ನಾಳೆ ದೆಹಲಿಗೆ ಬೊಮ್ಮಾಯಿ ದೌಡು – ಮೇಕೆದಾಟು ಯೋಜನೆಗೆ ಅನುಮತಿ ಸಿಗುತ್ತಾ?, ಸಂಪುಟ ಸರ್ಜರಿಗೆ ಹೈಕಮಾಂಡ್ ಗ್ರೀನ್‍ಸಿಗ್ನಲ್ ಕೊಡುತ್ತಾ?

Public TV
2 Min Read

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಾಳೆ ಮಧ್ಯಾಹ್ನ ದೆಹಲಿಗೆ ಪ್ರಯಾಣಿಸಲಿದ್ದಾರೆ. ಮೇಕೆದಾಟು ಯೋಜನೆಗೆ ಅನುಮತಿ ಕೇಳುವುದು, ಸಂಪುಟ ಸರ್ಜರಿ ಫೈನಲ್ ಮಾಡಿಕೊಂಡು ಬರುವುದು ಸಿಎಂ ದೆಹಲಿ ಭೇಟಿಯ ಉದ್ದೇಶವಾಗಿದೆ.

ನಾಳೆ ಮಧ್ಯಾಹ್ನ 1.55ರ ವಿಮಾನದಲ್ಲಿ ದೆಹಲಿ ಪ್ರಯಾಣ ಬೆಳೆಸುತ್ತಿದ್ದಾರೆ. ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಸಹ ಸಿಎಂ ಬೊಮ್ಮಾಯಿ ಜೊತೆ ದೆಹಲಿಗೆ ತೆರಳುತ್ತಿದ್ದಾರೆ. ನಾಳೆ ಸಂಜೆ 7ಕ್ಕೆ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೆಖಾವತ್‍ರ ಭೇಟಿಗೆ ಸಮಯ ನಿಗದಿಯಾಗಿದೆ. ಶೆಖಾವತ್ ಭೇಟಿ ಮಾಡಲಿರುವ ಸಿಎಂ ಮತ್ತು ಕಾರಜೋಳ, ಮೇಕೆದಾಟು ಯೋಜನೆಗೆ ಅಗತ್ಯ ಅನುಮತಿಗಳಿಗೆ ಮನವಿ ಮಾಡಲಿದ್ದಾರೆ. ಉಭಯ ನಾಯಕರೂ ನಾಳೆ ರಾತ್ರಿ ಕರ್ನಾಟಕ ಭವನದಲ್ಲೇ ವಾಸ್ತವ್ಯ ಹೂಡಲಿದ್ದಾರೆ. ಮರುದಿನ ಮತ್ತೆ ವಿವಿಧ ಗಣ್ಯರ ಭೇಟಿ ಮಾಡಲಿದ್ದಾರೆ. ಕೇಂದ್ರ ಸರ್ಕಾರದ ವಿವಿಧ ಸಚಿವರ ಜೊತೆ ಮಾತುಕತೆಗೂ ಸಮಯ ಕೇಳಲಾಗಿದೆ. ಇದೇ ವೇಳೆ ಸಂಪುಟ ಸರ್ಜರಿ ಬಗ್ಗೆ ಚರ್ಚಿಸಲು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಭೇಟಿಗೂ ಸಿಎಂ ಬೊಮ್ಮಾಯಿ ಸಮಯ ಕೇಳಿದ್ದಾರೆ. ಭೇಟಿಗೆ ಅವಕಾಶ ಸಿಕ್ಕಿದರೆ, ಸಂಪುಟ ಪುನಾರಚನೆ ಬಗ್ಗೆ ಮಹತ್ವದ ಚರ್ಚೆ ನಡೆಸಲಿದ್ದಾರೆ. ಇಬ್ಬರೂ ಬುಧವಾರ ರಾತ್ರಿ ಅಥವಾ ಗುರುವಾರ ಬೆಳಗಿನ ಜಾವ ಬೆಂಗಳೂರಿಗೆ ವಾಪಸ್ ಆಗಲಿದ್ದಾರೆ. ಇದನ್ನೂ ಓದಿ: 2023ಕ್ಕೆ ಕೆಟಿಆರ್‌, ಡಿಕೆಶಿ ಇಬ್ಬರು ಪ್ಯಾಕ್ ಅಪ್: ಬಿಜೆಪಿ ಟ್ವೀಟ್ ತಿವಿತ

