ಸರ್ಕಾರ ಉಳಿಸಿಕೊಳ್ಳಲು ಮೈತ್ರಿ ನಾಯಕರ ನಿವಾಸದಲ್ಲಿ ಬಿರುಸಿನ ಚರ್ಚೆ

Public TV
1 Min Read

– ಸಿದ್ದರಾಮಯ್ಯ, ಎಚ್‍ಡಿಡಿ ನಿವಾಸದಲ್ಲಿ ನಿರಂತರ ಸಭೆ

ಬೆಂಗಳೂರು: ಅತೃಪ್ತ ಶಾಸಕರನ್ನು ಕರೆ ತರಲು ಮೈತ್ರಿ ನಾಯಕರು ಇನ್ನಿಲ್ಲದ ಕಸರತ್ತು ನಡೆಸಿದ್ದು, ಒಂದೆಡೆ ಜೆಡಿಎಸ್ ವರಿಷ್ಠ ದೇವೇಗೌಡರ ಮನೆಯಲ್ಲಿ ರಣತಂತ್ರ ಇನ್ನೊಂದೆಡೆ ಸಿಎಲ್‍ಪಿ ನಾಯಕ ಸಿದ್ದರಾಮಯ್ಯನವರ ನಿವಾಸದಲ್ಲಿ ಗಂಭೀರ ಚರ್ಚೆ ನಡೆಯುತ್ತಿದೆ.

ಇಂದು ಬೆಳಗ್ಗೆಯಿಂದ ದೇವೇಗೌಡರ ಮನೆಯಲ್ಲಿ ಸಭೆ ಮೇಲೆ ಸಭೆ ನಡೆಸಿ, ರಣತಂತ್ರ ಹೆಣೆಯುತ್ತಿದ್ದು, ಇತ್ತ ಸಿದ್ದರಾಮಯ್ಯನವರ ಮನೆಯಲ್ಲಿ ಸಹ ಗಾಢ ಚರ್ಚೆ ನಡೆಯುತ್ತಿದೆ. ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಸಿದ್ದರಾಮಯ್ಯ ಅವರ ನಿವಾಸದಲ್ಲಿ ಗಾಢ ಚರ್ಚೆಯಲ್ಲಿ ತೊಡಗಿದ್ದಾರೆ. ಕೆಲ ಅತೃಪ್ತ ಶಾಸಕರು ಬೆಂಗಳೂರಿಗೆ ಬಂದಿದ್ದಾರೆ ಎಂಬ ವದಂತಿ ಹರಡುತ್ತಿದ್ದ ಬೆನ್ನಲ್ಲೇ ಜೆಡಿಎಸ್ ಹಾಗೂ ಕಾಂಗ್ರೆಸ್ ನಾಯಕರ ನಿವಾಸಗಳಲ್ಲಿ ಬಿಸಿ ಬಿಸಿ ಚರ್ಚೆ ನಡೆಯುತ್ತಿದ್ದು, ಹೇಗಾದರೂ ಮಾಡಿ ಮನವೊಲಿಸಬೇಕು ಎಂಬ ದಾರಿಯನ್ನು ನಾಯಕರು ಹುಡುಕುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಅತೃಪ್ತರನ್ನು ಸಂಪರ್ಕಿಸಬಹುದೇ ಎಂಬುದರ ಕುರಿತು ಮೈತ್ರಿ ನಾಯಕರು ತಲೆ ಕೆಡಿಸಿಕೊಂಡಿದ್ದು, ಎಸ್.ಟಿ.ಸೋಮಶೇಖರ್, ಭೈರತಿ ಬಸವರಾಜ್, ಮುನಿರತ್ನ, ಎಂಟಿಬಿ ನಾಗರಾಜ್ ಮನವೊಲಿಸುವ ಪ್ರಯತ್ನಕ್ಕೆ ಮುಂದಾಗುತ್ತಿದ್ದಾರೆ ಎನ್ನಲಾಗುತ್ತಿದೆ. ರಾಮಲಿಂಗ ರೆಡ್ಡಿ ರಾಜೀನಾಮೆ ವಾಪಸ್ ಪಡೆದಿದ್ದರಿಂದ ಅವರ ಮೂಲಕವೇ ನಾಲ್ವರನ್ನೂ ಹೇಗಾದರು ಮಾಡಿ ಸಂಪರ್ಕಿಸಿದರೆ, ನಂತರ ಮನವೊಲಿಸಬಹುದು ಎಂಬ ಆಲೋಚನೆಯಲ್ಲಿದ್ದಾರೆ ಎನ್ನಲಾಗುತ್ತಿದೆ.

ನಾಲ್ವರನ್ನೂ ಸಂಪರ್ಕಿಸಿ ಸಮಾಧಾನ ಪಡಿಸಿದಲ್ಲಿ, ಕಾರ್ಯಸಾಧುವಾಗಬಹುದು ಎಂಬುದರ ಕುರಿತು ದೋಸ್ತಿ ನಾಯಕರು ಗಾಢ ಚರ್ಚೆ ನಡೆಸುತ್ತಿದ್ದಾರೆ. ಅಲ್ಲದೆ, ರಾಜ್ಯಪಾಲರು ಕೇಂದ್ರ ಗೃಹ ಇಲಾಖೆಗೆ ವರದಿ ಸಲ್ಲಿಸಿರುವ ಬಗ್ಗೆ ಸಹ ನಾಯಕರು ಚರ್ಚೆ ನಡೆಸಿದ್ದು, ರಾಜ್ಯಪಾಲರು ವರದಿ ಕೊಟ್ಟಿರುವುದರಿಂದ ಆಗಬಹುದಾದ ಬೆಳವಣಿಗಗಳ ಬಗ್ಗೆ ಸಮಾಲೋಚನೆ ನಡೆಸಿದ್ದಾರೆ. ಇದೇ ವೇಳೆ ಸಭೆಯ ಮಧ್ಯ ಜಮೀರ್ ಆಹಮ್ಮದ್ ಸಹ ಆಗಮಿಸಿದ್ದು, ಎಲ್ಲರೂ ಸೇರಿ ಸರ್ಕಾರ ಉಳಿಸಿಕೊಳ್ಳುವ ಮಾರ್ಗೋಪಾಯಗಳನ್ನು ಹುಡುಕುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

Share This Article
Leave a Comment

Leave a Reply

Your email address will not be published. Required fields are marked *