ರೋಹಿಂಗ್ಯಾ ಮುಸ್ಲಿಂ ಉಗ್ರರಿಂದ 28 ಹಿಂದೂಗಳ ಮಾರಣಹೋಮ

Public TV
1 Min Read

ಯಂಗೂನ್: ರೋಹಿಂಗ್ಯಾ ಮುಸ್ಲಿಂ ಉಗ್ರಗಾಮಿಗಳು ರಾಖಿನೆ ರಾಜ್ಯದಲ್ಲಿ 28 ಹಿಂದೂಗಳನ್ನು ಹತ್ಯೆ ಮಾಡಿದ್ದಾರೆ ಎಂದು ಮ್ಯಾನ್ಮರ್ ಆರ್ಮಿ ಅಧಿಕಾರಿಗಳು ಹೇಳಿದ್ದಾರೆ.

ಅರಾಕನ್ ರೋಹಿಂಗ್ಯಾ ಸಾಲ್ವೇಶನ್ ಆರ್ಮಿ (ಎಆರ್‍ಎಸ್‍ಎ) ಉಗ್ರಗಾಮಿಗಳು 28 ಹಿಂದೂಗಳನ್ನು ಕ್ರೂರವಾಗಿ ಹತ್ಯೆ ಮಾಡಿದ್ದಾರೆ ಎಂದು ಮ್ಯಾನ್ಮರ್ ಸೇನೆಯ ಮುಖ್ಯಸ್ಥರು ವೆಬ್‍ಸೈಟ್ ಮೂಲಕ ಹೇಳಿಕೆಯನ್ನು ಬಿಡುಗಡೆ ಮಾಡಿದ್ದಾರೆ.

ಉಗ್ರರು 20 ಮಹಿಳೆಯರು, 8 ಪುರುಷರು ಹಾಗೂ 10 ವರ್ಷಕ್ಕಿಂತ ಕೆಳಗಿನ 6 ಮಕ್ಕಳನ್ನು ಹತ್ಯೆ ಮಾಡಿದ ಬಳಿಕ ಶವಗಳನ್ನು ಗುಂಡಿ ತೋಡಿ ಹೂಳಿದ್ದಾರೆ ಎಂದು ಮ್ಯಾನ್ಮಾರ್ ಸೇನೆ ತಿಳಿಸಿದೆ.

ಈ ಹತ್ಯೆ ಹಿಂದೂ ಹಾಗೂ ಮುಸ್ಲಿಂ ಸಮುದಾಯಗಳು ನೆಲೆಸಿರುವ ರಾಖೈನ್ ಖಾ ಮಾಂಗ್ ಸೆಯ್ಕ್ ಎಂಬ ಹಳ್ಳಿಯಲ್ಲಿ ನಡೆದಿದ್ದು, ಯೆ ಬಾವ್ ಕ್ಯಾ ಎಂಬ ಸ್ಥಳದಲ್ಲಿ ದೇಹಗಳು ದೊರೆತಿದೆ ಎಂದು ಸೇನೆಯ ಹಿರಿಯ ಅಧಿಕಾರಿ ತಿಳಿಸಿದ್ದಾರೆ.

ಆಗಸ್ಟ್ 25 ರಂದು ರೋಹಿಂಗ್ಯಾ ಮುಸ್ಲಿಂ ಉಗ್ರಗಾಮಿಗಳು ದಾರಿಯಲ್ಲಿ ಕಾಣಿಸಿಕೊಳ್ಳುವ ಪ್ರತಿಯೊಬ್ಬರನ್ನು ಮನಸ್ಸಿಗೆ ಬಂದಂತೆ ಕೊಲ್ಲುತ್ತಾ ಮುಂದೆ ಸಾಗಿದರು. ಅಷ್ಟೇ ಅಲ್ಲದೇ ಕೆಲ ಜನರನ್ನು ಸ್ಥಳೀಯ ಅರಣ್ಯ ಪ್ರದೇಶಕ್ಕೆ ಬಲವಂತವಾಗಿ ಕರೆದುಕೊಂಡು ಹೋಗಿದ್ದಾರೆ ಎಂದು ಪ್ರತ್ಯಕ್ಷದರ್ಶಿ ವ್ಯಕ್ತಿಗಳು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.

ಎಆರ್‍ಎಸ್‍ಎ ಉಗ್ರಗಾಮಿ ಸಂಘಟನೆಗೆ ಸೇರಿದ ಸದಸ್ಯರು ಮ್ಯಾನ್ಮಾರ್ ಸೈನಿಕರ ಮೇಲೆ ದಾಳಿ ನಡೆಸಿದ್ದರು. ಈ ದಾಳಿಯ ನಂತರ ಮ್ಯಾನ್ಮಾರ್ ಸೇನೆ ರೋಹಿಂಗ್ಯಾ ಮುಸ್ಲಿಮರ ದಾಳಿ ನಡೆಸಿತ್ತು. ಮ್ಯಾನ್ಮಾರ್ ಸೇನೆಯ ಹಿಂಸಾಚಾರಕ್ಕೆ ಬೆದರಿ ಸುಮಾರು 4 ಲಕ್ಷಕ್ಕೂ ಅಧಿಕ ರೋಹಿಂಗ್ಯಾ ಮುಸ್ಲಿಮರು ಬಾಂಗ್ಲಾ ದೇಶಕ್ಕೆ ವಲಸೆ ಹೋಗಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಮ್ಯಾನ್ಮಾರ್ ಸೇನೆಯ ದಬ್ಬಾಳಿಕೆಯನ್ನು ವಿಶ್ವಸಂಸ್ಥೆ ಖಂಡಿಸಿತ್ತು.

Share This Article
Leave a Comment

Leave a Reply

Your email address will not be published. Required fields are marked *