10 ಪ್ರಕರಣ ದಾಖಲಿಸಿ, ನನ್ನನ್ನು ಜೈಲಿಗೆ ಕಳುಹಿಸಲು ಪಣ ತೊಟ್ಟಿದ್ದಾರೆ: ಡಿಕೆ ಶಿವಕುಮಾರ್‌

Public TV
4 Min Read

ಬೆಂಗಳೂರು: ನಾನು ರಾಮನಗರದಲ್ಲಿ ಪಾದಯಾತ್ರೆ ಮಾಡುವಾಗ ಸರ್ಕಾರದಿಂದ ಸಾಕಷ್ಟು ತೊಂದರೆ ಅನುಭವಿಸಿದೆ. ಜಿಲ್ಲಾಧಿಕಾರಿಗಳಿಂದ 10 ಪ್ರಕರಣ ದಾಖಲಿಸಿ, ನನ್ನನ್ನು ಜೈಲಿಗೆ ಕಳುಹಿಸಲು ಪಣ ತೊಟ್ಟಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ ಹೇಳಿದ್ದಾರೆ.

ಮೇಕೆದಾಟು ಪಾದಯಾತ್ರೆ ಸಮಾರೋಪ ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮಾತನಾಡಿ.ಈ ಕಾರ್ಯಕ್ರಮ ಯಶಸ್ಸಿಗೆ ಬಹಳ ಮಂದಿ ಗುರುಹಿರಿಯರು ನಮಗೆ ಆಶೀರ್ವಾದ ಮಾಡಿದ್ದಾರೆ. ಮುರುಘಾ ಮಠದ ಶ್ರೀಗಳು ಸುಮಾರು 15 ಶ್ರೀಗಳ ಜತೆ ಪಾದಯಾತ್ರೆಗೆ ಬಂದು ನಮಗೆ ಹಾರೈಸಿದ್ದಾರೆ. ಅವರೆಲ್ಲರ ಪಾದಗಳಿಗೆ ನಾನು ಸಾಷ್ಟಾಂಗ ನಮಸ್ಕರಿಸಲು ಬಯಸುತ್ತೇನೆ ಎಂದು ಹೇಳಿ ಭಾಷಣ ಆರಂಭಿಸಿದರು.

ಡಿಕೆಶಿ ಹೇಳಿದ್ದು ಏನು?
ನಮ್ಮ ಐದು ಜನ ಕಾರ್ಯಾಧ್ಯಕ್ಷರಾದ ರಾಮಲಿಂಗಾರೆಡ್ಡಿ, ಧೃವನಾರಾಯಣ್, ಸಲೀಂ ಅಹ್ಮದ್, ಈಶ್ವರ್ ಖಂಡ್ರೆ ಹಾಗೂ ಸತೀಶ್ ಜಾರಕಿಹೊಳಿ ಅವರು ಹೆಗಲಿಗೆ ಹೆಗಲು ಕೊಟ್ಟು ದುಡಿದಿದ್ದಾರೆ.

ಮಂಡ್ಯ, ಮೈಸೂರು, ಹಾಸನ, ರಾಮನಗರ, ಚಾಮಾರಜನಗರ, ತುಮಕೂರು, ಕೋಲಾರ, ಬೆಂಗಳೂರು ಶಾಸಕರು, ಪರಿಷತ್ ಸದಸ್ಯರು, ಮಾಜಿ ಮಹಾಪೌರರು, ಮಾಜಿ ಪಾಲಿಕೆ ಸದಸ್ಯರುಗಳಾದಿಯಾಗಿ ಎಲ್ಲರೂ ಸೇರಿದ್ದಾರೆ. ನೀವೆಲ್ಲರೂ ಈ ಪಾದಯಾತ್ರೆಯಲ್ಲಿ ನಡೆದು ಇತಿಹಾಸ ಪುಟ ಸೇರಿದ್ದೀರಿ. ಇದನ್ನೂ ಓದಿ: ಬಜೆಟ್ ಅಧಿವೇಶನದಿಂದ ನಮ್ಮ ಪಾದಯಾತ್ರೆಯನ್ನ ಎರಡು ದಿನ ಕಡಿತಗೊಳಿಸಿ ಇಂದೇ ಮುಕ್ತಾಯಗೊಳಿಸುತ್ತಿದ್ದೇವೆ: ಸಿದ್ದರಾಮಯ್ಯ