ಸಿಎಂ ದೆಹಲಿ ಪ್ರವಾಸ ಹಿನ್ನೆಲೆ, ಸಹಜವಾಗಿ ಸಚಿವ ಸ್ಥಾನದ ಆಕಾಂಕ್ಷಿಗಳಲ್ಲಿ ಮತ್ತೆ ನಿರೀಕ್ಷೆ ಗರಿಗೆದರಿದೆ. ಖಾಲಿ ಇರುವ 4 ಸ್ಥಾನಗಳನ್ನು ಭರ್ತಿ ಮಾಡಿಕೊಳ್ಳುವುದರ ಜೊತೆಗೆ ಕೆಲ ಹಿರಿಯ ಸಚಿವರನ್ನು ಕೈಬಿಟ್ಟು ಹೊಸಬರಿಗೆ ಆದ್ಯತೆ ನೀಡುವ ಬಗ್ಗೆ ವರಿಷ್ಠರ ಜತೆ ಸಿಎಂ ಚರ್ಚೆ ನಡೆಸುವ ಸಾಧ್ಯತೆ ಇದೆ. ಮುಂಬರುವ ಚುನಾವಣೆಯ ದೃಷ್ಟಿಯಿಂದ ಸಂಪುಟ ವಿಸ್ತರಣೆ ಅಥವಾ ಪುನಾರಚನೆಗೆ ಒಪ್ಪಿಗೆ ಕೊಡುವಂತೆ ಹೈಕಮಾಂಡ್ ಸಿಎಂ ಒಪ್ಪಿಗೆ ಕೇಳುವ ಸಾಧ್ಯತೆಯಿದೆ. ಇಲಾಖಾವಾರು ಯೋಜನೆಗಳ ಜಾರಿಯಲ್ಲಿ ಅಲಕ್ಷ್ಯ ವಹಿಸಿರುವ ಸಚಿವರನ್ನು ಕೈಬಿಡಬೇಕೆಂಬ ಆಗ್ರಹ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಕೆಲ ಹಿರಿಯರನ್ನು ಹಾಗೂ ಸಕ್ರಿಯರಲ್ಲದವರನ್ನು ಸಂಪುಟದಿಂದ ತೆಗೆಯುವ ಬಗ್ಗೆ ಹೈಕಮಾಂಡ್ ಜೊತೆ ಬೊಮ್ಮಾಯಿ ಚರ್ಚಿಸಲಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ರಾಜ್ಯಕ್ಕೆ ಕೇಂದ್ರ ಸಚಿವೆ ಸ್ಮೃತಿ ಇರಾನಿ ಭೇಟಿ – ಸಿಎಂ ಪತ್ನಿಯಿಂದ ಸಾಂಪ್ರದಾಯಿಕ ಸ್ವಾಗತ

ಮುಖ್ಯವಾಗಿ ಮೇಕೆದಾಟು ಯೋಜನೆಗೆ ಕೇಂದ್ರದ ಪರಿಸರ ಇಲಾಖೆಯ ಅನುಮತಿ ಬೇಕಾಗಿದೆ. ಈ ಸಂಬಂಧ ಗಜೇಂದ್ರ ಸಿಂಗ್ ಶೇಖಾವತ್ ಜೊತೆಗೆ ಬೊಮ್ಮಾಯಿ ಹಾಗೂ ಗೋವಿಂದ ಕಾರಜೋಳ ಮಹತ್ವದ ಮಾತುಕತೆ ನಡೆಸಲಿದ್ದಾರೆ. ಇತ್ತೀಚಿಗೆ ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಪ್ರಧಾನಿ ಭೇಟಿ ಮಾಡಿ ಮೇಕೆದಾಟು ಯೋಜನೆ ಜಾರಿಗೆ ಅನುಮತಿ ನೀಡದಂತೆ ಮನವಿ ಮಾಡಿದ್ದರು. ಅದಕ್ಕೂ ಮುನ್ನ ರಾಜ್ಯ ಸರ್ಕಾರ ವಿಧಾನ ಮಂಡಲದಲ್ಲಿ ತಮಿಳುನಾಡು ಸರ್ಕಾರದ ವಿಧಾನ ಸಭೆ ಅಂಗೀಕರಿಸಿದ ನಿರ್ಣಯ ಖಂಡಿಸಿ ನಿರ್ಣಯ ಅನುಮೋದಿಸಿತ್ತು. ಕೇಂದ್ರ ಸಚಿವರ ಭೇಟಿ ಬಳಿಕ ಸರ್ವ ಪಕ್ಷ ನಾಯಕರನ್ನು ಕರೆದೊಯ್ಯಲು ಕಾಂಗ್ರೆಸ್ ಜೆಡಿಎಸ್ ಆಗ್ರಹಿಸಿತ್ತು. ಹೀಗಾಗಿ ಸದ್ಯಕ್ಕೆ ಈಗ ಮೊದಲು ಬೊಮ್ಮಾಯಿ ಹಾಗೂ ಗೋವಿಂದ ಕಾರಜೋಳ ಕೇಂದ್ರ ಜಲಶಕ್ತಿ ಸಚಿವರ ಭೇಟಿ ಮಾಡಿ ಮನವಿ ಸಲ್ಲಿಕೆ ಮಾಡಲಿದ್ದಾರೆ. ನಂತರ ಅಗತ್ಯ ಬಿದ್ದರೆ ಸರ್ವ ಪಕ್ಷ ನಿಯೋಗಕೊಂಡೊಯ್ದು ಪ್ರಧಾನಿ ಮತ್ತು ಜಲಶಕ್ತಿ ಸಚಿವರ ಭೇಟಿಗೂ ಪ್ರಯತ್ನಿಸಲಾಗುತ್ತದೆ ಎಂಬ ಮಾತು ಕೇಳಿಬರುತ್ತಿದೆ.

Share This Article
Leave a Comment

Leave a Reply

Your email address will not be published. Required fields are marked *