ರಾಜ್ಯದ ಹಲವೆಡೆ ಲೋಕಾಯುಕ್ತ ಅಧಿಕಾರಿಗಳ ಭರ್ಜರಿ ಬೇಟೆ

2 Min Read

ಬೆಂಗಳೂರು: ರಾಜ್ಯದ ಹಲವೆಡೆ ಲೋಕಾಯುಕ್ತ ಅಧಿಕಾರಿಗಳು ಭರ್ಜರಿ ಬೇಟೆ ನಡೆಸಿದ್ದಾರೆ. ಬೆಂಗಳೂರಿನಲ್ಲಿ ಲಂಚ ಪಡೆಯುವಾಗಲೇ ಪೊಲೀಸ್ ಇನ್ಸ್ಪೆಕ್ಟರ್ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಿದ್ದಾರೆ.

ಗುರುವಾರ (ಜ.29) ಬೆಂಗಳೂರಿನ ಕೆ.ಪಿ. ಅಗ್ರಹಾರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಗೋವಿಂದರಾಜು 4 ಲಕ್ಷ ರೂ. ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಚೀಟಿ ವ್ಯವಹಾರಕ್ಕೆ ಸಂಬಂಧಿಸಿದ ಪ್ರಕರಣವೊಂದರಲ್ಲಿ ವ್ಯಕ್ತಿಯೊಬ್ಬರನ್ನು ಕೇಸ್‌ನಲ್ಲಿ ಸಿಕ್ಕಿಸುವುದಾಗಿ ಬೆದರಿಸಿ ಇನ್ಸ್‌ಪೆಕ್ಟರ್‌ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಇದನ್ನೂ ಓದಿ:ಕೇಂದ್ರ ಬಜೆಟ್‌ ಹೊತ್ತಲ್ಲೇ ಸಿಎಂ ʻಜಸ್ಟೀಸ್ ಫಾರ್ ಕರ್ನಾಟಕʼ ಅಭಿಯಾನ ಶುರು

ಒಟ್ಟು 5 ಲಕ್ಷ ರೂ. ಲಂಚಕ್ಕೆ ಬೇಡಿಕೆ ಇಡಲಾಗಿತ್ತು. ಇದರಲ್ಲಿ 1 ಲಕ್ಷ ರೂ. ಈಗಾಗಲೇ ಪಡೆದುಕೊಂಡಿದ್ದ ಇನ್ಸ್ಪೆಕ್ಟರ್, ಉಳಿದ 4 ಲಕ್ಷ ರೂ. ಸ್ವೀಕರಿಸುವಾಗ ಟ್ರ‍್ಯಾಪ್ ಆಗಿದ್ದಾರೆ. ಮೈಸೂರು ರಸ್ತೆಯ ಸಿಎಆರ್ ಗ್ರೌಂಡ್ ಬಳಿ ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ಅಧಿಕಾರಿಗಳು ದಿಢೀರ್ ದಾಳಿ ನಡೆಸಿ ವಶಕ್ಕೆ ಪಡೆದಿದ್ದಾರೆ. ಲೋಕಾಯುಕ್ತ ದಾಳಿ ವೇಳೆ ಇನ್ಸ್ಪೆಕ್ಟರ್ ಗೋವಿಂದರಾಜು ಭಾರಿ ಹೈಡ್ರಾಮಾ ಮಾಡಿ ಕೂಗಾಟ ನಡೆಸಿದ್ದಾರೆ. ಇನ್ಸ್‌ಪೆಕ್ಟರ್‌ ಗೋವಿಂದರಾಜು ವಿರುದ್ಧ ತನಿಖೆ ಮುಂದುವರಿದಿದೆ.

ಇತ್ತ ಕೋಲಾರ, ಕೊಪ್ಪಳದಲ್ಲೂ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ರು. ವಾಲ್ಮೀಕಿ ನಿಗಮದ ಹಗರಣದಲ್ಲಿ ಸುದ್ದಿಯಾಗಿದ್ದ ಕೊಪ್ಪಳ ವೈದ್ಯಕೀಯ ವಿಜ್ಞಾನ ಸಂಸ್ಥೆ ಆಡಳಿತಾಧಿಕಾರಿ ಬಿ.ಕಲ್ಲೇಶ್ ಅವರ ಮನೆ, ಕಾಲೇಜು ಸೇರಿದಂತೆ ಆರು ಕಡೆ ಲೋಕಾಯುಕ್ತ ದಾಳಿ ನಡೆಸಿದ್ದರು. ಇತ್ತ ಕೋಲಾರದ ನಗರಸಭೆ ಮೇಲೂ ಅಧಿಕಾರಿಗಳು ದಾಳಿ ನಡೆಸಿ, ಮಹತ್ವದ ದಾಖಲೆ ವಶಕ್ಕೆ ಪಡೆದುಕೊಂಡಿದ್ದಾರೆ

ಇನ್ನೂ ಕೊಪ್ಪಳ ಜಿಲ್ಲೆಯ ಸುತ್ತಲಿನ ವಿಜಯನಗರ,‌ ಗದಗ, ಧಾರವಾಡ,‌ ರಾಯಚೂರು, ಹಾವೇರಿ ಹಾಗೂ ಕೊಪ್ಪಳ ಜಿಲ್ಲೆ ಸೇರಿ ಒಟ್ಟು 30ಕ್ಕೂ ಹೆಚ್ಚು ಲೋಕಾಯುಕ್ತ ಅಧಿಕಾರಿಗಳು ಏಕ ಕಾಲಕ್ಕೆ ದಾಳಿ ಮಾಡಿದ್ದಾರೆ. ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆವರೆಗೆ ನಿರಂತರವಾಗಿ 12 ಗಂಟೆ ತನಿಖೆ ನಡೆದಿದೆ. ದಾಳಿ ವೇಳೆ ಅಪಾರ ಪ್ರಮಾಣದ ಹಣ, ಆಸ್ತಿ ಲಭ್ಯವಾಗಿದೆ ಎಂದು ಮೂಲಗಳು ತಿಳಿಸಿವೆ..ಇದನ್ನೂ ಓದಿ: ಕರ್ನಾಟಕದ ಎಲ್ಲ ದೇವಾಲಯಗಳಲ್ಲಿ ಹಿಂದೂಯೇತರರ ಪ್ರವೇಶ ನಿಷೇಧಿಸಲಿ – ಧಾರ್ಮಿಕ ದತ್ತಿ ಇಲಾಖೆಗೆ ಮಂದಿರ ಮಹಾಸಂಘ ಆಗ್ರಹ

Share This Article