ಅಸಮಾಧಾನಗೊಂಡ ಎಂಬಿ ಪಾಟೀಲ್‍ಗೆ ಹೈಕಮಾಂಡ್ ಖಡಕ್ ಸೂಚನೆ

Public TV
2 Min Read

ನವದೆಹಲಿ: ಸಮ್ಮಿಶ್ರ ಸರ್ಕಾರದಲ್ಲಿ ಸಚಿವ ಸ್ಥಾನ ಸಿಗದೇ ಅಸಮಾಧಾನಗೊಂಡಿದ್ದ ಎಂಬಿ ಪಾಟೀಲ್ ಅವರಿಗೆ ಹೈಕಮಾಂಡ್ ಖಡಕ್ ಸೂಚನೆ ನೀಡಿದೆ.

ಎಂಬಿ ಪಾಟೀಲ್ ಇಂದು ದೆಹಲಿಗೆ ತೆರಳಿ ಹೈಕಮಾಂಡ್ ಮುಂದೇ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ. ಆದರೆ ಪಾಟೀಲ್ ಅವರ ಮಾತು ಆಲಿಸಿದ ಹೈಕಮಾಂಡ್ ಸಧ್ಯ ಪಕ್ಷ ಸಂಕಷ್ಟದಲ್ಲಿರುವ ಕಾರಣ ಸಮ್ಮಿಶ್ರ ಸರ್ಕಾರಕ್ಕೆ ಬೆಂಬಲ ನೀಡಿ. ಡಿಸಿಎಂ ಸ್ಥಾನ ನೀಡಲು ಸಾಧ್ಯವಿಲ್ಲ. ಆದರೆ ಮುಂದೆ ಸೂಕ್ತ ಸ್ಥಾನಮಾನ ನೀಡುತ್ತೇವೆ ಎಂದು ಹೇಳಿದ್ದಾಗಿ ಖಚಿತ ಮೂಲಗಳು ತಿಳಿಸಿವೆ.

ಹೈಕಮಾಂಡ್ ಭೇಟಿ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಎಂಬಿ ಪಾಟೀಲ್ ತಾನು ಹೈಕಮಾಂಡ್ ಗೆ ನೀಡಬೇಕಾದ ಎಲ್ಲಾ ಮಾಹಿತಿಯನ್ನು ನೀಡಿದ್ದೇನೆ. ಅವರು ನನ್ನ ಮಾತನ್ನು ಆಲಿಸಿದ್ದಾರೆ. ಆದರೆ ತಾನು ಯಾವುದೇ ಸ್ಥಾನ ಬೇಡಿಕೆ ಇಟ್ಟಿಲ್ಲ ಎಂದು ತಿಳಿಸಿದರು.

ಇದೇ ವೇಳೆ ಬಿಜೆಪಿ ಪಕ್ಷದ ಯಾವುದೇ ನಾಯಕರು ತಮ್ಮನ್ನು ಸಂಪರ್ಕ ಮಾಡಿಲ್ಲ. ತಾನು ಯಾರ ನಾಯಕರನ್ನು ಸಂಪರ್ಕ ಮಾಡಿಲ್ಲ. ಪಕ್ಷದ ಯಾವುದೇ ವಿಚಾರವಾದರೂ ನಾಲ್ಕು ಗೋಡೆಗಳ ಮಧ್ಯೆ ಚರ್ಚೆ ನಡೆಸಲಾಗುತ್ತದೆ ಎಂದರು. ದೆಹಲಿಯಲ್ಲೂ ತಾವು ಸದ್ಯ ಒಬ್ಬೊಂಟಿ ಅಲ್ಲ ಎಂದು ಪುನರುಚ್ಚರಿಸಿದ ಎಂಬಿ ಪಾಟೀಲ್ ಅವರು, ತಮ್ಮ ಕಡೇ 20 ಶಾಸಕರು ಇದ್ದಾರೆ ಎಂದು ಹೇಳಿದರು.

ದೆಹಲಿಯಲ್ಲಿ ನಡೆದ ಬೆಳವಣಿಗೆ ಕುರಿತು ತಮ್ಮ ಶಾಸಕರೊಂದಿಗೆ ಚರ್ಚೆ ನಡೆಸಬೇಕಿದೆ. ಆ ಬಳಿಕ ಮುಂದಿನ ನಡೆಯ ಕುರಿತು ಯಾವ ನಿರ್ಧಾರ ಮಾಡಲಾಗಿದೆ ಎನ್ನುವುದನ್ನು ತಿಳಿಸುತ್ತೇನೆ. ನಮ್ಮದು ಬೇಡಿಕೆ ಏನು ಇರಲಿಲ್ಲ. ಸಮುದಾಯಗಳಿಗೆ ಸ್ಥಾನ ಮಾನ ಕೊಡುವ ಬಗ್ಗೆ ಚರ್ಚೆ ಮಾಡಲಾಯಿತು. ಆದರೆ ಚರ್ಚೆಯಾದ ಎಲ್ಲವೂ ಮಾಧ್ಯಮಗಳ ಮುಂದೆ ವಿವರಿಸಲು ಸಾಧ್ಯ ಇಲ್ಲ. ಮಲ್ಲಿಕಾರ್ಜುನ ಖರ್ಗೆಯಿಂದ ನನ್ನ ಸ್ಥಾನ ತಪ್ಪಿಲ್ಲ. ಪ್ರತ್ಯೇಕ ಲಿಂಗಾಯತ ಧರ್ಮ ವಿಚಾರವೂ ಕಾರಣವಲ್ಲ. ಸುಮ್ಮನೇ ಅಪ ಪ್ರಚಾರ ಮಾಡುವ ಕೆಲಸ ಮಾಡುತ್ತಿದ್ದಾರೆ. ಹೈಕಮಾಂಡ್ ನಮ್ಮ ಮಾತಿಗೆ ಸಕಾರಾತ್ಮಕ ಪ್ರತಿಕ್ರಿಯೆ ನೀಡಿದೆ ಎಂದರು.

ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಭೇಟಿಗೂ ಮುನ್ನ ಅಹ್ಮದ್ ಪಟೇಲ್ ಭೇಟಿ ಮಾಡಿದ ಪಾಟೀಲ್ ಅವರು ಸಚಿವ ಸಂಪುಟದಲ್ಲಿ ಕಡೆಗಣಿಸಿರುವ ಕುರಿತು ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. ಬಳಿಕ ಅಹ್ಮದ್ ಪಟೇಲ್ ಜೊತೆಯಲ್ಲಿ ರಾಹುಲ್ ನಿವಾಸಕ್ಕೆ ಆಗಮಿಸಿದ ಎಂಬಿ ಪಾಟೀಲ್ ಜೊತೆಗೆ ದಿನೇಶ್ ಗುಂಡೂರಾವ್ ಮತ್ತು ಕೃಷ್ಣ ಬೈರೇಗೌಡ ಕೂಡಾ ರಾಹುಲ್ ಗಾಂಧಿ ನಿವಾಸಕ್ಕೆ ಭೇಟಿ ನೀಡಿದರು. ಆದರೆ ಪಾಟೀಲ್ ಅವರು ಮಾಧ್ಯಮದೊಂದಿಗೆ ಮಾತನಾಡುವ ವೇಳೆ ಈ ಕುರಿತು ತಮಗೇ ಏನು ಸಂಬಂಧವಿಲ್ಲ ಎಂದು ಉತ್ತರಿಸಿದರು. ಸದ್ಯ ಹೈಕಮಾಂಡ್ ಉತ್ತರದಿಂದ ತೃಪ್ತಿಯಾದ ಎಂಬಿ ಪಾಟೀಲ್ ಅವರು ಮತ್ತೆ ಬೆಂಗಳೂರಿಗೆ ಹಿಂದಿರುಗಿದ್ದು, ಪಾಟೀಲ್ ಅವರ ಮುಂದಿನ ನಡೆ ಕುತೂಹಲ ಮೂಡಿಸಿದೆ.

https://www.youtube.com/watch?v=Q1BS4IKCQVo

Share This Article
Leave a Comment

Leave a Reply

Your email address will not be published. Required fields are marked *