ಅನಂತದಲ್ಲಿ ಮಾಸ್ಟರ್ ಹಿರಣ್ಣಯ್ಯ ಲೀನ

Public TV
1 Min Read

ಬೆಂಗಳೂರು: ಹಿರಿಯ ರಂಗಕರ್ಮಿ, ಚತುರ ಮಾತುಗಾರ ಮಾಸ್ಟರ್ ಹಿರಣ್ಣಯ್ಯ(85) ಅವರ ಅಂತ್ಯ ಸಂಸ್ಕಾರವು ಬ್ರಾಹ್ಮಣ ಸಂಪ್ರದಾಯದಂತೆ ಬನಶಂಕರಿ ವಿದ್ಯುತ್ ಚಿತಾಗಾರದಲ್ಲಿ ಇಂದು ನೆರವೇರಿತು.

ಹಿರಣ್ಣಯ್ಯ ಅವರ ಪುತ್ರರಾದ ಬಾಬು ಹಿರಣ್ಣಯ್ಯ, ಶ್ರೀಕಾಂತ್ ಹಿರಣ್ಣಯ್ಯ ಮತ್ತು ಗುರುನಾಥ್ ಹಿರಣ್ಣಯ್ಯ ಅವರು ಅಂತಿಮ ವಿಧಿವಿಧಾನಗಳನ್ನು ನೆರವೇರಿಸಿದರು. ಕುಟುಂಬಸ್ಥರು ಹಾಗೂ ಹಿರಣ್ಣಯ್ಯ ಅವರ ಕೆಲ ಆಪ್ತರ ಉಪಸ್ಥಿತಿಯಲ್ಲಿ ಅಂತಿಮ ವಿಧಿವಿಧಾನ ನಡೆಯಿತು.

ವಯೋಸಹಜ ಸಮಸ್ಯೆಯಿಂದ ಬಳಲುತ್ತಿದ್ದ ಹಿರಣ್ಣಯ್ಯನವರಿಗೆ ಅನಾರೋಗ್ಯ ಕಾಣಿಸಿಕೊಂಡಿದ್ದರಿಂದ ಬಿಜಿಎಸ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದರು. ಬನಶಂಕರಿಯ ತಮ್ಮ ನಿವಾಸದಲ್ಲಿ ಇಂದು ಬೆಳಗ್ಗೆ ಸುಮಾರು 9.30ರ ಹೊತ್ತಿಗೆ ಕೊನೆಯುಸಿರೆಳೆದರು.

ಹಿರಣಯ್ಯ ಅವರ ನಿಧನ ಸುದ್ದಿ ತಿಳಿಯುತ್ತಿದ್ದಂತೆಯೇ ರಂಗಭೂಮಿ, ಸಿನಿಮಾ, ರಾಜಕೀಯ ನಾಯಕರು, ಹಿರಣ್ಣಯ್ಯ ನಿವಾಸಕ್ಕೆ ತೆರಳಿ ಅಂತಿಮ ನಮನ ಸಲ್ಲಿಸಿದರು. ಅವರ ನಿಧನಕ್ಕೆ ಕುಟುಂಬಸ್ಥರು, ಗಣ್ಯರು, ಆಪ್ತರು ಹಾಗೂ ಕನ್ನಡ ಚಿತ್ರರಂಗ ಸಂತಾಪ ವ್ಯಕ್ತಪಡಿಸಿದೆ.

ಕರ್ನಾಟಕದ ರಾಜಕಾರಣಿಗಳನ್ನು ಮಾತಿನ ಮೂಲಕವೇ ಹಿರಣಯ್ಯ ಅವರು ತಿವಿಯುತ್ತಿದ್ದರು. ರಾಜ್ಯೋತ್ಸವ, ನಾಟಕ ಅಕಾಡೆಮಿ, ರಂಗಭೂಮಿ ಪ್ರಶಸ್ತಿ, ಗುಬ್ಬಿ ವೀರಣ್ಣ ಪ್ರಶಸ್ತಿ, ನವರತ್ನ ರಾಂ ಪ್ರಶಸ್ತಿ ಜೊತೆಗೆ ಕಲಾಗಜ ಸಿಂಹ ಬಿರುದು ಜೊತೆಗೆ ನಟ ರತ್ನಾಕರ ಬಿರುದು ಹಿರಣ್ಣಯ್ಯನವರಿಗೆ ಲಭಿಸಿತ್ತು.

ಹಿರಣ್ಣಯ್ಯ ಅಗಲಿಕೆ ರಾಜಕಾರಣಿಗಳು ಸಹ ಕಂಬನಿ ಮಿಡಿದಿದ್ದಾರೆ. ರಂಗಭೂಮಿಗೆ ತುಂಬಲಾರದ ನಷ್ಟ ಎಂದ ರಾಜಕಾರಣಿಗಳು, ರಾಜಕಾರಣದ ಹುಳುಕುಗಳನ್ನು ವಿಡಂಬಿಸಿ ಹೇಳುತ್ತಿದ್ದ ಅವರ ಶೈಲಿ ಮನಮುಟ್ಟುವಂತ್ತಿತ್ತು ಅಂತ ನಾಯಕರು ಸ್ಮರಿಸಿಕೊಂಡಿದ್ದಾರೆ. ಪ್ರಕೃತಿ ಚಿಕಿತ್ಸೆಯಲ್ಲಿರುವ ಸಿಎಂ ಕುಮಾರಸ್ವಾಮಿ ಹಾಗೂ ಮಾಜಿ ಪಿಎಂ ದೇವೇಗೌಡರು ಟ್ವಿಟ್ಟರ್‍ನಲ್ಲಿ ಸಂತಾಪ ಸೂಚಿಸಿದರು.

ಕನ್ನಡ ಸಿನಿಮಾದಲ್ಲಿ ಡಾ.ರಾಜ್‍ಕುಮಾರ್ ಎಷ್ಟು ಜನಪ್ರಿಯರೋ ರಂಗಭೂಮಿಯಲ್ಲಿ ಅಷ್ಟೇ ಹೆಸರು ಮಾಡಿದ್ದವರು ಮಾಸ್ಟರ್ ಹಿರಣ್ಣಯ್ಯ. ರಂಗಭೂಮಿಯ ದೈತ್ಯ ಅಂತಲೇ ಹೆಸರಾಗಿದ್ದ ಹಿರಣ್ಣಯ್ಯ, ಸಮಾಜದ ಹುಳುಕನ್ನು ವಿಡಂಬನಾತ್ಮಕವಾಗಿ ವಿಶ್ಲೇಷಿಸುವ ಮೂಲಕ ಟೀಕೆ-ಟಿಪ್ಪಣಿ ಮೂಲಕವೇ ಬದುಕನ್ನು ಕಟ್ಟಿಕೊಂಡವರು. ಸರ್ಕಾರವೇ ಆಗಲಿ, ರಾಜಕಾರಣಿಯೇ ಆಗಲಿ, ವ್ಯಕ್ತಿಯೇ ಆಗಲಿ, ವೇದಿಕೆಯಲ್ಲೇ ಟೀಕಿಸುತ್ತಿದ್ದರು.

https://www.youtube.com/watch?v=ac2yUL65-10

Share This Article
Leave a Comment

Leave a Reply

Your email address will not be published. Required fields are marked *