Exclusive: ಮಾಸ್ತಿಗುಡಿ ದುರಂತಕ್ಕೆ ಸಿಎಂ ಸಿದ್ದರಾಮಯ್ಯ ಪರೋಕ್ಷ ಕಾರಣ?

Public TV
1 Min Read

ಪವಿತ್ರ ಕಡ್ತಲ
ಬೆಂಗಳೂರು: ಮಾಸ್ತಿಗುಡಿ ಚಿತ್ರದ ಕ್ಲೈಮ್ಯಾಕ್ಸ್ ದುರಂತಕ್ಕೆ ಸಿಎಂ ಸಿದ್ದರಾಮಯ್ಯ ಪರೋಕ್ಷ ಕಾರಣ ಎನ್ನುವ ಆರೋಪ ಈಗ ಕೇಳಿ ಬಂದಿದೆ.

ತಿಪ್ಪಗೊಂಡನಹಳ್ಳಿ ಜಲಾಶಯದಲ್ಲಿ ಹೆಲಿಕಾಪ್ಟರ್ ಬಳಸಿ ಶೂಟಿಂಗ್ ಮಾಡಲಿದ್ದಾರೆ ಎನ್ನುವ ವಿಚಾರ ಮೊದಲೇ ಜಲಮಂಡಳಿಯವರಿಗೆ ತಿಳಿದಿತ್ತು ಎನ್ನುವ ವಿಚಾರ ಈಗ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

ಪರೋಕ್ಷ ಕಾರಣ ಹೇಗೆ?
ತಿಪ್ಪಂಗೊಂಡನಹಳ್ಳಿ ಜಲಾಶಯದಲ್ಲಿ ಶೂಟಿಂಗ್ ನಡೆಸಲು ಅನುಮತಿ ನೀಡುವಂತೆ ಚಿತ್ರ ತಂಡ ಜಲಮಂಡಳಿಗೆ ಪತ್ರ ಬರೆದಿತ್ತು. ಹೆಲಿಕಾಪ್ಟರ್ ಬಳಸಿ ಶೂಟಿಂಗ್ ನಡೆಸಲು ಜಲಮಂಡಳಿ ಅನುಮತಿ ನೀಡಿರಲಿಲ್ಲ. ಅನುಮತಿ ಸಿಗದ ಹಿನ್ನೆಲೆಯಲ್ಲಿ ಚಿತ್ರತಂಡ ನೇರವಾಗಿ ಸಿಎಂ ಸಿದ್ದರಾಮಯ್ಯನವರ ಕಚೇರಿಯನ್ನು ಸಂಪರ್ಕಿಸಿದೆ. ಕೊನೆಗೆ ಸಿನಿಮಾ ಟೀಮ್ ಪ್ರಭಾವ ಬೀರಿ ಸಿಎಂ ಕಚೇರಿಯಿಂದಲೇ ಜಲಮಂಡಳಿಗೆ ಅನುಮತಿ ನೀಡುವಂತೆ ಆದೇಶ ಬರುವಂತೆ ಮಾಡುವಲ್ಲಿ ಯಶಸ್ವಿಯಾಗುತ್ತದೆ. ಇದರಿಂದಾಗಿ ಅನಿವಾರ್ಯ ವಾಗಿ ಜಲಮಂಡಳಿ ಅಧಿಕಾರಿಗಳು ಸಿಎಂ ಮಾತಿಗೆ ಮನ್ನಣೆ ಕೊಟ್ಟು ಶೂಟಿಂಗ್ ನಡೆಸಲು ಅನುಮತಿ ನೀಡಿದ್ದಾರೆ ಎನ್ನುವ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

ದುರಂತ ನಡೆದ ನಂತರ ಜಲಮಂಡಳಿ ಅನುಮತಿ ಪಡೆಯದೇ ಶೂಟಿಂಗ್ ನಡೆಸಲಾಗಿದೆ ಎನ್ನುವ ಸುದ್ದಿ ಮಾಧ್ಯಮಗಳಿಗೆ ಸಿಕ್ಕಿತ್ತು. ಆದರೆ ದೊಡ್ಡವರ ಪ್ರಭಾವ ಬಳಸಿ ಮಾಡಿದ ಚಿತ್ರೀಕರಣ ದೊಡ್ಡ ದುರಂತಕ್ಕೆ ಸಾಕ್ಷಿಯಾಯಿತು.

2014 ರಲ್ಲಿ ತಿಪ್ಪಗೊಂಡನಹಳ್ಳಿ ಜಲಾಶಯದಲ್ಲಿ ಮುಳುಗಿ ಐವರು ಮೃತಪಟ್ಟಿದ್ದರು. ಅಲ್ಲದೇ ಪ್ರತಿ ಭಾನವಾರ ಪಿಕ್‍ನಿಕ್‍ಗೆ ಬಂದು ಪ್ರವಾಸಿಗರು ಸಾವನ್ನಪ್ಪುತ್ತಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ಸರ್ಕಾರಕ್ಕೆ ಅರ್ಜಿ ಸಲ್ಲಿಸಿ ಪ್ರವೇಶ ನಿರ್ಬಂಧಕ್ಕೆ ಮನವಿ ಮಾಡಿದ್ದರು. ಸರ್ಕಾರ 2014 ರಿಂದಲೇ ತಿಪ್ಪಗೊಂಡನಹಳ್ಳಿ ಪ್ರದೇಶಕ್ಕೆ ನಿಷೇಧ ಹೇರಿತ್ತು. ಬಳಿಕ ಅನುಮತಿ ಇಲ್ಲದೆ ಕೆರೆ ಪ್ರವೇಶಿಸದಂತೆ ನಿಷೇಧ ಹೇರಲಾಗಿತ್ತು.

ಅಂದು ಏನಾಗಿತ್ತು:
ನವೆಂಬರ್ 7 ರಂದು ಮಧ್ಯಾಹ್ನದ ವೇಳೆ ಮಾಸ್ತಿಗುಡಿ ಚಿತ್ರದ ಶೂಟಿಂಗ್ ವೇಳೆ ಹೆಲಿಕಾಪ್ಟರ್‍ನಿಂದ ಖಳನಟರಾದ ಅನಿಲ್, ಉದಯ್ ಮತ್ತು ದುನಿಯಾ ವಿಜಯ್ ಕೆಳಗಡೆ ಜಿಗಿದಿದ್ದರು. ವಿಜಯ್ ಅವರನ್ನು ರಕ್ಷಣಾ ತಂಡ ರಕ್ಷಿಸಿದರೆ, ಅನಿಲ್ ಮತ್ತು ಉದಯ್ ನೀರಿನಲ್ಲಿ ಈಜಲಾಗದೇ ಮುಳುಗಿ ಸಾವನ್ನಪ್ಪಿದ್ದರು.

Share This Article
Leave a Comment

Leave a Reply

Your email address will not be published. Required fields are marked *