1 ರೂ. ಆರೋಗ್ಯ ಕ್ಲಿನಿಕ್, 10 ರೂ. ಊಟ- ಶಿವಸೇನೆ ಪ್ರಣಾಳಿಕೆ ಬಿಡುಗಡೆ

Public TV
1 Min Read

ಮುಂಬೈ: ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗೆ ಬಿಜೆಪಿ ಮಿತ್ರಪಕ್ಷ ಶಿವಸೇನೆ ಶನಿವಾರ ತನ್ನ ಪ್ರಣಾಳಿಕೆ ಬಿಡುಗಡೆ ಮಾಡಿದೆ. ಈ ಪ್ರಣಾಳಿಕೆಯಲ್ಲಿ ಸುಮಾರು 200 ಕಾಯಿಲೆಗಳಿಗೆ 1 ರೂಪಾಯಿಯಲ್ಲಿ ತಪಾಸಣೆ ಸೌಲಭ್ಯ, ಹತ್ತು ರೂಪಾಯಿಗೆ ಫುಲ್ ಮೀಲ್ಸ್, ವಿದ್ಯುತ್ ಬಿಲ್ ಕಡಿತ, ರೈತರ ಋಣ­ಭಾರ ಇಳಿಕೆ ಹೀಗೆ ಹಲವು ಅಂಶಗಳನ್ನು ಉಲ್ಲೇಖಿಸಲಾಗಿದೆ.

ಪಕ್ಷದ ಅಧ್ಯಕ್ಷ ಉದ್ಧವ್ ಠಾಕ್ರೆ ಮತ್ತು ಯುವ ಸೇನಾ ಮುಖ್ಯಸ್ಥ ಆದಿತ್ಯ ಠಾಕ್ರೆ ಅವರು ಶನಿವಾರ ಪ್ರಣಾಳಿಕೆ ಬಿಡುಗಡೆ ಮಾಡಿದರು. ಅ. 21ರಂದು 288 ಸ್ಥಾನಗಳಿಗಾಗಿ ಚುನಾವಣೆ ನಡೆಯಲಿದ್ದು, ಶಿವಸೇನೆ 124 ಸ್ಥಾನಗಳಲ್ಲಿ ಸ್ಪರ್ಧೆಗಿಳಿಯುತ್ತಿದೆ. ಬಿಜೆಪಿ ಮತ್ತು ಇತರೆ ಸಣ್ಣ ಮಿತ್ರಪಕ್ಷಗಳು ಉಳಿದ 164 ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು ಚುನಾವಣ ಅಖಾಡಕ್ಕೆ ಇಳಿಸಲಿದೆ.

ಚುನಾವಣೆಯಲ್ಲಿ ಗೆದ್ದು, ಅಧಿಕಾರಕ್ಕೆ ಬಂದರೆ “ರೂ. 1 ಆರೋಗ್ಯ ಕ್ಲಿನಿಕ್” ಯೋಜನೆಯಡಿಯಲ್ಲಿ ಜನರಿಗೆ 200ಕ್ಕೂ ಹೆಚ್ಚು ಕಾಯಿಲೆಗಳಿಗೆ ಕೈಗೆಟುಕುವ ದರದಲ್ಲಿ ತಪಾಸಣೆ ಒದಗಿಸುತ್ತದೆ ಎಂದು ಉದ್ಧವ್ ಅವರು ಹೇಳಿದರು. ಜೊತೆಗೆ ವಿದ್ಯುತ್ ದರ ಕಡಿತ ಹಾಗೂ ರಾಜ್ಯಾದ್ಯಂತ 1 ಸಾವಿರ ಭೋಜನಾಲಯ ಸ್ಥಾಪಿಸಿ ಅಲ್ಲಿ 10 ರೂಪಾಯಿಗೆ ಗುಣಮಟ್ಟದ ಊಟ ನೀಡುವ ಭರವಸೆಯನ್ನು ನೀಡಿದರು. ಪ್ರತಿ ಜಿಲ್ಲೆಯಲ್ಲೂ ಭೋಜನಾಲಯ ತೆರೆಯುತ್ತೇವೆ. ಇದನ್ನು ನಡೆಸಲು ಮಹಿಳಾ ಸ್ವಸಹಾಯ ಗುಂಪುಗಳ ಸಹಾಯ ಪಡೆಯುತ್ತೇವೆ ಎಂದು ಉದ್ಧವ್ ಠಾಕ್ರೆ ತಿಳಿಸಿದರು.

ಹಾಗೆಯೇ 300 ಯುನಿಟ್‍ಗಳ ವರೆಗೆ ಬಳಸುವ ವಿದ್ಯುತ್‍ಗೆ ಶೇ. 30ರಷ್ಟು ದರ ಕಡಿತ ಮಾಡಲಾಗುತ್ತೆ. ಹಳ್ಳಿಗಳಿಗೆ ವಿಶೇಷ ಬಸ್ ಸೇವೆ, ಬಡ ರೈತರಿಗೆ ವಾರ್ಷಿಕ 10 ಸಾವಿರ ರೂಪಾಯಿ ನೆರವು, ರೈತರ ಸಾಲಮನ್ನಾ ಹಾಗೂ ರಸಗೊಬ್ಬರ ಬೆಲೆ ನಿಗದಿ ಸೇರಿದಂತೆ ಹಲವು ಭರವಸೆಯನ್ನು ತನ್ನ ಪ್ರಣಾಳಿಕೆಯಲ್ಲಿ ಶಿವಸೇನೆ ಪ್ರಸ್ತಾಪಿಸಿದೆ.

ಅತ್ತ ಕಾಂಗ್ರೆಸ್-ಎನ್‍ಸಿಪಿ ಮೈತ್ರಿಕೂಟ, ಸಂಚಾರಿ ನಿಯಮ ಉಲ್ಲಂಘನೆ ದಂಡದ ಮೊತ್ತ ಕಡಿಮೆ ಮಾಡುವುದಾಗಿ ಹಾಗೂ ತಕ್ಷಣ ರೈತರ ಸಾಲ ಮನ್ನಾ ಮಾಡುವ ವಿಚಾರ ಸೇರಿ ಹಲವು ಭರವಸೆಗಳ ಪ್ರಣಾಳಿಕೆಯನ್ನು ಅಕ್ಟೋಬರ್ 7ರಂದು ಬಿಡುಗಡೆ ಮಾಡಿದೆ. ಇತ್ತ ಶಿವಸೇನಾ ಮಿತ್ರ ಪಕ್ಷ ಬಿಜೆಪಿ ಇನ್ನೂ ಚುನಾವಣೆ ಪ್ರಣಾಳಿಕೆ ಬಿಡುಗಡೆ ಮಾಡಿಲ್ಲ.

Share This Article
Leave a Comment

Leave a Reply

Your email address will not be published. Required fields are marked *