ಇದು ಡಿ.ಕೆ. ಶಿವಕುಮಾರ್ ಯಶಸ್ಸು ಅಲ್ಲ. ಕಾಂಗ್ರೆಸ್ ಯಶಸ್ಸೂ ಅಲ್ಲ, ಪಕ್ಷಬೇಧ ಮರೆತು ಹೆಜ್ಜೆ ಹಾಕಿದ ರಾಜ್ಯದ ಜನರ ಯಶಸ್ಸು. ಪಾದಯಾತ್ರೆ ಕುರಿತು ಬಹಳ ಟೀಕೆ ಟಿಪ್ಪಣಿಗಳು ಸುರಿಮಳೆಯಾದವು.

ಬುದ್ಧ ಬಸವನು ಮನೆಬಿಟ್ಟ ಗಳಿಗೆಯಲ್ಲಿ, ಏಸು ಕ್ರಿಸ್ತ ಶಿಲುಬೆಗೆ ಏರಿದ ಗಳಿಗೆಯಲ್ಲಿ, ಪ್ರವಾದಿ ಪೈಗಂಬರ್ ದಿವ್ಯವಾಣಿ ಕೇಳಿದ ಗಳಿಗೆಯಲ್ಲಿ, ಮಹಾತ್ಮಾಗಾಂಧಿ ಕಾಂಗ್ರೆಸ್ ನಾಯಕತ್ವ ವಹಿಸಿದ ಗಳಿಗೆಯಲ್ಲಿ, ಭೀಮಾಭಾಯಿ ಅವರು ಅಂಬೇಡ್ಕರ್ ಅವರಿಗೆ ಜನ್ಮ ಕೊಟ್ಟ ಗಳಿಗೆಯಲ್ಲಿ, ಕೆಂಗಲ್ ಹನುಮಂತಯ್ಯನವರು ವಿಧಾನಸೌಧ ಕಟ್ಟಿದ ಗಳಿಗೆಯಲ್ಲಿ ಶ್ರೀಮತಿ ಸೋನಿಯಾ ಗಾಂಧಿ ಅವರು ಪ್ರಧಾನಮಂತ್ರಿ ಸ್ಥಾನ ತ್ಯಾಗ ಮಾಡಿ ಅದನ್ನು ಮನಮೋಹನ್ ಸಿಂಗ್ ಅವರಿಗೆ ಕೊಟ್ಟ ಗಳಿಗೆಯಲ್ಲಿ ನಾವು ಸಂಗಮದಿಂದ ಪಾದಯಾತ್ರೆ ಆರಂಭಿಸಿದೆವು.

ಮಹಿಳೆಯರು ಮನೆ ಮುಂದೆ ರಂಗೋಲಿ ಹಾಕಿ ಸ್ವಾಗತಿಸಿದರು. ಬಡವರು, ರೈತರು ನೀರಿಗಾಗಿ ಹೆಜ್ಜೆ ಹಾಕುತ್ತೇವೆ ಎಂದು ನಡೆಯಲು ಕಷ್ಟವಾದರೂ ಹೆಜ್ಜೆ ಹಾಕಿದರು. ಜನರ ಪ್ರೀತಿ ವಿಶ್ವಾಸ ಮರೆಯಲು ಸಾಧ್ಯವಿಲ್ಲ. ಇದು ಕಾಂಗ್ರೆಸ್ ಹೋರಾಟವಲ್ಲ, ಜನರಿಗಾಗಿ ಹೋರಾಟ. ಈ ನೀರಿಗೆ ರುಚಿ, ಬಣ್ಣ, ಆಕಾರವಿಲ್ಲ. ಅದು ಜೀವಜಲ. ಅದಕ್ಕಾಗಿ ನಾವು ಹೋರಾಡುತ್ತಿದ್ದೇವೆ. ನಮ್ಮ ಹೋರಾಟವನ್ನು ವಿವಿಧ ರೀತಿ ಟೀಕಿಸಿದ್ದಾರೆ.

ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದಾಗ ನ್ಯಾಯಾಯಲದಿಂದ ತಮಿಳುನಾಡಿಗೆ 178 ಟಿಎಂಸಿ ನೀರನ್ನು ಕೊಟ್ಟು, ಉಳಿದ ನೀರನ್ನು ಬಳಸಿಕೊಳ್ಳಿ ಎಂದು ತೀರ್ಪು ಬಂದಿತು. ಎಂ.ಬಿ ಪಾಟೀಲರು ಸಚಿವರಾಗಿದ್ದಾಗ ಡಿಪಿಆರ್ ಸಿದ್ಧಪಡಿಸಿದರು. ಅದನ್ನು ಪರಿಷ್ಕರಿಸಬೇಕು ಎಂದಾಗ ನಾನು ಸಚಿವನಾಗಿದ್ದಾಗ ಅದನ್ನು ಸರಿಪಡಿಸಿ ಸಲ್ಲಿಸಿದೆವು.  ಇದನ್ನೂ ಓದಿ: ಕೇಂದ್ರ ಹಾಗೂ ರಾಜ್ಯದಲ್ಲಿ ಇರುವುದು ಡಬಲ್ ಇಂಜಿನ್ ಸರ್ಕಾರ ಅಲ್ಲ, ಡಬ್ಬಾ ಇಂಜಿನ್ ಸರ್ಕಾರ: ರಾಮಲಿಂಗ ರೆಡ್ಡಿ

ಈ ಯೋಜನೆಗೆ ತಮಿಳುನಾಡಿನ ಒಂದು ಎಕರೆ ಭೂಮಿ ಹೋಗುವುದಿಲ್ಲ. ಮಳವಳ್ಳಿ ಹಾಗೂ ಕನಕಪುರದ ಜಮೀನು ಮಾತ್ರ ಈ ಯೋಜನೆಗೆ ಹೋಗುತ್ತದೆ. ನಮ್ಮ ಜನ ತ್ಯಾಗ ಮಾಡಲು ಬದ್ಧರಾಗಿದ್ದಾರೆ. ನಮ್ಮ ನೀರು, ಭೂಮಿ, ಹಣ. ಹೀಗಾಗಿ ಈ ಯೋಜನೆಗೆ ಯಾರ ಅನುಮತಿ ಬೇಕಾಗಿಲ್ಲ. ರಾಜ್ಯದ ಕುಡಿಯುವ ನೀರಿನ ಯೋಜನೆಗೆ ಯಾರ ಅನುಮತಿ ಬೇಕಿಲ್ಲ ಎಂದು ಸುಪ್ರೀಂ ಕೋರ್ಟ ತೀರ್ಪು ಇದೆ ಎಂದು ಮುಖ್ಯಮಂತ್ರಿಗಳೇ ಹೇಳಿದ್ದಾರೆ. ಯೋಜನೆ ಮಾಡುತ್ತೇವೆ ಎಂದಿದ್ದಾರೆ. ಆದರೆ ಎರಡೂವರೆ ವರ್ಷವಾಗಿದೆ, ಆದರೂ ಯಾವುದೇ ಕ್ರಮ ಕೈಗೊಂಡಿಲ್ಲ.

ರಾಜ್ಯದಿಂದ ಆಯ್ಕೆಯಾಗಿರುವ ಬಿಜೆಪಿ ಸಂಸದರಾದ ಪ್ರಹ್ಲಾದ್ ಜೋಷಿ, ಶೋಭಾ ಕರಂದ್ಲಾಜೆ, ನಳೀನ್ ಕುಮಾರ್ ಕಟೀಲ್ ಸೇರಿದಂತೆ ಎಲ್ಲ ಸಂಸದರು ಕಾಂಗ್ರೆಸ್ ಸಂಸದರ ಜತೆ ಸೇರಿ ಸಂಸತ್ ಮುಂದೆ ಮೇಕೆದಾಟು ಯೋಜನೆಗೆ ಆಗ್ರಹಿಸಿ ಪ್ರತಿಭಟನೆ ಮಾಡಿದ್ದನ್ನು ಯಾರೂ ಮರೆಯಲು ಸಾಧ್ಯವಿಲ್ಲ. ನಾವು ಅದೇ ಹೋರಾಟವನ್ನು ಮತ್ತೆ ಮಾಡಿದ್ದೇವೆ.

