11 ತಿಂಗಳಲ್ಲಿ 4.71 ಲಕ್ಷ ಕೋಟಿ ಹೂಡಿಕೆ: ಎಂ.ಬಿ ಪಾಟೀಲ್‌

3 Min Read

ಬೆಂಗಳೂರು: 2025ರ ಫೆಬ್ರವರಿಯಲ್ಲಿ ನಡೆಸಿದ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ 10.27 ಲಕ್ಷ ಕೋಟಿ ರೂ. ಬಂಡವಾಳ ಹೂಡಿಕೆಯ ಖಾತ್ರಿ ಸಿಕ್ಕಿತ್ತು. ಈ ಪೈಕಿ ಡಿಸೆಂಬರ್ ಕೊನೆಯ ಹೊತ್ತಿಗೆ 4.71 ಲಕ್ಷ ಕೋಟಿ ರೂ. ನೈಜ ಹೂಡಿಕೆ ಆಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್‌ (MB Patil) ತಿಳಿಸಿದ್ದಾರೆ.

ಜ.19 ರಿಂದ 23ರ ವರೆಗೆ ದಾವೋಸ್ ನಲ್ಲಿ ನಡೆಯಲಿರುವ ವಿಶ್ವ ಮಟ್ಟದ ಆರ್ಥಿಕ ಶೃಂಗಸಭೆಗೆ ತೆರಳಲು ಸಿದ್ಧವಾಗುತ್ತಿರುವುದಕ್ಕೆ ಪೂರ್ವಭಾವಿಯಾಗಿ ಸಚಿವರು ಕಳೆದ ಒಂದು ವರ್ಷದಲ್ಲಿ ರಾಜ್ಯದ ಕೈಗಾರಿಕಾ ಕ್ಷೇತ್ರದ (Industrial sector) ವಿವಿಧ ವಲಯಗಳಲ್ಲಿ ಆಗಿರುವ ಹೂಡಿಕೆ, ಅರ್ಜಿ ಸಲ್ಲಿಕೆ ಮುಂತಾದ ಪ್ರಗತಿಯ ಅಂಕಿ-ಅಂಶಗಳನ್ನು ನೀಡಿದ್ದಾರೆ. ಇದನ್ನೂ ಓದಿ: ಸಂಕ್ರಾಂತಿಯಂದು ವಿಶ್ವದ ಚಿಕ್ಕ ಪುಂಗನೂರು ಹಸುಗಳಿಗೆ ಹುಲ್ಲು ಹಾಕಿದ ಮೋದಿ – ಈ ತಳಿಯ ವಿಶೇಷತೆ ಏನು?

ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಮಾಡಿಕೊಂಡಿರುವ ಹೂಡಿಕೆ ಒಡಂಬಡಿಕೆಗಳಲ್ಲಿ 46% ರಷ್ಟು ನೈಜ ಹೂಡಿಕೆಯಾಗಿ ಸಾಕಾರಗೊಂಡಿವೆ. ಈ ಪೈಕಿ ತಯಾರಿಕಾ ವಲಯಕ್ಕೆ 5.66 ಲಕ್ಷ ಕೋಟಿ ರೂ., ಹೂಡಿಕೆ ಖಾತ್ರಿಯಲ್ಲಿ 3.22 ಲಕ್ಷ ಕೋಟಿ ರೂ. ನೈಜ ಬಂಡವಾಳವಾಗಿ ಈಗಾಗಲೇ ಬಂದಿದೆ. ಹಾಗೆಯೇ, ಮರುಬಳಕೆ ಇಂಧನ ವಲಯದಲ್ಲಿ 4.25 ಲಕ್ಷ ಕೋಟಿ ರೂ. ಖಾತ್ರಿಯ ಪೈಕಿ 1.41 ಲಕ್ಷ ಕೋಟಿ ರೂ. ಹೂಡಿಕೆ ಹರಿದಿದ್ದು, ಮೂಲಸೌಕರ್ಯ ಅಭಿವೃದ್ಧಿ ಕ್ಷೇತ್ರಕ್ಕೆ 0.45 ಲಕ್ಷ ಕೋಟಿ ರೂ.ಗಳ ಹೂಡಿಕೆ ವಾಗ್ದಾನದಲ್ಲಿ 0.085 ಲಕ್ಷ ಕೋಟಿ ರೂ. ಹೂಡಿಕೆ ಬಂದಿದೆ. ಇದು ಕ್ರಮವಾಗಿ ಶೇ.58, ಶೇ.33 ಮತ್ತು ಶೇ.19 ರ ಯಶಸ್ಸಿನ ದಾಖಲೆಯಾಗಿದೆ ಎಂದಿದ್ದಾರೆ.

