ಹಣ ಕೊಡ್ತೀನಿ ಬಾ ಎಂದು ಹೇಳಿ ಕಾರಿನಲ್ಲಿ ಮಹಿಳೆಯನ್ನು ಕೊಲೆಗೈದವರು ಅರೆಸ್ಟ್!

Public TV
2 Min Read

ಚಿಕ್ಕಬಳ್ಳಾಪುರ: ಸಾಲ ಕೊಟ್ಟ ಹಣವನ್ನು ಮರಳಿಸುವಂತೆ ಹೇಳಿದ ಮಹಿಳೆಗೆ ಹಣ ಕೊಡ್ತೀನಿ ಬಾ ಎಂದು ನಂಬಿಸಿ ಕಾರಿನಲ್ಲಿ ಕರೆದೊಯ್ದ ಆಕೆಯನ್ನು ಕೊಲೆ ಮಾಡಿದ್ದ ಕೊಲೆಗಡುಕರನ್ನು ಬಂಧಿಸುವಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ಪೊಲೀಸರು ಯಶಸ್ವಿಯಾಗಿದ್ದಾರೆ.

ದೊಡ್ಡಬಳ್ಳಾಪುರ ತಾಲೂಕು ಕಾಡತಿಪ್ಪೂರು ಗ್ರಾಮದ ರಾಮಾಂಜಿನಪ್ಪ ಮತ್ತು ನರಸಿಂಹಮೂರ್ತಿ ಬಂಧಿತ ಆರೋಪಿಗಳು. ಕಾರಿನಲ್ಲಿ ಆರೋಪಿಗಳು ನೆಲಮಂಗಲ ತಾಲೂಕಿನ ತಾವರೆಕೆರೆ ಗ್ರಾಮದ ಶಾಂತಮ್ಮ ಅವರನ್ನು ಕೊಲೆ ಮಾಡಿ ಬಳಿಕ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದರು.

ಏನಿದು ಪ್ರಕರಣ?
ಜನವರಿ 21ರಂದು ಗೌರಿಬಿದನೂರು ತಾಲೂಕು ಸೋಮಶೆಟ್ಟಿಹಳ್ಳಿ ಬಳಿ ನರಸಿಂಹಯ್ಯ ಎಂಬವರ ಜಮೀನಿನಲ್ಲಿ ಅಪರಿಚಿತ ಮಹಿಳೆಯ ಮೃತದೇಹ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಗೌರಿಬಿದನೂರು ಪೊಲೀಸರಿಗೆ ಮೃತಳ ಮಗ ಹಾಗೂ ಮಗಳು ಮೃತದೇಹವನ್ನು ಕಂಡು ಇದು ತನ್ನ ತಾಯಿ ಶಾಂತಮ್ಮಳದ್ದೇ ಎಂದು ಪತ್ತೆ ಹಚ್ಚಿದರು. ಹೀಗಾಗಿ ಶಾಂತಮ್ಮಳ ಕೊಲೆ ಪ್ರಕರಣದ ತನಿಖೆಗೆ ಮುಂದಾದ ಪೊಲೀಸರು ಮೊಬೈಲ್ ಕರೆಗಳನ್ನು ಆಧರಿಸಿ ರಾಮಾಂಜಿನಪ್ಪನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ಈ ವೇಳೆ ರಾಮಾಂಜಿನಪ್ಪ ಸತ್ಯ ಬಾಯ್ಬಿಟ್ಟಿದ್ದಾನೆ. ಮೃತ ಶಾಂತಮ್ಮ ಗಾರ್ಮೆಂಟ್ಸ್ ನೌಕರಳಾಗಿದ್ದು, ಕೊಲೆ ಮಾಡಿದ ರಾಮಾಂಜಿನಪ್ಪ ಗಾರ್ಮೆಂಟ್ಸ್ ಗೆ ಮಹಿಳಾ ಕಾರ್ಮಿಕರನ್ನು ಕರೆದೊಯ್ಯವ ವಾಹನದ ಚಾಲಕ ಕಂ ಮಾಲೀಕನಾಗಿದ್ದ. ಹೀಗಾಗಿ ಗಂಡ ತೀರಿಕೊಂಡಿದ್ದ ಶಾಂತಮ್ಮ ತನ್ನ ಬಳಿ ಇದ್ದ ಹಣವನ್ನು ಪರಿಚಯಸ್ಥ ರಾಮಾಂಜಿನಪ್ಪನಿಗೆ ನೀಡಿದ್ದಳು. ಶಾಂತಮ್ಮಳ ಮಗಳ ಮದುವೆ ಫಿಕ್ಸ್ ಆಗಿದ್ದು ಮದುವೆಗೆ ಹಣ ಬೇಕು ಕೊಡು ಎಂದು ರಾಮಾಂಜಿನಪ್ಪನ ಬಳಿ ಪಟ್ಟು ಹಿಡಿದದ್ದಾಳೆ.

ಮೊದಲೇ ಮೈ ತುಂಬಾ ಸಾಲ ಮಾಡಿಕೊಂಡಿದ್ದ ರಾಮಾಂಜಿನಪ್ಪ ಪ್ಲಾನ್ ಮಾಡಿ ಶಾಂತಮ್ಮಳನ್ನು ಜನವರಿ 19ರಂದು ಕಾರಿನಲ್ಲಿ ಕರೆದುಕೊಂಡು ಬಂದು ಕಾರಿನಲ್ಲೇ ಆಕೆಯ ಕತ್ತು ಹಿಸುಕಿ ಕೊಲೆ ಮಾಡಿ ನಂತರ ಆಕೆಯ ಮೃತದೇಹದ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಸುಟ್ಟು ಹಾಕಿದ್ದ. ಈ ಕೃತ್ಯಕ್ಕೆ ರಾಮಾಂಜಿನಪ್ಪ ತೋಟದಲ್ಲಿ ಕೆಲಸ ಮಾಡುತ್ತಿದ್ದ ನರಸಿಂಹಮೂರ್ತಿ ಸಹಕರಿಸಿದ್ದು, ಸದ್ಯ ರಾಮಾಂಜಿನಪ್ಪ ಹಾಗೂ ನರಸಿಂಹಮೂರ್ತಿ ಇಬ್ಬರನ್ನು ಗೌರಿಬಿದನುರು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *