ಉತ್ತರಕಾಶಿಯಲ್ಲಿ ಭೀಕರ ಮೇಘಸ್ಫೋಟ – ಸಾವಿನ ಸಂಖ್ಯೆ 4ಕ್ಕೆ ಏರಿಕೆ

Public TV
1 Min Read

– 60ಕ್ಕೂ ಅಧಿಕ ಮಂದಿ ನಾಪತ್ತೆ

ಡೆಹ್ರಾಡೂನ್: ಉತ್ತರಾಖಂಡದ (Uttarakhand) ಉತ್ತರಕಾಶಿಯ (Uttarakashi) ಧರಾಲಿಯಲ್ಲಿ ಸಂಭವಿಸಿದ ಭೀಕರ ಮೇಘಸ್ಫೋಟದಿಂದಾಗಿ ನಾಲ್ಕು ಜನರು ಸಾವನ್ನಪ್ಪಿದ್ದು, 60ಕ್ಕೂ ಅಧಿಕ ಮಂದಿ ಜಲಪ್ರಳಯದಲ್ಲಿ ಕೊಚ್ಚಿ ಹೋಗಿ ನಾಪತ್ತೆಯಾಗಿರುವುದಾಗಿ ಮೂಲಗಳು ತಿಳಿಸಿವೆ.

ಖೀರ್ ಗಂಗಾ ನದಿಯ ರೌದ್ರಾವತಾರಕ್ಕೆ ಇಡೀ ಊರಿಗೇ ಊರೇ ಸರ್ವನಾಶವಾಗಿದೆ. ಬೆಟ್ಟದ ಮೇಲಿಂದ ಏಕಾಏಕಿ ನೀರು ಹರಿದು ಬಂದಿದ್ದು, ಗ್ರಾಮವೇ ಕೊಚ್ಚಿಕೊಂಡು ಹೋಗಿದೆ. ಪರಿಣಾಮ 4 ಜನರು ಸಾವನ್ನಪ್ಪಿದ್ದು, ಪ್ರವಾಸಿಗರು, ಅಲ್ಲಿನ ಸ್ಥಳೀಯರು ಸೇರಿದಂತೆ 60ಕ್ಕೂ ಹೆಚ್ಚು ಮಂದಿ ಜಲಪ್ರಳಯದಲ್ಲಿ ಕೊಚ್ಚಿ ಹೋಗಿದ್ದಾರೆ.ಇದನ್ನೂ ಓದಿ: ಹೆಚ್‌ಡಿಕೆ ವಿರುದ್ಧ ಸರ್ಕಾರಿ ಜಮೀನು ಒತ್ತುವರಿ ಆರೋಪ – ಆ.28ಕ್ಕೆ ವಿಚಾರಣೆ ಮುಂದೂಡಿಕೆ

ಸದ್ಯ ಸ್ಥಳದಲ್ಲಿ ಉತ್ತರ ಕಾಶಿ ಪೊಲೀಸ್, ರಾಜ್ಯ ವಿಪತ್ತು ನಿರ್ವಹಣಾ ತಂಡ (ಎಸ್‌ಡಿಆರ್‌ಎಫ್), ಎನ್‌ಡಿಆರ್‌ಎಫ್, ಭಾರತೀಯ ಸೇನೆ ಮತ್ತು ಇಂಡೋ- ಟಿಬೆಟನ್ ಬಾರ್ಡರ್ ಫೋರ್ಸ್ ತಂಡಗಳಿಂದ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿವೆ. ಜೊತೆಗೆ 15 ರಿಂದ 20 ಮಂದಿಯನ್ನು ಈಗಾಗಲೇ ರಕ್ಷಣೆ ಮಾಡಲಾಗಿದೆ. ಈ ಸಂಬಂಧ ಪ್ರಧಾನಿ ಮೋದಿ ಉತ್ತರಾಖಂಡ ಸಿಎಂ ಪುಷ್ಕರ್ ಸಿಂಗ್ ಧಾಮಿ ಅವರ ಮಾತುಕತೆ ನಡೆಸಿದ್ದು, ದುರಂತದ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ.

ನೀರಿನ ಪ್ರವಾಹದಿಂದ ಹೋಟೆಲ್‌ಗಳು, ಹೋಂ ಸ್ಟೇಗಳು, ಧರಾಲಿಯಲ್ಲಿನ ಕಟ್ಟಡಗಳು, ಮನೆಗಳು ಕೊಚ್ಚಿ ಹೋಗಿವೆ. ದುರಂತದಿಂದಾಗಿ ರಾಜ್ಯ, ರಾಷ್ಟ್ರೀಯ ಹೆದ್ದಾರಿಗಳ ಭೂಕುಸಿತವಾಗಿದ್ದು, ರಸ್ತೆ ಸಂಪರ್ಕ ಬಂದ್ ಆಗಿದೆ. ಜೊತೆಗೆ ಚಾರ್‌ಧಾಮ್ ಯಾತ್ರೆ ತಾತ್ಕಾಲಿಕ ಸ್ಥಗಿತಗೊಂಡಿದೆ.

ಮೇಘಸ್ಫೋಟದ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಜಲಪ್ರಳಯದ ಭಯಾನಕತೆಯನ್ನು ಬಿಚ್ಚಿಟ್ಟಿದೆ. ಬೆಟ್ಟದ ಮೇಲಿನಿಂದ ಏಕಾಏಕಿ ನದಿಯಂತೆ ನೀರು ಹರಿದು ಬಂದು ಇಡೀ ಗ್ರಾಮವನ್ನೇ ಕೊಚ್ಚಿಕೊಂಡು ಹೋಗಿದೆ. ಪ್ರವಾಹದಲ್ಲಿ ಅನೇಕ ಮನೆಗಳು ಸರ್ವನಾಶವಾಗಿದ್ದು, ವಾಹನಗಳು ಹಾಗೂ ಅಂಗಡಿಗಳು ಸಹ ಧ್ವಂಸವಾಗಿದೆ. ಈ ಭೀಕರ ಪ್ರವಾಹದ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಎದೆ ಝಲ್ ಎನ್ನಿಸುವಂತಿದೆ. ಏಕಾಏಕಿ ಜಲಪ್ರಳಯ ಉಂಟಾದ ಪರಿಣಾಮ ಜನರು ಕಿರುಚಾಡುತ್ತಿರುವುದು ವೀಡಿಯೋದಲ್ಲಿ ಸೆರೆಯಾಗಿದೆ.ಇದನ್ನೂ ಓದಿ: ಬಾಗಲಕೋಟೆ | ಬಡ ವಿದ್ಯಾರ್ಥಿನಿಯ ಶಿಕ್ಷಣಕ್ಕೆ ಕ್ರಿಕೆಟಿಗ ರಿಷಭ್‌ ಪಂತ್ ಆರ್ಥಿಕ ನೆರವು

 

Share This Article