ನಾವು ಕೇವಲ ಒಡಂಬಡಿಕೆಯ ಮಟ್ಟದಲ್ಲಿ ಮಾತ್ರ ನಿಂತಿಲ್ಲ. ಹೂಡಿಕೆ ಪ್ರಸ್ತಾವನೆ ಸಲ್ಲಿಸಿದ ಕೂಡಲೇ ಅರ್ಜಿ ಸಲ್ಲಿಕೆ, ಭೂಮಿ ಮತ್ತಿತರ ಮಂಜೂರಾತಿಗಳು, ಕಡ್ಡಾಯ ಅನುಮೋದನೆಗಳು ಇವೆಲ್ಲವನ್ನೂ ಸಂಪೂರ್ಣ ಡಿಜಿಟಲ್ ವೇದಿಕೆಯಾಗಿರುವ ಏಕಗವಾಕ್ಷಿ ವ್ಯವಸ್ಥೆ ಮೂಲಕ ಒದಗಿಸುತ್ತಿದ್ದೇವೆ. ಇದರ ಅಡಿಯಲ್ಲಿ 30 ಕ್ಕೂ ಹೆಚ್ಚು ಇಲಾಖೆಗಳ 150 ಕ್ಕೂ ಹೆಚ್ಚು ಸೇವೆಗಳನ್ನು ಏಕತ್ರಗೊಳಿಸಲಾಗಿದೆ. ಇದರಿಂದಾಗಿ ತಯಾರಿಕೆ, ಇಎಸ್‌ಡಿಎಂ, ಸೆಮಿಕಂಡಕ್ಟರ್, ಆಹಾರ ಸಂಸ್ಕರಣೆ ಕ್ಷೇತ್ರಗಳಿಗೆ ಹೆಚ್ಚಿನ ಬಂಡವಾಳವು ನೈಜರೂಪದಲ್ಲಿ ಹರಿದುಬರುತ್ತಿದೆ ಎಂದು ಅವರು ವಿವರಿಸಿದ್ದಾರೆ.

ಕಳೆದ ಒಂದು ವರ್ಷದಲ್ಲಿ ರಾಜ್ಯದಲ್ಲಿ ಹೂಡಿಕೆ ಪ್ರಸ್ತಾವನೆಗಳು ತ್ವರಿತವಾಗಿ ಅನುಷ್ಠಾನಗೊಳ್ಳುತ್ತಿದ್ದು, ಮೊದಲಿಗಿಂತಲೂ ಹೆಚ್ಚು ಕೈಗಾರಿಕಾಸ್ನೇಹಿಯಾಗಿದೆ. ಒಟ್ಟು ಹೂಡಿಕೆ ಪ್ರಸ್ತಾವನೆಗಳ ಪೈಕಿ ಶೇ.50ರಷ್ಟು ಮತ್ತು ತಯಾರಿಕೆ ವಲಯದ ಹೂಡಿಕೆ ಪ್ರಸ್ತಾವನೆಗಳಲ್ಲಿ ಶೇ.60ರಷ್ಟು `ಕರ್ನಾಟಕ ಉದ್ಯೋಗ ಮಿತ್ರ’ದಲ್ಲಿ ಸಲ್ಲಿಕೆಯಾಗಿವೆ. ಇವೆಲ್ಲವೂ ಸರಕಾರವು ಜಾರಿಗೆ ತಂದಿರುವ ರಚನಾತ್ಮಕ ಕೈಗಾರಿಕಾ ನೀತಿ ಮತ್ತಿತರ ರಚನಾತ್ಮಕ ಕ್ರಮಗಳಿಗೆ ಸಿಕ್ಕಿರುವ ಗೆಲುವಾಗಿದೆ. ನಾವು ಯಾವ ಯೋಜನೆಯನ್ನೂ ಕೇವಲ ಒಡಂಬಡಿಕೆಯ ಹಂತಕ್ಕಷ್ಟೇ ನಿಲ್ಲಿಸದೆ, ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುತ್ತಿದ್ದೇವೆ ಎಂದು ಅವರು ನುಡಿದಿದ್ದಾರೆ. ಇದನ್ನೂ ಓದಿ: ಸರ್ವ ಧರ್ಮಗ್ರಂಥಗಳ ಹೆಸರಲ್ಲಿ ರಾಜಕೀಯ ಮಾಡುವ ಬಿಜೆಪಿ ಸಂಸ್ಕೃತಿ ಕಲಿತಿಲ್ಲ: ಪ್ರಿಯಾಂಕ್‌ ಖರ್ಗೆ ವಾಗ್ದಾಳಿ

ತಯಾರಿಕಾ ವಲಯದಲ್ಲಿ ಹೆಸರು ಮಾಡಿರುವ ಸಿಫ್ಲೆಕ್ಸ್ ಕಂಪನಿಯು ಸೆಮಿಕಂಡಕ್ಟರ್ ಕ್ಷೇತ್ರದಲ್ಲಿ ಮುಖ್ಯವಾಗಿರುವ ಸಿಲಿಕಾನ್ ಬಿಡಿಭಾಗಗಳನ್ನು ತಯಾರಿಸುವ ಸ್ಥಾವರ ಸ್ಥಾಪನೆಗೆ 9,300 ಕೋಟಿ ರೂ, ಎಮ್ವೀ ಎನರ್ಜಿ ಕಂಪನಿಯು ಬೆಂಗಳೂರಿನ ಐಟಿಐಆರ್ ಪ್ರದೇಶದಲ್ಲಿ ಸೌರಕೋಶ ಮತ್ತು ಮಾಡ್ಯೂಲ್ ತಯಾರಿಕೆ ವಿಸ್ತರಣೆಗೆ 5,495 ಕೋಟಿ ರೂ, ಜಿಂದಾಲ್ ಸ್ಟೀಲ್ಸ್ ವಿಜಯನಗರದಲ್ಲಿ ಎಲೆಕ್ಟ್ರಿಕಲ್ ಸ್ಟೀಲ್ ಘಟಕ ಸ್ಥಾಪನೆಗೆ 7 ಸಾವಿರ ಕೋಟಿ ರೂ. ಹೂಡಿಕೆ ಮಾಡುವ ಪ್ರಸ್ತಾವನೆಗಳನ್ನು ಸಲ್ಲಿಸಿವೆ ಎಂದು ಪಾಟೀಲ ತಿಳಿಸಿದ್ದಾರೆ.,

ಮಿಕ್ಕಂತೆ ಸಿಮೆಂಟ್ ತಯಾರಿಕಾ ಘಟಕ ಸ್ಥಾಪನೆಗೆ ಅಲ್ಟ್ರಾ ಟೆಕ್ ಕಂಪನಿಯು ಕಲಬುರಗಿ ಜಿಲ್ಲೆಯಲ್ಲಿ 4,819 ಕೋಟಿ ರೂ, ದಾಲ್ಮಿಯಾ ಸಿಮೆಂಟ್ಸ್ ಬೆಳಗಾವಿಯ ಯಾದವಾಡದಲ್ಲಿ 3,000 ಕೋಟಿ ರೂ ಹಾಗೂ ವಿಸ್ತರಣೆಗೆ 3,020 ಕೋಟಿ ರೂ, ಮರುಬಳಕೆ ಇಂಧನ ಕ್ಷೇತ್ರದಲ್ಲಿ ಟಾಟಾ ಪವರ್ 8,134 ಕೋಟಿ ರೂ, ವೋಲ್ವೋ ತನ್ನ ಹೊಸಕೋಟೆ ಘಟಕದ ವಿಸ್ತರಣೆಗೆ 1,251 ಕೋಟಿ ರೂ, ವಿಜಯಪುರ ಜಿಲ್ಲೆಯಲ್ಲಿ ಸುಜ್ಲಾನ್ ಎನರ್ಜಿ ಲಿಮಿಟೆಡ್ 12,032 ಕೋಟಿ ರೂ, ಹ್ಯಾವೆಲ್ಸ್ ಇಂಡಿಯಾ ತನ್ನ ಉತ್ಪಾದನೆಯ ಹೆಚ್ಚಳ ಮತ್ತು ನೂತನ ಸಂಶೋಧನಾ ಮತ್ತು ಅಭಿವೃದ್ಧಿ ಕೇಂದ್ರ ಸ್ಥಾಪನೆಗೆ ತುಮಕೂರು ಜಿಲ್ಲೆಯಲ್ಲಿ 710 ಕೋಟಿ ರೂ, ಬಾಲಾಜಿ ವೇಫರ್ಸ್ 550 ಕೋಟಿ ರೂ, ಎಎಸ್ಎಂ ಟೆಕ್ನಾಲಜೀಸ್ 490 ಕೋಟಿ .ರೂ, ಹೂಡಿಕೆ ಮಾಡಲು ಕರ್ನಾಟಕ ಉದ್ಯೋಗ ಮಿತ್ರದಲ್ಲಿ ಪ್ರಸ್ತಾವನೆ ನೀಡಿವೆ ಎಂದು ಅವರು ಮಾಹಿತಿ ನೀಡಿದ್ದಾರೆ.

ವೈದ್ಯಕೀಯ ಮತ್ತು ಸ್ಯಾನಿಟರಿ ಸಾಧನಗಳನ್ನು ತಯಾರಿಸುವ ಟಿಜೆಡ್ಎಂಒ ಇಂಡಿಯಾ 58 ಕೋಟಿ ರೂ, ಎಚ್125 ಮಾದರಿಯ ಏರ್-ಬಸ್ ಗೆ ಬೇಕಾಗುವ ಬಿಡಿಭಾಗಗಳ ತಯಾರಿಕೆ ಟಿಎಎಸ್ಎಲ್ ಕೋಲಾರದ ವೇಮಗಲ್ ನಲ್ಲಿ 500 ಕೋಟಿ ರೂ, ಏವಿಯಾನಿಕ್ಸ್ ಮತ್ತು ರಕ್ಷಣಾ ಕ್ಷೇತ್ರದ ಸಾಧನಗಳ ತಯಾರಿಕೆಗೆ ಸಾಫ್ರಾನ್ ಎಲೆಕ್ಟ್ರಾನಿಕ್ಸ್ ಕಂಪನಿಯು 250 ಕೋಟಿ ರೂ. ಹೂಡುತ್ತಿವೆ ಎಂದು ಸಚಿವರು ಹೇಳಿದ್ದಾರೆ.

Share This Article