ಇದು ರಾಜ್ಯಕ್ಕಾಗಿ ಮಾಡುತ್ತಿರುವ ಹೋರಾಟ. ರಾಜಕೀಯ ಮಾಡುವ ಸಮಯ ಬಂದಾಗ ರಾಜಕಾರಣ ಮಾಡೋಣ. ನಾವು ಗಾಂಧೀಜಿ ಅವರ ಸಂತತಿ. ಅಹಿಂಸಾ ರೀತಿಯಲ್ಲಿ ಹೋರಾಡಬೇಕು ಎಂಬುದು ಅವರ ಮಾರ್ಗದರ್ಶನ. ಕಾಂಗ್ರೆಸ್ ಹೋರಾಟ, ದೇಶಕ್ಕೆ ಸ್ವಾತಂತ್ರ್ಯ, ಕಾಂಗ್ರೆಸ್ ಧ್ವಜದ ಬಣ್ಣಗಳೇ ರಾಷ್ಟ್ರ ಧ್ವಜವಾದವು. ಇದು ಮುಖ್ಯಮಂತ್ರಿಗಳಿಗೂ ಗೊತ್ತಿದೆ.

ಬ್ರಿಟೀಷರ ಕಾಲದಲ್ಲಿ ರಾಜ್ಯದಲ್ಲಿ ಮೂರು ಆಣೆಕಟ್ಟುಗಳು, ಮಹಾರಾಜರ ಕಾಲದಲ್ಲಿ ಒಂದು ಆಣೆಕಟ್ಟು, ಉಳಿದ 26 ಆಣೆಕಟ್ಟುಗಳು ಕಾಂಗ್ರೆಸ್ ಕಾಲದಲ್ಲಿ ನಿರ್ಮಾಣವಾಗಿದೆ.

ನಿಮ್ಮೆಲ್ಲರ ತ್ಯಾಗ, ಹೋರಾಟ, ಹೆಜ್ಜೆ, ಪ್ರೀತಿ ವಿಶ್ವಾಸ, ಅಭಿಮಾನವನ್ನು ಮರೆಯುವುದಿಲ್ಲ. ಸರ್ಕಾರದ ಬೆದರಿಕೆಗೆ ಹೆದರದೇ ಇಲ್ಲಿ ಸೇರಿದ್ದೀರಿ. ಇದು ಆರಂಭ ಅಷ್ಟೇ. ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕ, ಕರಾವಳಿ ಹಾಗೂ ಮಲೆನಾಡು ಭಾಗಗಳಲ್ಲಿ ರಾಜ್ಯದ ಹಿತಕ್ಕಾಗಿ ಚಳುವಳಿ ಆರಂಭಿಸಲು ನಮ್ಮ ನಾಯಕರು ಸಂಕಲ್ಪ ಮಾಡಿದ್ದಾರೆ.

ಈಗ ನದಿ ಜೋಡಣೆ ವಿಚಾರಗಳು ಚರ್ಚೆಯಾಗುತ್ತಿವೆ. ಕೇಂದ್ರ ಬಜೆಟ್ ನಲ್ಲಿ ಅದರ ಪ್ರಸ್ತಾಪವಾಗಿದೆ. ಮುಖ್ಯಮಂತ್ರಿಗಳೇ 25 ಸಂಸದರನ್ನು ಹೊಂದಿದ್ದರೂ ಪರಿಸರ ಇಲಾಖೆಯ ಅನುಮತಿ ಪಡೆಯಲು ನಿಮ್ಮಿಂದ ಸಾಧ್ಯವಾಗಿಲ್ಲ. ಪ್ರಧಾನಮಂತ್ರಿ ಮುಂದೆ ಒಂದು ದಿನ ಬೇಡಿಕೆ ಇಟ್ಟಿಲ್ಲ. ಆದರೂ ಈ ಬಗ್ಗೆ ಮಾತನಾಡುತ್ತಿದ್ದೀರಿ.

ನೀವು ಅನುಮತಿ ತಂದು ಯೋಜನೆ ಆರಂಭಿಸಿ, ನಿಮಗೆ ಬಂಬಲ ನೀಡಲು ನಾವು ಬದ್ಧವಾಗಿದ್ದೇವೆ. ಬಿಜೆಪಿ ಹಾಗೂ ದಳದ ಕಾರ್ಯಕರ್ತರೂ ಕೂಡ ನಮ್ಮ ಜತೆ ಹೆಜ್ಜೆ ಹಾಕಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *