ವೈದ್ಯಕೀಯ ವಿದ್ಯಾರ್ಥಿಗಳ ಮೇಲೆ ಸೀನಿಯರ್‌ನಿಂದ ಹಲ್ಲೆ!

Public TV
1 Min Read

ಗದಗ: ಕ್ಷುಲ್ಲಕ ಕಾರಣಕ್ಕಾಗಿ ವೈದ್ಯಕೀಯ ವಿದ್ಯಾರ್ಥಿಗಳ ಮೇಲೆ ಮತ್ತೊಂದು ವಿದ್ಯಾರ್ಥಿಗಳ ಗುಂಪು ಮನಬಂದಂತೆ ಹಲ್ಲೆ ಮಾಡಿರುವ ಘಟನೆ ಗದಗ ವೈದ್ಯಕೀಯ ಮಹಾ ವಿದ್ಯಾಲಯದ ವಿದ್ಯಾರ್ಥಿನಿಲಯದಲ್ಲಿ ನಡೆದಿದೆ.

ಎಂಬಿಬಿಎಸ್ ವಿದ್ಯಾರ್ಥಿ ಹೃತೇಶ್ ಹಾಗೂ ಅನೂಪ್ ನಡುವೆ ಎರಡು ದಿನಗಳ ಹಿಂದೆ ಕಾಲೇಜಿನಲ್ಲಿ ಸಣ್ಣ ಗಲಾಟೆ ಏರ್ಪಟ್ಟಿತ್ತು. ಇದರಿಂದ ರೊಚ್ಚಿಗೆದ್ದ ಹೃತೇಶ್ ಹಾಗೂ ಅವರ ತಂದೆ ಮೋಹನ್ ಬಂಜಾರ ಹಾಗೂ ಬಾವ ಸೇರಿದಂತೆ ಒಟ್ಟು ನಾಲ್ವರು ಶನಿವಾರ ತಡರಾತ್ರಿ  ಏಕಾಏಕಿ ಜಿಮ್ಸ್ ಬಾಯ್ಸ್ ಹಾಸ್ಟೆಲ್ ಗೆ ನುಗ್ಗಿ ಅಲ್ಲಿದ್ದ ಅನೂಪ್ ಹಾಗೂ ಇತರೆ ನಾಲ್ಕು ಜನ ವಿದ್ಯಾರ್ಥಿಗಳ ಮೇಲೆ ಮನಬಂದಂತೆ ಹಲ್ಲೆ ನಡೆಸಿದ್ದಾರೆ.

ಕಟ್ಟಿಗೆ, ಕಲ್ಲು, ಹಾಗೂ ಬೆಲ್ಟ್ ನಿಂದ ಹಲ್ಲೆ ಮಾಡಿರುವುದರಿಂದ ವಿದ್ಯಾರ್ಥಿಗಳಾದ ಅನುಪ್, ಎನ್.ವಿ.ಸ್ಕಂದ, ಉಲ್ಲಾಸ್ ಹಾಗೂ ಮೊಹಮ್ಮದ್ ಎಂಬ ನಾಲ್ವರು ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಕೂಡಲೇ ಹಾಸ್ಟೆಲ್ ನ ಇತರೆ ವಿದ್ಯಾರ್ಥಿಗಳು ಜಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದು, ಸದ್ಯ ಚಿಕಿತ್ಸೆ ಪಡೆಯುತ್ತಿದ್ದಾರೆ.

ಹಾಸ್ಟೆಲ್ ನುಗ್ಗಿ ಗೂಂಡಾಗಿರಿ ಮಾಡಿದವರನ್ನು ಬಂಧಿಸುವಂತೆ ಆಗ್ರಹಿಸಿ ಜಿಮ್ಸ್ ವಿದ್ಯಾರ್ಥಿಗಳು ಸ್ಥಳದಲ್ಲೇ ಪ್ರತಿಭಟನೆ ನಡೆಸಿದ್ದರು. ಹೀಗಾಗಿ ಹಾಸ್ಟೆಲ್‍ನ ಬಳಿ ಕೆಲಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ನಾಗಾವಿತಾಂಡದ ಹೃತೀಶ್, ತಂದೆ ಮೋಹನ್ ಬಂಜಾರ ಹಾಗೂ ಮತ್ತಿಬ್ಬರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.

ಘಟನೆ ಸಂಬಂಧ ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *