ಷಿಸಿಲ್ಲ. ಸಾಲ ವಸೂಲಾತಿಯನ್ನು ನಿರ್ಬಂಧಿಸುವುದಿಲ್ಲ ಎಂದು ಸ್ಪಷ್ಟನೆ ಕೊಡಲಾಗುತ್ತಿದೆ. ಸುಗ್ರೀವಾಜ್ಞೆಯನ್ನು ರಾಜ್ಯಪಾಲ ಥಾವರ್‌ಚಂದ್‌ ಗೆಹ್ಲೋಟ್ ಇತ್ತೀಚೆಗಷ್ಟೇ ವಾಪಸ್ ಕಳುಹಿಸಿದ್ರು. ಸುಗ್ರೀವಾಜ್ಞೆಯು ಸಹಜ ಹಾಗೂ ಸಾಲ ನೀಡುವವರ ಮೂಲಭೂತ ಹಕ್ಕುಗಳಿಗೆ ವಿರುದ್ಧವಾಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದರು.

ಸರ್ಕಾರದ ಸ್ಪಷ್ಟೀಕರಣಗಳೇನು?
* ಸುಗ್ರೀವಾಜ್ಞೆ ಇದು ವ್ಯಕ್ತಿ ಮೂಲಭೂತ ಹಕ್ಕನ್ನು ನಿರ್ಬಂಧಿಸುವುದಿಲ್ಲ.
* ಸಾಲದಾತರ ಹಿತಾಸಕ್ತಿಯನ್ನು ನಿರ್ಲಕ್ಷಿಸಿಲ್ಲ ಹಾಗೂ ಸಾಲ ವಸೂಲಾತಿಯನ್ನು ನಿರ್ಬಂಧಿಸುವುದಿಲ್ಲ.
* ಸಾಲವನ್ನು ಖಾಸಗಿಯಾಗಿ, ಲೈಸೆನ್ಸ್ ಇಲ್ಲದೇ ನೀಡಿ ಹೆಚ್ಚಿನ ಬಡ್ಡಿ ವಸೂಲಿ ಮಾಡಿದರೆ ಅದು ಕಾನೂನು ವಿರೋಧಿ ಕ್ರಮ. ಅಂತಹ ಸಾಲವು ವಸೂಲಿಗೆ ಅರ್ಹವೂ ಅಲ್ಲ, ಯೋಗ್ಯವೂ ಅಲ್ಲ.
* ಕಾನೂನಿನ ಪ್ರಕಾರ ವಿಧಿಸಿದ ಬಡ್ಡಿ ಮೇರೆಗೆ ನೀಡಿದ ಸಾಲ ಮಾತ್ರ ವಸೂಲಿಗೆ ಅರ್ಹ.
* ಅಕ್ರಮ ಸಾಲ ಮತ್ತು ಬಡ್ಡಿ ವಸೂಲಾತಿ ಅರ್ಜಿಗಳನ್ನು ಕಾನೂನಾತ್ಮಕವಾಗಿ ನ್ಯಾಯಾಲಯಗಳು ಕೂಡಾ ವಿಚಾರಣೆಗೆ ಒಳಪಡಿಸಲು ಸಾಧ್ಯವೇ ಇಲ್ಲ.
* ಕಾನೂನಾತ್ಮಕವಾಗಿ ನೋಂದಾಯಿತ ಸಂಸ್ಥೆ ಅಥವಾ ವ್ಯಕ್ತಿಗಳು ನಿಯಮಾನುಸಾರ ನೈಜ ಸಾಲ ನೀಡಿದವರು ವಸೂಲಿ ಮಾಡಬಾರದೆಂದು ಅಥವಾ ಅಂತಹ ಸಾಲಗಳು ವಸೂಲಿಗೆ ಅರ್ಹವಲ್ಲ
ಎಂದು ಸುಗ್ರೀವಾಜ್ಞೆಯಲ್ಲಿ ಸರ್ಕಾರ ಎಲ್ಲಿಯೂ ಹೇಳಿಲ್ಲ.
* ಕೇವಲ ಸಾಲ ವಸೂಲಾತಿಗೆ ಕಾನೂನು ಬಾಹಿರ ಕ್ರಮಗಳನ್ನು ಕೈಗೊಳ್ಳುವುದು, ಹಿಂಸೆ ಮಾಡುವುದು ಮತ್ತು ಒತ್ತಡ ತಂತ್ರ ಹೇರುವುದು ಹಾಗೂ ಕಿರುಕುಳಕ್ಕೆ ಕಾರಣವಾಗುವುದನ್ನು ತಡೆಯಲು/ನಿಷೇಧಿಸಲು ಸುಗ್ರೀವಾಜ್ಞೆ ಪ್ರಸ್ತಾಪಿಸುತ್ತದೆ.
* ಸಾಲ ನೀಡಿದವರು ಅನುಸರಿಸುವ ಕಾನೂನುಬಾಹಿರ ಕ್ರಮಗಳನ್ನು, ಆ ಕ್ರಮಗಳ ಸ್ವರೂಪದ ಕಾರಣಕ್ಕೆ ಶಿಕ್ಷಿಸಲು ಕಾನೂನುಗಳಿವೆ. ಆದರೆ ಸಾಲದ ಕಾರಣಕ್ಕೆ ಇಂತಹ ಕೃತ್ಯ ಎಸಗಿದಾಗ ಶಿಕ್ಷೆಗೆ ಒಳಪಡಿಸಲು ನಿರ್ದಿಷ್ಟ ಕಾನೂನು ಇಲ್ಲ. ಸಾಲಗಾರರ ಹಿತ ಕಾಪಾಡಲು ಪ್ರತ್ಯೇಕ ಕಾನೂನಿನ ಅವಶ್ಯಕತೆ ಇದೆ.
* ಮೈಕ್ರೋ ಫೈನಾನ್ಸ್‌ಗೆ ಸಂಬಂಧಿಸಿದಂತೆ ರಿಸರ್ವ್‌ ಬ್ಯಾಂಕ್‌ನ ಮಾರ್ಗಸೂಚಿಗಳು ನೋಂದಾಯಿತ ಮತ್ತು ಪರವಾನಗಿ ಹೊಂದಿದ ಕಂಪನಿಗಳಿಗಷ್ಟೇ ಅನ್ವಯವಾಗುತ್ತದೆ. ನೋಂದಣಿ ಮತ್ತು ಪರವಾನಗಿ ಇಲ್ಲದ ಕಂಪನಿಗಳಿಗೆ ಇದು ಅನ್ವಯವಾಗುವುದಿಲ್ಲ. ಅವುಗಳ ಕಾನೂನುಬಾಹಿರ ನಡೆಗಳಿಂದ ಜನರನ್ನು ರಕ್ಷಿಸಲು ಸುಗ್ರೀವಾಜ್ಞೆ ಅಗತ್ಯ.

Share This Article