ಎಂಬಿಪಿ ಸಿಎಂ ಆಗ್ಲಿ: ಗೋವಾ ಬಿಜೆಪಿ ನಾಯಕ

Public TV
2 Min Read

-ಬಿಜೆಪಿ ನಾಯಕನಿಗೆ ಸಾಥ್ ನೀಡಿದ ಆರ್.ಶಂಕರ್
-ನಾನು ಸಿಎಂ ಆಗಬಾರದಾ? ಎಂಬಿಪಿ ಪ್ರಶ್ನೆ

ವಿಜಯಪುರ: ಇಂದು ತಿಕೋಟ ತಾಲೂಕಿನಲ್ಲಿ ನಡೆದ ದುರ್ಗಾದೇವಿ ಜಾತ್ರೆಯಲ್ಲಿ ಭಾಗಿಯಾಗಿದ್ದ ಗೋವಾ ಬಿಜೆಪಿ ಶಾಸಕ ಮೈಕಲ್ ಲೋಬೋ, ಮುಂದಿನ ದಿನಗಳಲ್ಲಿ ವಿಜಯಪುರ ಜಿಲ್ಲೆಯ ನಾಯಕ, ಗೃಹ ಸಚಿವರಾಗಿರುವ ಎಂ.ಬಿ.ಪಾಟೀಲ್ ಕರ್ನಾಟಕದ ಮುಖ್ಯಮಂತ್ರಿ ಆಗಲಿ ಎಂಬ ಇಂಗಿತವನ್ನು ಹೊರ ಹಾಕಿದರು.

ಜಾತ್ರೆಯ ಕಾರ್ಯಕ್ರಮದ ವೇದಿಕೆಯಲ್ಲಿ ಮಾತನಾಡಿದ ಮೈಕಲ್ ಲೋಬೋ, ಸಚಿವರು ಮತ್ತು ನಾನು ಒಳ್ಳೆಯ ಸ್ನೇಹಿತರಾಗಿದ್ದು, ರಾಜ್ಯ, ದೇಶದ ರಾಜಕಾರಣದಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದೆ. ಇವತ್ತು ಕಾಂಗ್ರೆಸ್ ನಲ್ಲಿದ್ದಾರೆ. ಮುಂದೆ ಎಲ್ಲಿ ಇರುತ್ತಾರೋ ಗೊತ್ತಿಲ್ಲ ಎಂದು ಹೇಳಿದರು.

ಮೈಕಲ್ ಲೋಬೋ ಅವರ ಬಳಿಕ ಮಾತನಾಡಿದ ಸಚಿವ ಆರ್.ಶಂಕರ್ ಸಹ ಎಂ.ಬಿ ಪಾಟೀಲ್ ಮುಖ್ಯಮಂತ್ರಿ ಆಗಲಿ ಎಂಬ ಇಚ್ಛೆಯನ್ನು ಹೊರ ಹಾಕಿದರು. ಪಾಟೀಲರು ಜಲಸಂಪನ್ಮೂಲ ಸಚಿವರಾಗಿದ್ದು ಬರಡು ಭೂಮಿಗೆ ನೀರು ಹರಿಸಿದ್ದಾರೆ. ಅಭಿವೃದ್ಧಿಪರ ಕೆಲಸಗಳಿಂದಲೇ ಕ್ಷೇತ್ರದಲ್ಲಿ ಬಹು ಮತಗಳ ಅಂತದರದಲ್ಲಿ ಗೆಲುವು ಕಾಣುತ್ತಾ ಬಂದಿದ್ದಾರೆ. ತಾಯಿ ದುರ್ಗಾದೇವಿಯ ಆಶೀರ್ವಾದ ಇದ್ದರೆ ಎಂ.ಬಿ.ಪಾಟೀಲರು ಸಹ ಮುಖ್ಯಮಂತ್ರಿ ಆಗಲಿ ಎಂದು ಆರ್.ಶಂಕರ್ ತಿಳಿಸಿದರು.

ಮೈಕಲ್ ಲೋಬೋ ಅವರ ಮಾತಿಗೆ ರಾಜಕೀಯ ಅರ್ಥ ಕಲ್ಪಿಸೋದು ಬೇಡ. ಪಕ್ಷಗಳು ಬೇರೆಯಾಗಿದ್ದರೂ, ನಾವಿಬ್ಬರು ಒಳ್ಳೆಯ ಸ್ನೇಹಿತರು. ಸ್ನೇಹದ ಪ್ರತೀಕವಾಗಿ ತನ್ನ ಗೆಳೆಯ ಸಿಎಂ ಆಗಲಿ ಎಂದು ಹಾರೈಸಿದ್ದಾರೆ. ಹಾಗಾದ್ರೆ ನೀವು ಮುಖ್ಯಮಂತ್ರಿ ಆಗ್ತೀರಾ ಪ್ರಶ್ನೆಗೆ ನಾನು ಸಿಎಂ ಆಗಬಾರದಾ ಎಂದರು. ಕ್ಷೇತ್ರ ಮತ್ತು ಕರ್ನಾಟಕದ ಜನತೆ ನಮಗೆ ಬಹುಮತ ನೀಡಿ ನಮ್ಮನ್ನು ಸ್ವಂತ ಬಲದಿಂದ ಸರ್ಕಾರ ರಚನೆ ಮಾಡಿದಾಗ ಸಿಎಂ ಆಗಲು ಸಾಧ್ಯ. ನಾವು, ನೀವೂ ಹೇಳಿದ ಮಾತ್ರಕ್ಕೆ ಯಾರು ಸಿಎಂ ಆಗಲ್ಲ. ಬಹುಮತ ಬಂದ ಮೇಲೆ ಎಲ್ಲ ಶಾಸಕರು ಮತ್ತು ಹೈಕಮಾಂಡ್ ಒಪ್ಪಿದರೆ ಮಾತ್ರ ಸಿಎಂ ಆಗಲು ಸಾಧ್ಯವಾಗಲಿದೆ ಎಂದು ಎಂ.ಬಿ.ಪಾಟೀಲರು ಸ್ಪಷ್ಟನೆ ನೀಡಿದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಮಾಜಿ ಸಚಿವ ವಿನಯ್ ಕುಲಕರ್ಣಿ ಮಾತನಾಡಿ, ಮೈತ್ರಿ ಸರ್ಕಾರ ಸುಭದ್ರವಾಗಿದ್ದು, ಇಬ್ಬರ ರಾಜೀನಾಮೆಯಿಂದ ಏನು ಆಗಲ್ಲ. ಪಕ್ಷದ ಮುಖಂಡರು ಮುಂದೆ ಏನು ಮಾಡಬೇಕು ಎಂಬುದರ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಿದ್ದಾರೆ. ಹೈಕಮಾಂಡ್, ಜನಾಶೀರ್ವಾದ, ಶಾಸಕರ ಬೆಂಬಲ ಸಿಕ್ಕರೆ ಎಂ.ಬಿ.ಪಾಟೀಲ್ ಮುಖ್ಯಮಂತ್ರಿಯಾಗಬಹುದು ಎಂದರು.

2018ರಲ್ಲಿ ಸಚಿವ ಸ್ಥಾನ ವಂಚಿತರಾಗಿದ್ದ ಎಂ.ಬಿ.ಪಾಟೀಲ್ ಇದೇ ಜಾತ್ರೆಯಲ್ಲಿ ಭಾಗವಹಿಸಿದ್ದ ವೇಳೆಯೂ ಮುಖ್ಯಮಂತ್ರಿ ಆಗುವ ಇಂಗಿತವನ್ನು ಹೊರ ಹಾಕಿದ್ದರು. ಅಂದು ಸ್ವ-ಕ್ಷೇತ್ರ ಗ್ರಾಮದ ಸೋಮದೇವರಹಟ್ಟಿ ದುರ್ಗಾದೇವಿ ಜಾತ್ರೆಯಲ್ಲಿ ಭಾಗಿಯಾಗಿದ್ದ ಎಂ.ಬಿ.ಪಾಟೀಲ್, ನಾನು ಸಚಿವನಾದರೂ, ಶಾಸಕನಾದರೂ ಯಾವಾಗಲೂ ಫವರ್ ಫುಲ್. ತಾಯಿ ದುರ್ಗಾದೇವಿಯ ಆಶೀರ್ವಾದ ನನ್ನ ಮೇಲಿದೆ. ತಾಯಿಯ ಕೃಪೆಯಿಂದ ಮುಂದಿನ ದಿನಗಳಲ್ಲಿ ಸಚಿವ ಸ್ಥಾನ ಸಿಗಲಿದೆ ಎಂಬ ಭರವಸೆ ವ್ಯಕ್ತಪಡಿಸಿದ್ದರು.

ನನಗೆ ಇನ್ನೂ 54 ವರ್ಷ ಆಗಿದೆ. ಮುಂದಿನ ದಿನಗಳಲ್ಲಿ ನನಗೂ ಮುಖ್ಯಮಂತ್ರಿ ಆಗುವ ಟೈಮ್ ಬರುತ್ತದೆ. ಸಿಎಂ ಆಗುವ ಆಸೆ ಸ್ವಾಭಾವಿಕ. ಆದ್ರೆ ನನಗೆ ದುರಾಸೆ ಇಲ್ಲ ಎಂದು ಮುಖ್ಯಮಂತ್ರಿ ಆಗುವ ಇಂಗಿತವನ್ನ ವ್ಯಕ್ತಪಡಿಸಿದರು. ಸದ್ಯ ದೇವಿ ಪರೀಕ್ಷೆ ನಡೆಸಿದ್ದಾಳೆ. ನನಗೆ ಎದುರಾಗಿರುವ ಪರೀಕ್ಷೆಯನ್ನು ದುರ್ಗಾದೇವಿಯೇ ಪಾರು ಮಾಡುತ್ತಾಳೆ. ಕಳೆದ ವರ್ಷದ ಜಾತ್ರೆಯಲ್ಲಿಯೂ ಎಂ.ಬಿ. ಪಾಟೀಲ್ ಸಿಎಂ ಆಗುವ ಇಂಗಿತ ವ್ಯಕ್ತಪಡಿಸಿದ್ದು, ಶುಕ್ರವಾರ ಅದೇ ಮಾತನ್ನು ಪುನರುಚ್ಚರಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *