WPL – ಮೆಗ್‌ ಲ್ಯಾನಿಂಗ್‌ ಅರ್ಧಶತಕ; ಗುಜರಾತ್‌ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್‌ಗೆ 25 ರನ್‌ಗಳ ಗೆಲುವು

Public TV
2 Min Read

ಬೆಂಗಳೂರು: ಆರಂಭಿಕ ಆಟಗಾರ್ತಿ ಮೆಗ್‌ ಲ್ಯಾನಿಂಗ್‌ ಅರ್ಧಶತಕ ಹಾಗೂ ಜೆಸ್ ಜೊನಾಸೆನ್, ಅನ್ನಾಬೆಲ್ ಸದರ್ಲೆಂಡ್‌ ಬೌಲಿಂಗ್‌ ನೆರವಿನಿಂದ ಗುಜರಾತ್‌ ಜೈಂಟ್ಸ್‌ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್‌ ತಂಡವು 25 ರನ್‌ಗಳ ಜಯ ಸಾಧಿಸಿದೆ.

ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಟಾಸ್‌ ಗೆದ್ದು ಗುಜರಾತ್‌ ತಂಡವು ಫೀಲ್ಡಿಂಗ್‌ ಆಯ್ದುಕೊಂಡಿತು. ಆದರೆ ಡೆಲ್ಲಿ ಕ್ಯಾಪಿಟಲ್ಸ್‌ ತಂಡ ನೀಡಿದ್ದ 164 ರನ್‌ಗಳ ಗುರಿ ಬೆನ್ನತ್ತಲಾಗದೇ ಸೋಲನುಭವಿಸಿತು. ಗುಜರಾತ್‌ 20 ಓವರ್‌ಗೆ 8 ವಿಕೆಟ್‌ ನಷ್ಟಕ್ಕೆ 138 ರನ್‌ ಗಳಿಸಲಷ್ಟೇ ಶಕ್ತಿವಾಗಿ ಸೋಲೊಪ್ಪಿಕೊಂಡಿತು.

ಮೊದಲು ಬ್ಯಾಟಿಂಗ್‌ ಮಾಡಿದ ಡೆಲ್ಲಿ ತಂಡವು ಅಲ್ಪಮೊತ್ತಕ್ಕೆ ಕುಸಿಯುವ ಆತಂಕ ಎದುರಿಸಿತ್ತು. ಇನಿಂಗ್ಸ್‌ನ ಮೂರನೇ ಓವರ್‌ನಲ್ಲಿ ಶಫಾಲಿ ವರ್ಮಾ ಕೇವಲ 13 ರನ್‌ಗಳಿಗೆ ವಿಕೆಟ್‌ ಒಪ್ಪಿಸಿ ಹೊರ ನಡೆದರು. ಅಲೈಸ್‌ ಕ್ಯಾಪ್ಸಿಗೊ 27 ರನ್‌ ಗಳಿಸಿ ಪೆವಿಲಿಯನ್‌ ಸೇರಿದರು. ಈ ಪರಿಸ್ಥಿತಿಯನ್ನು ಜವಾಬ್ದಾರಿಯುತವಾಗಿ ನಿಭಾಯಿಸಿದ ಮೆಗ್‌ ಲ್ಯಾನಿಂಗ್‌ ಅರ್ಧಶತಕ (55 ರನ್‌, 41 ಬಾಲ್‌, 6 ಫೋರ್‌, 1 ಸಿಕ್ಸರ್‌) ಸಿಡಿಸಿ ಮಿಂಚಿದರು.

ಜೆಮಿಯಾ ರಾಡ್ರಿಗಸ್‌ (7 ರನ್) ಕೂಡ ಕ್ರೀಸ್‌ನಲ್ಲಿ ಹೆಚ್ಚು ಹೊತ್ತು ನಿಲ್ಲಲಿಲ್ಲ. ಅನ್ನಾಬೆಲ್‌ ಸದರ್ಲೆಂಡ್‌ 20, ಜೆಸ್ ಜೊನಾಸೆನ್ 11, ಅರುಂಧತಿ ರೆಡ್ಡಿ ಮತ್ತು ರಾಧಾ ಯಾದವ್ ತಲಾ 5, ಶಿಖಾ ಪಾಂಡೆ 14 (ಔಟಾಗದೆ) ರನ್‌ ಗಳಿಸಿ ತಂಡದ ಮೊತ್ತ 162 ಕ್ಕೆ ತಂದು ನಿಲ್ಲಿಸಿದರು.

ಹೋರಾಟದ ಮೊತ್ತವನ್ನು ಬೆನ್ನತ್ತಿದ ಗುಜರಾತ್‌ ತಂಡವು ಬ್ಯಾಟಿಂಗ್‌ ವೈಫಲ್ಯ ಅನುಭವಿಸಿತು. ಬೆತ್ ಮೂನಿ ಕೇವಲ 12 ರನ್‌ ಗಳಿಸಿ ಔಟಾದರು. ಲಾರಾ ವೊಲ್ವಾರ್ಡ್ಟ್ ಶೂನ್ಯ ಸುತ್ತಿ ಹೊರನಡೆದರು. ಫೋಬೆ ಲಿಚ್ಫೀಲ್ಡ್ 15, ವೇದಾ ಕೃಷ್ಣಮೂರ್ತಿ 12 ರನ್‌ ಅಷ್ಟೇ ಗಳಿಸಿದರು. ಆಶ್ಲೀ ಗಾರ್ಡ್ನರ್ ಏಕಾಂಗಿ ಹೋರಾಟ ಕೈಗೂಡಲಿಲ್ಲ. ಗಾರ್ಡ್ನರ್‌ 41 ರನ್‌ ಗಳಿಸಿ (5 ಫೋರ್‌, 1 ಸಿಕ್ಸರ್‌) ಭರವಸೆ ಇದ್ದಾಗಲೇ ವಿಕೆಟ್‌ ಕೈಚೆಲ್ಲಿದರು. ತನುಜಾ ಕನ್ವರ್ 13, ಮೇಘನಾ ಸಿಂಗ್ 10 ರನ್‌ ಗಳಿಸಿದ್ದು ಬಿಟ್ಟರೆ ಯಾವ ಆಟಗಾರ್ತಿಯೂ ಕ್ರೀಸ್‌ನಲ್ಲಿ ಹೆಚ್ಚು ಹೊತ್ತು ನಿಲ್ಲಲಿಲ್ಲ. ಇದರಿಂದ ತಂಡವು ಸೋಲೊಪ್ಪಿಕೊಂಡಿತು.

ಡೆಲ್ಲಿ ತಂಡದ ಪರ ಜೆಸ್ ಜೊನಾಸೆನ್ ಹಾಗೂ ರಾಧಾ ಯಾದವ್ ತಲಾ 3 ವಿಕೆಟ್‌ ಕಬಳಿಸಿ ತಂಡದ ಗೆಲುವಿಗೆ ನೆರವಾದರು. ಗುಜರಾತ್‌ ತಂಡದ ಪರ ಮೇಘನಾ ಸಿಂಗ್ 4 ವಿಕೆಟ್‌ ಕಬಳಿಸಿ ಗಮನ ಸೆಳೆದಿದ್ದರು. ಆಶ್ಲೀ ಗಾರ್ಡ್ನರ್ 2 ವಿಕೆಟ್‌ ಉರುಳಿಸಿದ್ದರು.

Share This Article