ಉಡುಪಿ ಡಿಸಿ ಕೈ ಸೇರಿದ ವೈದ್ಯಕೀಯ ವರದಿ – ಕೊರೊನಾ ದೃಢ

Public TV
1 Min Read

– ಟ್ರಾವೆಲ್ ಹಿಸ್ಟರಿ ವಿಚಾರಣೆ ಶುರು

ಉಡುಪಿ: ಜಿಲ್ಲೆಯಲ್ಲಿ ಪ್ರಥಮ ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ. ಪ್ರಾಥಮಿಕ ಮಾಹಿತಿಯಲ್ಲಿ ಕೊರೊನಾ ಇರುವುದು ಸ್ಪಷ್ಟವಾಗಿದ್ದು, ಹಾಸನದಿಂದ ಬಂದ ವರದಿ ಕೂಡ ವ್ಯಕ್ತಿಯನ್ನು ಕೊರೊನಾ ಪಾಸಿಟಿವ್ ಎಂಬುದನ್ನು ದೃಢ ಮಾಡಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಜಿಲ್ಲಾಧಿಕಾರಿ ಜಿ.ಜಗದೀಶ್, ರಾಜ್ಯದ ನೋಡೆಲ್ ಅಧಿಕಾರಿ ಜೊತೆ ನಾನು ಮಾತನಾಡಿದ್ದೇನೆ. ಡಾಕ್ಟರ್ ಅರುಂಧತಿ ಚಂದ್ರಶೇಖರ್ ಜೊತೆ ಸಂಪರ್ಕದಲ್ಲಿದ್ದೇನೆ. ಆ ವ್ಯಕ್ತಿಯ ಚಲನವಲನಗಳನ್ನು ಟ್ರ್ಯಾಕ್ ಮಾಡುತ್ತಿದ್ದೇವೆ. ಆತ ಬಂದ ವಿಮಾನದ ಬಗ್ಗೆ ಕೂಡ ಪರಿಶೀಲನೆ ನಡೆಸಲಾಗುತ್ತಿದೆ ಎಂದರು. ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಜೊತೆ ಸಂಪರ್ಕದಲ್ಲಿದ್ದೇನೆ. ಆ ವ್ಯಕ್ತಿ ಏಳು ದಿನದಿಂದಲೂ ಕೂಡ ನಮ್ಮ ನಿಗಾದಲ್ಲೇ ಇದ್ದ ಎಂದರು.

ಸೋಂಕಿತ ಕ್ವಾರಂಟೈನ್‍ನಲ್ಲಿ ಇರುವ ಸಂದರ್ಭ ಅನಾರೋಗ್ಯಕ್ಕೆ ಒಳಗಾಗಿದ್ದನು. ಈ ವ್ಯಕ್ತಿ ಕೆಎಂಸಿಯ ಸಿಬ್ಬಂದಿ ಎಂದು ತಿಳಿದುಬಂದಿದೆ. ದುಬೈನಿಂದ ಬಂದ ನಂತರ ಆತ ಕೆಲಸಕ್ಕೆ ಹೋಗಿಲ್ಲ. ಮಡದಿ ಮತ್ತು ಮಗುವಿನ ಜೊತೆ ಕೂಡ ಸಂಪರ್ಕದಲ್ಲಿ ಇರಲಿಲ್ಲ. ಮನೆಯಿಂದ ಜಿಲ್ಲಾಸ್ಪತ್ರೆಗೆ ಒಬ್ಬನೇ ಕಾರಿನಲ್ಲಿ ಬಂದಿದ್ದಾನೆ. ಸಂಪೂರ್ಣ ನಿಗಾದಲ್ಲಿ ಚಿಕಿತ್ಸೆ ಕೊಡಲಾಗಿತ್ತು. ಲಕ್ಷಣಗಳಿದ್ದ ಕಾರಣ ವೈದ್ಯರು ಬೇರೆಯೇ ಕೊಠಡಿಯಲ್ಲಿ ಚಿಕಿತ್ಸೆ ವ್ಯವಸ್ಥೆ ಮಾಡಿದ್ದರು ಎಂದು ತಿಳಿಸಿದರು.

ಮೂಲತಃ ದಾವಣಗೆರೆಯವನಾಗಿರುವ ಈತ, ಮಣಿಪಾಲಕ್ಕೆ ಉದ್ಯೋಗದ ಕಾರಣ ಶಿಫ್ಟ್ ಆಗಿದ್ದ. ದುಬೈಗೆ ಪ್ರವಾಸಕ್ಕೆ ಎಂದು ತೆರಳಿದ್ದು, ಅಲ್ಲಿ ಕೊರೊನಾ ಸೋಂಕು ಅಂಟಿಕೊಂಡಿದೆ. ಭಾರತ ತಲುಪಿ ಏಳು ದಿನದ ನಂತರ ಕೊರೊನಾ ವೈರಸ್ ಜೀವ ಪಡೆದುಕೊಂಡಿದೆ ಎಂದು ತಜ್ಞ ವೈದ್ಯರು ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದರು.

Share This Article
Leave a Comment

Leave a Reply

Your email address will not be published. Required fields are marked *