ಸಿಎನ್‌ಜಿ ಟ್ಯಾಂಕರ್‌ ನಡುವೆ ಡಿಕ್ಕಿ – ಧಗಧಗಿಸಿದ ಅಗ್ನಿ ಜ್ವಾಲೆ, ನಾಲ್ವರು ಸಜೀವ ದಹನ

Public TV
1 Min Read

ಜೈಪುರ: ರಾಜಸ್ಥಾನ ಜೈಪುರದ ಭಂಕ್ರೋಟಾ ಪ್ರದೇಶದ ಪೆಟ್ರೋಲ್ ಪಂಪ್‌ನಲ್ಲಿ ಭೀಕರ ಅಪಘಾತ ಸಂಭವಿಸಿದೆ. ಎರಡು ಸಿಎನ್‌ಜಿ ಟ್ಯಾಂಕರ್‌ಗಳು ಪರಸ್ಪರ ಡಿಕ್ಕಿ ಹೊಡೆದ ಪರಿಣಾಮ ಪಂಪ್‌ನಲ್ಲಿ ಭಾರೀ ಬೆಂಕಿ ಕಾಣಿಸಿಕೊಂಡಿದೆ. ಹಲವು ವಾಹನಗಳಿಗೆ ಏಕಾಏಕಿ ಬೆಂಕಿ ಹೊತ್ತಿಕೊಂಡಿದೆ, ಈ ವೇಳೆ ನಾಲ್ವರು ಸಜೀವ ದಹನವಾಗಿದ್ದಾರೆ.

ಶುಕ್ರವಾರ (ಇಂದು) ಮುಂಜಾನೆ 5:30ರ ಸುಮಾರಿಗೆ ಅಜ್ಮೀರ್‌ ರಸ್ತೆಯಲ್ಲಿ ಘಟನೆ ನಡೆದಿದೆ. ಟ್ರಕ್‌ ಇತರ ವಾಹನಗಳಿಗೆ ಡಿಕ್ಕಿ ಹೊಡೆದ ನಂತರ ಪೆಟ್ರೋಲ್‌ ಪಂಪ್‌ ಬಳಿ ನಿಲ್ಲಿಸಿದ್ದ ಸಿಎನ್‌ಜಿ ಟ್ಯಾಂಕರ್‌ಗೂ ಬೆಂಕಿ ಹೊತ್ತಿಕೊಂಡಿದೆ. ನಾಲ್ವರು ಸಜೀವ ದಹನವಾಗಿದ್ದಾರೆ. ಸುಮಾರು 15 ಮಂದಿಗೆ ಸುಟ್ಟ ಗಾಯಗಳಾಗಿವೆ. ಅಪಘಾತದಲ್ಲಿ ಗಾಯಗೊಂಡವರನ್ನು ಸವಾಯಿ ಮಾನ್ಸಿಂಗ್ ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗಕ್ಕೆ ದಾಖಲು ಮಾಡಲಾಗಿದೆ. ಅಧಿಕಾರಿಗಳ ಪ್ರಕಾರ ಇನ್ನೂ ಹಲವಾರು ಮಂದಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.

ಸದ್ಯ ಪೊಲೀಸರು ಹಾಗೂ ರಕ್ಷಣಾ ತಂಡಗಳು ಸ್ಥಳಕ್ಕೆ ದೌಡಾಯಿಸಿದ್ದು, ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿವೆ. 20ಕ್ಕೂ ಹೆಚ್ಚು ಅಗ್ನಿಶಾಮಕ ಸಿಬ್ಬಂದಿ ಸ್ಥಳದಲ್ಲೇ ಬೆಂಕಿ ನಿಯಂತ್ರಿಸಲು ಹರಸಾಹಸ ಪಡುತ್ತಿದ್ದಾರೆ. ಸುರಕ್ಷತೆ ದೃಷ್ಟಿಯಿಂದ ಸಮೀಪದ ಮಾರ್ಗವನ್ನು ಬೇರೆಡೆಗೆ ತಿರುಗಿಸಲಾಗಿದೆ. ಅಪಘಾತದ ವೀಡಿಯೋಗಳು ಸೋಷಿಯಲ್‌ ಮೀಡಿಯಾದಲ್ಲಿ ಸದ್ದು ಮಾಡುತ್ತಿವೆ.

ಪ್ರಾಥಮಿಕ ಮಾಹಿತಿಯ ಪ್ರಕಾರ, ಇತರ ವಾಹನಗಳಿಗೆ ಡಿಕ್ಕಿ ಹೊಡೆದ ಟ್ರಕ್‌ನಲ್ಲಿ ರಾಸಾಯನಿಕ ತುಂಬಿತ್ತು. ಟ್ರಕ್‌ ಡಿಕ್ಕಿ ಹೊಡೆಯುತ್ತಿದ್ದಂತೆ ಬೆಂಕಿ ಹೊತ್ತಿ, ಇತರ ವಾಹನಗಳಿಗೂ ವ್ಯಾಪಿಸಿದೆ. ಎಷ್ಟು ವಾಹನಗಳಿಗೆ ಬೆಂಕಿ ಹೊತ್ತಿಕೊಂಡಿದೆ ಎಂದು ಸದ್ಯಕ್ಕೆ ಖಚಿತ ಮಾಹಿತಿ ಇಲ್ಲ. ಸಂತ್ರಸ್ತರನ್ನು ಭೇಟಿ ಮಾಡಲು ರಾಜಸ್ಥಾನ ಮುಖ್ಯಮಂತ್ರಿ ಭಜನ್ ಲಾಲ್ ಶರ್ಮಾ ಕೂಡ ಆಸ್ಪತ್ರೆಗೆ ಧಾವಿಸಿದ್ದಾರೆ.

Share This Article